ದಕ್ಷಿಣ ವಿಭಾಗದ ಜೆ.ಪಿ.ನಗರದಲ್ಲಿ ನಡೆದ ಎರಡು ಪ್ರತ್ಯೇಕ ಮನೆಗಳವು ಪ್ರಕರಣಗಳಲ್ಲಿ ನಗದು, ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದ ನೇಪಾಳಿ ಗ್ಯಾಂಗ್‌ನ 12 ಮಂದಿ ಆರೋಪಿಗಳನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು (ಮಾ.12): ದಕ್ಷಿಣ ವಿಭಾಗದ ಜೆ.ಪಿ.ನಗರದಲ್ಲಿ ನಡೆದ ಎರಡು ಪ್ರತ್ಯೇಕ ಮನೆಗಳವು ಪ್ರಕರಣಗಳಲ್ಲಿ ನಗದು, ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದ ನೇಪಾಳಿ ಗ್ಯಾಂಗ್‌ನ 12 ಮಂದಿ ಆರೋಪಿಗಳನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಜೆ.ಪಿ.ನಗರ 2ನೇ ಹಂತದ ಕಿರಣ್‌ ಎಂಬುವವರ ಮನೆಯಲ್ಲಿ 1 ಕೇಜಿ 900 ಗ್ರಾಂ ಚಿನ್ನಾಭರಣ ಮತ್ತು 1 ಪಿಸ್ತೂಲ್‌, ನಗದು ದೋಚಿದ್ದ 8 ಮಂದಿ ಆರೋಪಿಗಳನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನೇಪಾಳ ಮೂಲದ ನೇತ್ರಾ ಶಾಹಿ ಅಲಿಯಾಸ್‌ ಪ್ರೇಮ್‌ ಶಾಹಿ (43), ಲಕ್ಷ್ಮಿ ಸೇಜುವಲ್‌ ಅಲಿಯಾಸ್‌ ಆಯುಷ ಅಧಿಕಾರಿ (33), ಗೋರಕ್‌ ಬಹದ್ದೂರ್‌ ಶಾಹಿ ಅಲಿಯಾಸ್‌ ಸುನೀಲ್‌ (50), ಭಿಮ್‌ ಬಹದ್ದೂರ್‌ ಶಾಹಿ (45), ಅಂಜಲಿ (31), ಅಬೇಶ್‌ ಶಾಹಿ (21), ಪ್ರಶಾಂತ್‌ ಅಲಿಯಾಸ್‌ ಸಾಗರ್‌ ಶಾಹಿ (21) ಮತ್ತು ಪ್ರಕಾಶ್‌ ಶಾಹಿ (31) ಬಂಧಿತರು. ಆರೋಪಿಗಳಿಂದ 1 ಪಿಸ್ತೂಲ್‌, 5 ಗುಂಡುಗಳು, 1 ಆಟಿಕೆ ಪಿಸ್ತೂಲ್‌, 1 ಕೇಜಿ 173 ಗ್ರಾಂ ಚಿನ್ನ, 350 ಗ್ರಾಂ ಬೆಳ್ಳಿ, .77.69 ಲಕ್ಷ ನಗದು ಹಾಗೂ 13 ವಿದೇಶಿ ಕರೆನ್ಸಿ ಸೇರಿದಂತೆ .1.40 ಕೋಟಿ ಮೌಲ್ಯದ ವಸ್ತುಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಳಿನ 5, 8ನೇ ಕ್ಲಾಸ್‌ ಪರೀಕ್ಷೆ ಮುಂದೂಡಿಕೆ: ಪರೀಕ್ಷೆ ತಡೆಹಿಡಿಯಲು ಹೈಕೋರ್ಟ್‌ ಆದೇಶ

ಜೆ.ಪಿ.ನಗರದ 2ನೇ ಹಂತದಲ್ಲಿ ನೆಲೆಸಿರುವ ಎಂಜಿನಿಯರ್‌ ಕಿರಣ್‌ ಅವರ ಮನೆಗೆ ಮೂರು ತಿಂಗಳ ಹಿಂದೆ ನೇಪಾಳದ ಪ್ರೇಮ್‌ ಮತ್ತು ಲಕ್ಷ್ಮಿ ಸೆಜುವಲ್‌ ಕೆಲಸಕ್ಕೆ ಸೇರಿದ್ದರು. ಪ್ರೇಮ್‌ ಸೆಕ್ಯೂರಿಟಿ ಗಾರ್ಡ್‌ ಆಗಿದ್ದರೆ, ಲಕ್ಷ್ಮಿ ಮನೆಗೆಲಸ ಮಾಡುತ್ತಿದ್ದಳು. ಫೆ.28ರಂದು ಕಿರಣ್‌ ಮನೆಯಲ್ಲಿ ಎಲ್ಲರೂ ತಿರುಪತಿಗೆ ಹೋಗಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಕಿರಣ್‌ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಇದನ್ನು ಗಮನಿಸಿದ್ದ ನೇಪಾಳಿ ದಂಪತಿ ತನ್ನ ತಂಡಕ್ಕೆ ಕಳ್ಳತನ ಮಾಡಲು ಮಾಹಿತಿ ನೀಡಿದ್ದರು.

ಊಟದಲ್ಲಿ ನಿದ್ದೆ ಮಾತ್ರೆ: ಮನೆಗೆಲಸದ ಲಕ್ಷ್ಮಿ, ಊಟದಲ್ಲಿ ಕಿರಣ್‌ಗೆ ನಿದ್ದೆ ಮಾತ್ರೆ ಬೆರೆಸಿ ಕೊಟ್ಟಿದ್ದಳು. ಹೀಗಾಗಿ ಕಿರಣ್‌ ಗಾಢ ನಿದ್ದೆಗೆ ಜಾರಿದ್ದರು. ಈ ವೇಳೆ ನೇಪಾಳಿ ಗ್ಯಾಂಗ್‌ ಮನೆಯಲ್ಲಿದ್ದ ಚಿನ್ನಾಭರಣ, ಪಿಸ್ತೂಲ್‌ ಎಲ್ಲವನ್ನು ಕಳವು ಮಾಡಿ ಪರಾರಿಯಾಗಿದ್ದರು. ಬೆಳಗಿನ ಜಾವ ನಿದ್ದೆಯಿಂದ ಎಚ್ಚರವಾದ ಕಿರಣ್‌ ತಾಯಿಯ ಕೊಠಡಿಗೆ ಹೋದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ಮನೆಯಲ್ಲಿ ಕೆಲಸಕ್ಕಿದ್ದ ನೇಪಾಳಿ ದಂಪತಿ ಪರಾರಿಯಾಗಿದ್ದರು. ಈ ಸಂಬಂಧ ಕಿರಣ್‌ ನೀಡಿದ ದೂರಿನ ಮೇರೆಗೆ ಪೊಲೀಸರ 6 ವಿಶೇಷ ತಂಡಗಳು ನೇಪಾಳದ ಗಡಿಭಾಗ ದೆಹಲಿ ಮತ್ತು ಉತ್ತರ ಪ್ರದೇಶದ ಲಕ್ನೋ, ಹರಿಯಾಣದ ಝಾನ್ಸಿಯಲ್ಲಿ ಕಾರ್ಯಾಚರಣೆ ನಡೆಸಿ 8 ಮಂದಿಯನ್ನು ಬಂಧಿಸಲಾಗಿದೆ. ಮತ್ತೊಬ್ಬ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾಡಹಗಲೇ ಕಳ್ಳತನ ಮಾಡಿದ್ದ ನಾಲ್ವರ ಸೆರೆ: ಮತ್ತೊಂದು ಪ್ರಕರಣದಲ್ಲಿ ಜೆ.ಪಿ.ನಗರದ 2ನೇ ಹಂತದ ಬ್ರಿಜ್‌ ಭೂಷಣ್‌ ಅವರ ಮನೆಯಲ್ಲಿ .35 ಲಕ್ಷ ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮನೆಗೆಲಸದ ನೇಪಾಳ ಮೂಲದ ನಾಲ್ವರನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೇಪಾಳ ಮೂಲದ ಅರ್ಜುನ್‌ ಶಾಯಿ, ಪೂರವ್‌ ಶಾಯಿ, ಹರೀಶ್‌ ಶಾಯಿ ಮತ್ತು ರಮಿತ ಅಲಿಯಾಸ್‌ ಠಾಕೂರ್‌ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 320 ಗ್ರಾಂ ಚಿನ್ನ, .6.12 ಲಕ್ಷ ನಗದು ಮತ್ತು 197 ಗ್ರಾಂ ಬೆಳ್ಳಿ ಸೇರಿದಂತೆ ಒಟ್ಟು .25 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಬ್ರಿಜ್‌ ಭೂಷಣ್‌ ಮನೆಗೆ ಕೆಲ ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದ ನೇಪಾಳ ಮೂಲದ ವಿಮಲಾ ಮನೆಯ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಳು. ಮನೆಯಲ್ಲಿ ವೃದ್ಧೆಯನ್ನು ಹೊರತುಪಡಿಸಿ ಉಳಿದವರು ಕೆಲಸಕ್ಕೆ ಹೋಗಿ ಸಂಜೆಯೇ ಮನೆಗೆ ವಾಪಾಸಾಗುತ್ತಾರೆ ಎಂಬುದನ್ನು ಗಮನಿಸಿದ್ದಳು. ಡಿಸೆಂಬರ್‌ 2ರಂದು ತನ್ನ ನಾಲ್ವರು ಸಹಚರರನ್ನು ಮನೆಗೆ ಕರೆಸಿಕೊಂಡು ವೃದ್ಧೆ ಗಮನ ಬೇರೆಡೆ ಸೆಳೆದು .35 ಲಕ್ಷ ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ನೇಪಾಳದ ಗಡಿಭಾಗ, ದೆಹಲಿ, ಉತ್ತರ ಪ್ರದೇಶದ ಲಕ್ನೋ ಮತ್ತು ರಾಜಸ್ಥಾನದ ಜೈಪುರದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಥಣಿ ಬಿಡಲ್ಲ: ರಮೇಶ್‌ ಜಾರಕಿಹೊಳಿಗೆ ಲಕ್ಷ್ಮಣ ಸವದಿ ಪುತ್ರ ತಿರುಗೇಟು

ಶ್ರೀಮಂತರೇ ಟಾರ್ಗೆಟ್‌!: ನೇಪಾಳ ಮೂಲದ ಈ ಕಳ್ಳರ ಗ್ಯಾಂಗ್‌ ಕಳ್ಳತನ ಮಾಡುವ ಉದ್ದೇಶದಿಂದ ದಂಪತಿ ಸೋಗಿನಲ್ಲಿ ಶ್ರೀಮಂತರ ಮನೆಗೆ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಆರಂಭದಲ್ಲಿ ಉತ್ತಮ ವರ್ತನೆಯೊಂದಿಗೆ ಮಾಲಿಕರ ವಿಶ್ವಾಸ ಗಳಿಸುತ್ತಾರೆ. ಬಳಿಕ ಮನೆಯ ಬೀರು, ಲಾಕರ್‌, ವಾರ್ಡ್‌ರೋಬ್‌ಗಳ ಬಗ್ಗೆ ಗಮನಿಸುತ್ತಾರೆ. ಮನೆಯ ಸದಸ್ಯರು ಪ್ರವಾಸ, ಕಾರ್ಯಕ್ರಮ ಇತರೆ ಕಾರ್ಯಗಳ ನಿಮಿತ್ತ ಹೊರಹೋಗುವ ಬಗ್ಗೆ ಮಾಹಿತಿ ಸಂಗ್ರಹಿಸಿ, ತಮ್ಮ ಗ್ಯಾಂಗ್‌ಗೆ ಮಾಹಿತಿ ನೀಡುತ್ತಾರೆ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಸಹಚರರನ್ನು ಕರೆಸಿಕೊಂಡು ಕಳ್ಳತನ ಮಾಡಿ ಪರಾರಿಯಾಗುತ್ತಾರೆ. ಹೀಗಾಗಿ ಅಪರಿಚಿತರನ್ನು ಮನೆಗೆಲಸಕ್ಕೆ ನೇಮಿಸಿಕೊಳ್ಳುವಾಗ ಪೂರ್ವಾಪರ ವಿಚಾರಿಸಬೇಕು. ಗುರುತಿನಚೀಟಿ ಪಡೆಯಬೇಕು. ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡುವುದು ಉತ್ತಮ ಎಂದು ಅಧಿಕಾರಿಗಳು ತಿಳಿಸಿದ್ದಾರೆ.