ಕಾರವಾರ(ಜೂ. 11)  ಪ್ರಿಯಕರ ನಿರ್ಲಕ್ಷ್ಯ ಮಾಡಿದ ಕಾರಣಕ್ಕೆ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ  ತಾಲೂಕಿನ ದಾಸಗದ್ದೆಯ ಪಲ್ಲವಿ ತಿಮ್ಮಪ್ಪ ಮಡಿವಾಳ(23) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೆರವಳ್ಳಿಯ ಪವನ್ ಮಡಿವಾಳನನ್ನು ಪ್ರೀತಿಸುತ್ತಿದ್ದಳು. 

ಸಿದ್ದಾಪುರ ಪಟ್ಟಣದ ಬಟ್ಟೆ ಅಂಗಡಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ ಪಲ್ಲವಿ ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡಿದ್ದ ಪವನ್ ಮಡಿವಾಳ ನಡುವೆ ಪ್ರೇಮಾಂಕುರವಾಗಿತ್ತು.  ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಿದ್ದಾಪುರಕ್ಕೆ ಬಂದ ಪವನ್ ಊರಿನಲ್ಲೇ ಕೆಲಸ ಮಾಡುತ್ತಿದ್ದ. 

ಲವ್ ಮಾಡಿ ಕೈ ಕೊಟ್ಟ; ಮೊಬೈಲ್ ನಲ್ಲಿ ಹೇಳಿಕೆ ದಾಖಲಿಸಿ ದಾವಣೆರೆ ಯುವತಿ ಸುಸೈಡ್

ಮೃತ ಯುವತಿ ಪಲ್ಲವಿಯ ಪಕ್ಕದ ಮನೆಯಲ್ಲಿರೋ ಸಂಬಂಧಿಕರ ಮನೆಗೆ ಪವನ್ ಮಡಿವಾಳ ಆಗಾಗ ಬಂದು ಹೋಗುತ್ತಿದ್ದ. ದೂರದ ಸಂಬಂಧಿಕರಾಗಿರುವ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಪವನ್‌ನನ್ನು ಪಲ್ಲವಿಯ ಕುಟುಂಬಸ್ಥರು ಮನೆಗೆ ಕರೆಸಿ ಮದುವೆ ಬಗ್ಗೆ ವಿಚಾರಿಸಿದ್ದರು.

ಇನ್ನೊಂದೆರಡು ವರ್ಷದಲ್ಲಿ ತನ್ನ ಅಕ್ಕನ ಮದುವೆ ಆಗೋವರೆಗೂ ತಾನು ಮದುವೆ ಆಗುವುದಿಲ್ಲ ಎಂದಿದ್ದ. ಮನೆಯಲ್ಲಿ ತಂದೆ-ತಾಯಿಯನ್ನು ಕೇಳಿ ಹೇಳುತ್ತೇನೆ ಎಂದು ಹೋದವನು ಮರಳಿ ಬಂದಿರಲಿಲ್ಲ. ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ. 

ಇದರಿಂದ ತಾನು ಪ್ರೀತಿಸಿದ ಯುವಕ  ತನ್ನನ್ನು ತಿರಸ್ಕರಿಸುತ್ತಾನೆ ಎಂದುಕೊಂಡು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ತನ್ನ ಮನೆಯ ಕೋಣೆಯಲ್ಲಿರುವ ಜಂತಿಗೆ (ಮನೆ ಮಾಡು ನಿಲ್ಲಿಸುವ ಮರದ ಪಟ್ಟಿ) ವೇಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪ್ರೀತಿಸಿದ ಯುವಕ‌ ಮದುವೆಯಾಗಲು ಹಿಂಜರಿದಿರೋದೇ ಮಗಳ ಆತ್ಮಹತ್ಯೆಗೆ ಕಾರಣ ಎಂದು‌ ತಂದೆ ತಿಮ್ಮಪ್ಪ ನಾರಾಯಣ ಮಡಿವಾಳ ದೂರು ನೀಡಿದ್ದಾರೆ. ಸಿದ್ಧಾಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.