* ಮೊದಲು ನೋಂದಣಿ, ನಂತರ ಮೋಸ* ಮ್ಯಾಟ್ರಿಮೋನಿಯಲ್‌ನಲ್ಲಿ ಪರಿಚಯ* ಯುವತಿಯ ಬ್ಯಾಂಕ್‌ ಖಾತೆಗೆ 1 ಲಕ್ಷ ಹಣ ಟ್ರಾನ್ಸ್‌ಫರ್‌ ಮಾಡಿ ಮೋಸ ಹೋದ ವ್ಯಕ್ತಿ 

ಬೆಳಗಾವಿ(ಜೂ.16): ಸೈಬರ್‌ ವಂಚಕರು ಮ್ಯಾಟ್ರಿಮೋನಿಯಲ್‌ ಜಾಲತಾಣದ ಮೂಲಕ ಖಾತೆ ತೆರೆದು ಗ್ರಾಹಕರಿಂದ ಹಣ ವಂಚಿಸಿರುವ ಪ್ರಕರಣ ಬೆಳಗಾವಿಯಲ್ಲಿ ನಡೆದಿದೆ. ಈ ಕುರಿತು ಸಿಇಎನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಯಾಂಪ್‌ನ ನಿವಾಸಿಯೊಬ್ಬರು ಮ್ಯಾಟ್ರಿಮೋನಿಯಲ್‌ ಜಾಲತಾಣದಲ್ಲಿ ಪರಿಚಯವಾದ ಯುವತಿಯೊಬ್ಬಳ ಬ್ಯಾಂಕ್‌ ಖಾತೆಗೆ 1 ಲಕ್ಷ ಹಣವನ್ನು ಟ್ರಾನ್ಸ್‌ಫರ್‌ ಮಾಡಿ, ವಂಚನೆಗೊಳಗಾಗಿದ್ದಾರೆ. ವ್ಯಾಟ್ಸ್‌ಆ್ಯಪ್‌ ಆಡಿಯೋ ಹಾಗೂ ವಿಡಿಯೋ ಕರೆ ಮಾಡಿ ಬೇರೆ ಬೇರೆ ಕಾರಣಗಳನ್ನು ತಿಳಿಸಿ, ಹಣ ಹಾಕಿಸಿಕೊಂಡು ವಂಚನೆ ಮಾಡುತ್ತಿದ್ದಾರೆ. ಅಪರಿಚಿತರಿಗೆ ತಮ್ಮ ಬ್ಯಾಂಕ್‌ ಖಾತೆಯಿಂದ ಹಣವನ್ನು ವರ್ಗಾವಣೆ ಮಾಡಬಾರದು. ಓಟಿಪಿ ಶೇರ್‌ ಮಾಡಬಾರದು. ಎಲ್ಲರೂ ಸೈಬರ್‌ ಅಪರಾಧ ತಡೆಯಲು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಡಿಸಿಪಿ ಡಾ.ವಿಕ್ರಮ ಆಮಟೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಸೈಬರ್‌ ಅಪರಾಧ ಪ್ರಕರಣದಲ್ಲಿ ಸಾರ್ಜಜನಿಕರು ಜಾಗೃತರಾಗಬೇಕು. ಮೋಸ ಹೋಗಬಾರದು. ಹಣ ಕಳೆದುಕೊಂಡ ವೇಳೆ ಕಡಿಮೆ ಅವಧಿಯಲ್ಲಿ ದೂರು ದಾಖಲಿಸಿದರೆ ಕಳೆದುಕೊಂಡ ಹಣ ವಾಪಸ್‌ ಸಿಗುವುದು ಸುಲಭ. ಇಲ್ಲದಿದ್ದರೆ ಪ್ರಕರಣ ಸಂಕೀರ್ಣವಾಗುವ ಸಾಧ್ಯತೆಗಳಿರುತ್ತವೆ ಎಂದು ಹೇಳಿದರು.

ಲವರ್‌ಗಾಗಿ ಗಾಂಜಾ ಮಾರಾಟಕ್ಕಿಳಿದ ಯುವತಿ..!

ಏನಿದು ವಂಚನೆ?:

ವಂಚನೆಗೊಳಗಾದ ವ್ಯಕ್ತಿಯು ಮ್ಯಾಟ್ರಿಮೋನಿಯಲ್‌ ಆ್ಯಪ್‌ ಡೌನ್‌ಲೋಡ್‌ ಮಾಡಿ ತನ್ನ ಹೆಸರು ನೋಂದಾಯಿಸಿದ್ದ. ಬಳಿಕ ಬೆಂಗಳೂರಿನಿಂದ ಯುವತಿಯೊಬ್ಬಳು ಕರೆ ಮಾಡಿದ್ದಾಳೆ. ಹೀಗೇ ಪರಿಚಯ ಆಗಿದೆ. ಒಂದು ತಿಂಗಳ ಕಾಲ ಪರಸ್ಪರ ನಡುವೆ ಮಾತುಕತೆಯೂ ಮುಂದುವರೆದಿತ್ತು. ವ್ಯಾಟ್ಸ್‌ ಆ್ಯಪ್‌ನಲ್ಲಿ ವಿಡಿಯೋಕಾಲ್‌, ಚಾಟಿಂಗ್‌ ಮೂಲಕ ನಿರಂತರ ಸಂಪರ್ಕವೂ ಇತ್ತು. ಮದುವೆ ವಿಚಾರದ ಬಗ್ಗೆಯೂ ಮಾತುಕತೆ ನಡೆದಿತ್ತು. ಮದುವೆ ವಿಚಾರವಾಗಿ ಮಾತುಕತೆ ನಡೆಸಲು ಬೆಳಗಾವಿಗೆ ಆಗಮಿಸುವಂತೆ ವಂಚಿತ ವ್ಯಕ್ತಿ ಯುವತಿಗೆ ಕರೆ ಮಾಡಿದ್ದ. ಗೋವಾ ಮೂಲಕ ಬೆಳಗಾವಿಗೆ ಆಗಮಿಸುವುದಾಗಿ ಯುವತಿ ತನ್ನ ಬ್ಯಾಂಕ್‌ ಖಾತೆಗೆ ಹಂತ ಹಂತವಾಗಿ ಬರೋಬ್ಬರಿ 1 ಲಕ್ಷ ಹಣವನ್ನು ಪಾವತಿಸಿಕೊಂಡಿದ್ದಾಳೆ. ನಂತರ ಆಕೆಯ ಸಂಪರ್ಕ ಸಾಧಿಸಲು ಸಾಧ್ಯವಾಗದೇ ತಾನು ಮೋಸ ಹೋಗಿರುವುದು ವ್ಯಕ್ತಿಗೆ ಗೊತ್ತಾಗಿದೆ. ನಂತರ ಈ ವಂಚಿತಗೊಂಡ ವ್ಯಕ್ತಿ ಸಿಇಎನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾನೆ.