ನಗರದ ಕೊಪ್ಪಳ ರಸ್ತೆಯ ಮಾರ್ಗದಲ್ಲಿರುವ ಪ್ರತಿಷ್ಠಿತ ವ್ಯಕ್ತಿಯ ಅಶೋಕ ಲಾಡ್ಜ್‌ನಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ 13 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೂ ಜೂಜಾಟಕ್ಕೆ ಸಂಬಂಧಿಸಿದಂತೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಗಂಗಾವತಿ (ಮೇ.04): ನಗರದ ಕೊಪ್ಪಳ ರಸ್ತೆಯ ಮಾರ್ಗದಲ್ಲಿರುವ ಪ್ರತಿಷ್ಠಿತ ವ್ಯಕ್ತಿಯ ಅಶೋಕ ಲಾಡ್ಜ್‌ನಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ 13 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಿಸಿಲಿನ ಧಗೆ ಇದೆ ಎಂಬ ಕಾರಣಕ್ಕೆ ಜೂಜುಕೋರರು ಅಶೋಕ್ ಹೊಟೆಲ್ ಸೇರಿದಂತೆ ಪ್ರಮುಖ ಹೊಟೆಲ್ ಗಳನ್ನು ಅಡ್ಡಿಯಾಗಿ ಮಾಡಿಕೊಂಡು ಇಸ್ಪೀಟ್ ಆಟ ನಡೆಸುತ್ತಿರುವದರ ಬಗ್ಗೆ ಮಾಹಿತಿ ಪಡೆದ ಡಿವೈಎಸ್ಪಿ ಜಾಯಪ್ಪ ನ್ಯಾಮಗೊಡರ್ ಅವರು ತಮ್ಮ ತಂಡದೊಂದಿಗೆ ದಾಳಿ ನಡೆಸಿ 13 ಜನರನ್ನು ಬಂಧಿಸಿ ಅವರಲ್ಲಿದ್ದ 54 ಸಾವಿರ ರು ಸೇರಿದಂತೆ ಜೂಜಾಟಕ್ಕೆ ಸಂಬಂಧಿಸಿದಂತೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಹಿಂದೆ ಗ್ರಾಮೀಣ ಪ್ರದೇಶ ಮತ್ತು ಗುಡ್ಡ, ಗದ್ದೆಗಳಲ್ಲಿ ಜೂಜಾಟ ದಂಧೆ ನಡೆಸುತ್ತಿದ್ದರು. ಈಗ ಬಿಸಿಲಿನ ಧಗೆ ಹೆಚ್ಚಾಗಿದ್ದರಿಂದ ಗಂಗಾವತಿ ನಗರದ ಪ್ರತಿಷ್ಟರ ಲಾಡ್ಜ್ ಸೇರಿದಂತೆ ಸಣ್ಣ ಪುಟ್ಟ ಲಾಡ್ಜ್ ಗಳಲ್ಲಿ ಇಸ್ಪೀಟ್ ದಂಧೆ ನಡೆದಿರುವದರ ಬಗ್ಗೆ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸುವದಕ್ಕೆ ಕಾರಣವಾಗಿದೆ. ಹೊರ ರಾಜ್ಯಗಳಿಂದ ಬರುವ ಜೂಜುಕೋರರು ಲಕ್ಷಾಂತರ ರುಪಾಯಿಗಳನ್ನು ತಂದು ಇಸ್ಪೀಟ್ ಆಟದಲ್ಲಿ ತೊಡಗುತ್ತಿದ್ದಾರೆ.

ಇತ್ತೀಚೆಗೆ ನಗರದಲ್ಲಿ ಅಹಿತಕರ ಘಟನೆಯಿಂದಾಗಿ ಜನರು ಬೆಚ್ಚಿ ಬಿದ್ದಿದ್ದು, ಈಗ ಜೂಜುಕೋರರ ಹಾವಳಿಯಿಂದ ಯುವಕರು ಸಹ ತಪ್ಪು ದಾರಿಗೆ ಹೋಗುತ್ತಿದ್ದಾರೆ ಎಂದು ಪೊಲೀಸರು ಈ ಹಿಂದೆ ಜಾಗೃತಿ ಸಭೆ ನಡೆಸಿ ಎಚ್ಚರಿಕೆ ನೀಡಿದ್ದರು. ಅಲ್ಲದೇ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಸಿ ಪಾಲಕರಿಗೆ ತಿಳಿ ಹೇಳಿದ್ದರು. ಗಾಂಜಾ ಮಾರಾಟ ಮಾಡುವವರಿಗೆ ಶಿಕ್ಷೆ ವಿಧಿಸಿದ ಉದಾಹರಣೆಗಳಿವೆ.

ದಾಳಿ ನಡೆಸುತ್ತಿದ್ದಂತೆಯೆ ಕೆಲವರು ಪರಾರಿ

ಅಶೋಕ್ ಲಾಡ್ಜ್‌ನಲ್ಲಿ ಇಸ್ಪೀಟ್ ಆಟ ನಡೆಯುತ್ತಿರುವುದರ ಬಗ್ಗೆ ಸುಳಿವು ಪಡೆದುಕೊಂಡ ಪೊಲೀಸರು ಲಾಡ್ಜ್ ಲಿಫ್ಟ್ ಏರುತ್ತಿದ್ದಂತಯೆ ಕೆಲವರು ಪರಾರಿಯಾಗಿದ್ದಾರೆ. ಅದರಲ್ಲಿ 13 ಜನರು ಸಿಕ್ಕಿ ಹಾಕಿಕೊಂಡಿದ್ದಾರೆ. ದಾಳಿಯ ನೇತೃತ್ವವನ್ನು ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡರ್ ವಹಿಸಿದ್ದರು. ಮುತ್ತಣ್ಣ, ಗ್ಯಾನಪ್ಪ ಮತ್ತು ವಿಶ್ವನಾಥ ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಿದ್ದರು.