ಕಾನ್ಪುರದಲ್ಲಿ ಕುಖ್ಯಾತ ಗ್ಯಾಂಗ್ಸ್ಟರ್ ಅಜಯ್ ಠಾಕೂರ್ ಪೊಲೀಸ್ ಠಾಣೆ ಎದುರು ಕಾನೂನು ಉಲ್ಲಂಘಿಸಿ, ಗೆಳತಿಯ ಹುಟ್ಟುಹಬ್ಬ ಆಚರಿಸಿದ್ದಾನೆ. ಐಷಾರಾಮಿ ಕಾರಿನಲ್ಲಿ, ಬೆಂಗಾವಲು ಪಡೆ ಸಮೇತ ಸಾಹಸ ಪ್ರದರ್ಶನ ನೀಡಿ, ವಿಡಿಯೋ ವೈರಲ್ ಮಾಡಿದ್ದಾನೆ. ಈತನ ಮೇಲೆ ೩೦ಕ್ಕೂ ಹೆಚ್ಚು ಗಂಭೀರ ಅಪರಾಧ ಪ್ರಕರಣಗಳಿವೆ. ಬಳಿಕ ಆತನನ್ನು ಬಂಧಿಸಲಾಗಿದೆ.
ಹಲವಾರು ಬಾರಿ ನಮ್ಮ ಕಾನೂನು ವ್ಯವಸ್ಥೆ, ಪೊಲೀಸ್ ವ್ಯವಸ್ಥೆಯ ಬಗ್ಗೆ ತಕರಾರು ಬರುವುದು ಇದೆ. ಅಪರಾಧಿಗಳು ಕಣ್ಮುಂದೇ ಇದ್ದರೂ ಎಷ್ಟೋ ಬಾರಿ ನಮ್ಮ ಕಾನೂನು, ಪೊಲೀಸರು ಕೂಡ ಏನು ಮಾಡದ ಸ್ಥಿತಿ ನಿರ್ಮಾಣ ಆಗುತ್ತದೆ. ಕುಖ್ಯಾತ ಖದೀಮರು ಸುಲಭದಲ್ಲಿ ತಪ್ಪಿಸಿಕೊಳ್ಳುತ್ತಲೇ ಇರುತ್ತಾರೆ, ಅಮಾಯಕರು ಪೊಲೀಸರ ಟಾರ್ಗೆಟ್ ಆಗುತ್ತಾರೆ ಎನ್ನುವ ಗಂಭೀರ ಆರೋಪಗಳೂ ಸದಾ ಕೇಳಿಬರುತ್ತಲೇ ಇರುತ್ತವೆ. ಎಷ್ಟೋ ಬಾರಿ ಪೊಲೀಸ್ ವ್ಯವಸ್ಥೆಯ ಬಗ್ಗೆಯೂ ಜನರು ಸಂದೇಹ ಪಡುವಂಥ ಘಟನೆಗಳೂ ನಡೆಯುತ್ತಲೇ ಇರುತ್ತವೆ. ಅದಕ್ಕೆ ಸಾಕ್ಷಿ ಎಂಬಂತೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಘಟನೆಯೊಂದು ನಡೆದಿದೆ.
ಬಾಲಕಿಯ ಮೇಲೆ ಅತ್ಯಾಚಾರ ಮಾಡಿರುವುದೂ ಸೇರಿದಂತೆ 30ಕ್ಕೂ ಅಧಿಕ ಗಂಭೀರ ಅಪರಾಧಗಳಲ್ಲಿ ಬೇಕಾಗಿರುವ ಗ್ಯಾಂಗ್ಸ್ಟರ್ ಅಜೆಯ್ ಠಾಕೂರ್ ಎಂಬಾತ ಪೊಲೀಸ್ ಠಾಣೆಯ ಎದುರೇ ಸ್ನೇಹಿತೆಯ ಜೊತೆ ಕಾನೂನು ಉಲ್ಲಂಘಿಸುವ ಕೃತ್ಯ ಮಾಡಿ ಪೊಲೀಸರಿಗೇ ಸವಾಲು ಹಾಕಿದ್ದಾನೆ. ತನ್ನ ಗರ್ಲ್ಫ್ರೆಂಡ್ ಜೊತೆ ಐಷಾರಾಮಿ ಕಾರಿನಲ್ಲಿ ಸಾಹಸ ಪ್ರದರ್ಶನ ನೀಡಿದ್ದಾನೆ. ಅಕ್ರಮ ಬಂದೂಕುಗಳೊಂದಿಗೆ ಬಂದಿರುವ ಈತ ಅದನ್ನು ಹಿಡಿದುಕೊಂಡು, ತನ್ನ ಗೆಳತಿಯ ಹುಟ್ಟುಹಬ್ಬವನ್ನು ಠಾಣೆಯ ಎದುರೇ ಆಚರಿಸಿದ್ದಾನೆ. ಈ ಸಂದರ್ಭದಲ್ಲಿ ಆತನನ್ನು ಹತ್ತಾರು ಕಾರುಗಳು ಹಿಂಬಾಲಿಸಿದ್ದು, ಟ್ರಾಫಿಕ್ ಜಾಮ್ ಕೂಡ ಮಾಡಿದೆ!
ಸ್ನೇಹಿತರನ್ನು ಮನೆಗೆ ಕಳುಹಿಸಿ ಸೌದಿಯಿಂದ ವಿಡಿಯೋ ನೋಡ್ತಿದ್ದ ಗಂಡ: 4 ಮಕ್ಕಳ ಅಮ್ಮನ ಭಯಾನಕ ಕಥೆ ಕೇಳಿ!
ಕಾನ್ಪುರದ ಬರ್ರಾ ಪೊಲೀಸ್ ಠಾಣೆ ಪ್ರದೇಶದ ಅಡಿಯಲ್ಲಿ ಬರುವ ಡಿಸಿಪಿ ಕಚೇರಿಯ ಹಿಂದೆ ಈ ಘಟನೆ ನಡೆದಿದೆ. ಇದರ ವಿಡಿಯೋ ಕೂಡ ಆತ ಶೇರ್ ಮಾಡಿಕೊಂಡಿದ್ದಾನೆ. 30 ವರ್ಷ ವಯಸ್ಸಿನ ಈ ಕುಖ್ಯಾತ ಗ್ಯಾಂಗ್ಸ್ಟರ್, ನಿಯಮಗಳನ್ನು ಉಲ್ಲಂಘಿಸಿ ಸುಮಾರು 12 ವಾಹನಗಳ ಬೆಂಗಾವಲು ಪಡೆಯೊಂದಿಗೆ ಬೀದಿಗಳಲ್ಲಿ ರಂಪಾಟ ಮಾಡಿದ್ದಾನೆ. ನಂಬರ್ ಪ್ಲೇಟ್ ಕೂಡ ಇಲ್ಲದೆಯೇ ಡಿಸಿಪಿ ಕಚೇರಿಯ ಬಳಿ ಬೇಕಾಬಿಟ್ಟೆ ಕಾರನ್ನು ಓಡಿಸಿದ್ದಾನೆ. ಈತ ನಂಬರ್ ಪ್ಲೇಟ್ ಇಲ್ಲದ ಕಪ್ಪು ಮಹೀಂದ್ರಾ ಸ್ಕಾರ್ಪಿಯೋ ಕಾರನ್ನು ಚಾಲನೆ ಮಾಡುತ್ತಿದ್ದು, ಬೆಂಗಾವಲಿನಲ್ಲಿರುವ ಇತರ ಕಾರುಗಳನ್ನು ಅನುಸರಿಸುತ್ತಿದ್ದಾನೆ ಎಂದು ವಿಡಿಯೋದಲ್ಲಿ ನೋಡಬಹುದಾಗಿದೆ.
ಕಾರಿನ ಕಿಟಕಿಗಳ ಮೇಲೆ ನಿಷೇಧಿತ ಟಿಂಟೆಡ್ ಗ್ಲಾಸ್ ಹಾಕಲಾಗಿದೆ. ಗರ್ಲ್ಫ್ರೆಂಡ್ ಜೊತೆ ಸಾಹಸ ಪ್ರದರ್ಶನ ಮಾಡಿದ್ದಾನೆ. ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತು ಕ್ಯಾಮೆರಾದತ್ತ ಕೈ ಬೀಸಿದ್ದಾನೆ. ಕಾರುಗಳು ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿರುವುದನ್ನು ಹಾಗೂ ಈ ಸಮಯದಲ್ಲಿ ಈ ಯುವಕ ನಗುತ್ತಾ ಕ್ಯಾಮೆರಾದತ್ತ ಕೈ ಬೀಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅಂದಹಾಗೆ, ಈತನ ಮೇಲೆ 30 ಕ್ಕೂ ಹೆಚ್ಚು ಗಂಭೀರ ಪ್ರಕರಣಗಳಲ್ಲಿ ಆರೋಪಗಳು ಇವೆ ಎಂದು ಪೊಲೀಸರು ಹೇಳಿದ್ದಾರೆ. ಹುಡುಗಿಯೊಬ್ಬಳೊಂದಿಗೆ ಅಶ್ಲೀಲ ವೀಡಿಯೊ ಮಾಡಿರುವುದು, ವೈದ್ಯ ದಂಪತಿ ಮಗಳಿಗೆ ಬೆದರಿಕೆ ಹಾಕಿರುವುದು, ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿರುವುದು ಸೇರಿದಂತೆ ಹಲವು ಗಂಭೀರ ಆರೋಪ ಇದ್ದರೂ ಜಾಲಿಯಾಗಿ ತಿರುಗಾಡುತ್ತಿದ್ದಾನೆ! ಈ ವಿಡಿಯೋ ವೈರಲ್ ಬಳಿಕ ಆತನನ್ನು ಮತ್ತು ಸ್ನೇಹಿತರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
