Asianet Suvarna News Asianet Suvarna News

ಕೋಟಿ ಕೋಟಿ ವಂಚನೆ: ಸೈಬರ್‌ ಸುಲಿಗೆಗೆ ನಲುಗಿದ ಕೊಪ್ಪಳ ಜನ!

ಆನ್‌ಲೈನ್ ಮೋಸ, ಡಿಜಿಟಲ್ ಅರೆಸ್ಟ್ ಬ್ಯಾಂಕ್ ಖಾತೆಯಿಂದ ಹಣ ಮಾಯ ಇಂತಹ ಸಾಲು ಸಾಲು ದೂರುಗಳು ಈಗ ಸೆನ್ ಠಾಣೆಯಲ್ಲಿ ದಾಖಲಾಗುತ್ತಿವೆ. ಕೊಪ್ಪಳ ಜಿಲ್ಲಾದ್ಯಂತ ಆನ್‌ಲೈನ್ ಮೋಸಕ್ಕೆ ಒಳಗಾಗುವವರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತದೆ. ಪೊಲೀಸ್ ಇಲಾಖೆಯಿಂದ ಎಷ್ಟೇ ಜಾಗೃತಿ ಮೂಡಿಸಿದರೂ ಮೋಸ ಹೋಗುವವರ ಸಂಖ್ಯೆ ತಗ್ಗುತ್ತಲೇ ಇಲ್ಲ. 

fraud through cybercrime in Koppal grg
Author
First Published Oct 20, 2024, 9:27 AM IST | Last Updated Oct 20, 2024, 9:27 AM IST

ಸೋಮರಡ್ಡಿ ಅಳವಂಡಿ 

ಕೊಪ್ಪಳ(ಅ.20):  ಆನ್‌ಲೈನ್ ಗೇಮ್, ಖಾತೆಯಿಂದ ಹಣ ಡ್ರಾ. ಒಟಿಪಿ ಪಡೆದು ಖಾತೆಯಲ್ಲಿನ ಹಣ ಮಾಯ... ಹೀಗೆ, ಇಂಥ 1500 ದೂರುಗಳು ಕೊಪ್ಪಳ ಸೆನ್ ಠಾಣೆಯಲ್ಲಿ ದಾಖಲಾಗಿವೆ. ಇವು ಕೇವಲ ಬಂದಿರುವ ದೂರುಗಳು ಅಷ್ಟೇ, ದೂರು ನೀಡದವರ ಸಂಖ್ಯೆ ಇನ್ನೂ ಹೆಚ್ಚಿದೆ. 

ಆನ್‌ಲೈನ್ ಮೋಸ, ಡಿಜಿಟಲ್ ಅರೆಸ್ಟ್ ಬ್ಯಾಂಕ್ ಖಾತೆಯಿಂದ ಹಣ ಮಾಯ ಇಂತಹ ಸಾಲು ಸಾಲು ದೂರುಗಳು ಈಗ ಸೆನ್ ಠಾಣೆಯಲ್ಲಿ ದಾಖಲಾಗುತ್ತಿವೆ. ಕೊಪ್ಪಳ ಜಿಲ್ಲಾದ್ಯಂತ ಆನ್‌ಲೈನ್ ಮೋಸಕ್ಕೆ ಒಳಗಾಗುವವರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತದೆ. ಪೊಲೀಸ್ ಇಲಾಖೆಯಿಂದ ಎಷ್ಟೇ ಜಾಗೃತಿ ಮೂಡಿಸಿದರೂ ಮೋಸ ಹೋಗುವವರ ಸಂಖ್ಯೆ ತಗ್ಗುತ್ತಲೇ ಇಲ್ಲ. 

ಮಿಸ್ಟೇಕ್ ಆಗಿ ನಿಮಗೆ UPI ಪಾವತಿ ಮೂಲಕ ಹಣ ಬಂದಿದೆಯಾ? ಎಚ್ಚರ ಇದು ಅತೀ ದೊಡ್ಡ ವಂಚನೆ!

ಕೋಟಿ ಕೋಟಿ ವಂಚನೆ: 

ಆನ್‌ಲೈನ್ ವಂಚನೆಯಲ್ಲಿ ಕೊಪ್ಪಳ ಸೆನ್ ಠಾಣೆಗೆ ಬಂದಿರುವ ದೂರುಗಳ ಲೆಕ್ಕಾಚಾರದಲ್ಲಿಯೇ ಕೋಟಿ ಕೋಟಿ ಲೂಟಿಯಾಗಿದೆ. 5 ಸಾವಿರದಿಂದ ₹50 ಲಕ್ಷ ವರೆಗೂ ಮೋಸ ಹೋದವರು ಇದ್ದಾರೆ. 

ಗೋಲ್ಡನ್ ಕಲರ್‌ಟಾಟಾ ಸುಮೋ: 

ಕೊಪ್ಪಳ ನಗರದ ಆಟೋ ಚಾಲಕ ಮೋಸ ಹೋಗಿದ್ದ ಪರಿ ಮಾತ್ರ ಅಚ್ಚರಿ ಎನಿಸುತ್ತದೆ. ಕರೆಯೊಂದು ಬರುತ್ತಿದ್ದಂತೆ ಈ ಆಟೋ ಚಾಲಕ ಮಾತನಾಡುತ್ತಾನೆ. ಕ್ರಿಕೆಟ್ ಆಟದಲ್ಲಿ ಇಂಡಿಯಾ ಟೀಮ್ ಕ್ಯಾಪ್ಟನ್ ಹೆಸರು ಕೇಳುತ್ತಾರೆ. ತಕ್ಷಣ ಉತ್ತರಿಸುತ್ತಿದ್ದಂತೆ ನಿಮಗೆ ಬಂಪರ್‌ ಲಾಟರಿ ಬಂದಿದೆ ಎನ್ನುತ್ತಾರೆ. ಆತನಿಗೆ ಖುಷಿಯಾಗುತ್ತದೆ. ಟಾಟಾ ಸುಮೋ ವಾಹನ ನಿಮ್ಮ ಅದೃಷ್ಟಕ್ಕೆ ಒಲಿದಿದೆ ಎನ್ನುತ್ತಾರೆ. ನಿಮಗೆ ಯಾವ ಕಲರ್ ಬೇಕು ಎನ್ನುತ್ತಾರೆ. ಗೋಲ್ಡನ್ ಕಲರ್‌ಸಹ ಇದೆ ಎಂದಾಗ ಅದೇ ಬೇಕು ಎಂದು ಚಾಲಕ ಹೇಳುತ್ತಾನೆ. ಇದಾದ ಮೇಲೆ ಕಲರ್‌ಆಯ್ಕೆ ಮಾಡಿದ್ದಕ್ಕೆ ₹60 ಸಾವಿರ ಪಾವತಿ ಮಾಡಬೇಕು ಎನ್ನುತ್ತಾರೆ. ಪಾವತಿ ಮಾಡುತ್ತಾನೆ. ಇದಾದ ಮೇಲೆ ಟ್ಯಾಕ್ಸ್ ತುಂಬಿದರೆ ಈಗಲೇ ನಿಮ್ಮ ವಾಹನವನ್ನು ಕಳುಹಿಸಿಕೊಡಲಾಗುತ್ತದೆ ಎನ್ನುತ್ತಾರೆ. ₹2 ಲಕ್ಷ ಪಾವತಿ ಮಾಡುತ್ತಾನೆ. ಇದಾದ ಮೇಲೆ ಸಂಪರ್ಕಕ್ಕೆ ಸಾಧ್ಯವಾಗುವುದಿಲ್ಲ. ಸಾಲ ಮಾಡಿ, ಪಾವತಿ ಮಾಡಿದ್ದ ಚಾಲಕ ವಿಧಿಯಿಲ್ಲದೆ ಕೊಪ್ಪಳ ಠಾಣೆಯಲ್ಲಿ ದೂರು ನೀಡುತ್ತಾನೆ. ವಿಳಾಸ ಬೆನ್ನಟ್ಟಿಕೊಂಡು ಹೋದ ಪೊಲೀಸರಿಗೆ ಆ ವಿಳಾಸದಲ್ಲಿ ಅಂಥವರು ಯಾರೂ ಪತ್ತೆಯಾಗುವುದೇ ಇಲ್ಲ. ಇದು, ಹಲವು ವರ್ಷಗಳ ಹಿಂದೆಯೇ ನಡೆದಿರುವ ಘಟನೆ. ಆದರೆ ಇಂತಹ ಪ್ರಕರಣಗಳು ಈಗಲೂ ನಡೆಯುತ್ತಿದೆ. ಆಧಾರ್‌ ಅಪ್‌ಡೇಟ್, ಬ್ಯಾಂಕ್ ಖಾತೆ ಅಪ್ ಡೇಟ್ ಎಂದು ಸುಲಿಗೆ ಮಾಡುತ್ತಿದ್ದವರು ಈಗ ಡಿಜಿಟಲ್ ಅರೆಸ್ಟ್ ಎನ್ನುವ ಹೊಸ ವರಸೆಯ ಮೂಲಕ ಸುಲಿಗೆ ಮಾಡುತ್ತಿದ್ದಾರೆ.

ಎಚ್ಚರದಿಂದ ಇರಿ... 

ಈ ಕುರಿತು ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆ ಸಾಕಷ್ಟು ಜಾಗೃತಿ ಮೂಡಿಸುತ್ತಿದೆ. ಆನ್‌ಲೈನ್ ಸುಲಿಗೆಕೋರರ ವಿರುದ್ಧ ಎಚ್ಚರದಿಂದ ಇರುವಂತೆ ಪದೇ ಪದೇ ಪ್ರಕಟಣೆ ನೀಡುತ್ತಿದೆ. ದುಡ್ಡು ಪುಕ್ಕಟೆ ಎಲ್ಲಿಯೂ ಬರುವುದಿಲ್ಲ. ದುರಾಸೆಗೆ ಬಿದ್ದು ಮೋಸ ಹೋಗದಿರುವಂತೆ ಪೊಲೀಸ್ ಸಿಬ್ಬಂದಿ ಕೋರುತ್ತಿದ್ದಾರೆ. ಮೋಸ ಹೋಗಿದ್ದರೆ ಕೂಡಲೇ 1930 ಸಂಖ್ಯೆಗೆ ಕರೆ ಮಾಡಿ ಎಂದು ಸೂಚಿಸುತ್ತಿದ್ದಾರೆ.

ಡಿಜಿಟಲ್ ಅರೆಸ್ಟ್‌ಗೆ ಕಂಗಾಲಾಗಿ ಬಟ್ಟೆ ಬಿಚ್ಚಿದ ಯುವತಿ, ಕೈಯಲ್ಲಿದ್ದ 5 ಲಕ್ಷ ರೂ ಗುಳುಂ!

ಆನ್‌ಲೈನ್ ವಂಚನೆ ಹೆಚ್ಚಾಗುತ್ತಿದ್ದು, ಕೊಪ್ಪಳ ಜಿಲ್ಲೆಯೊಂದರಲ್ಲಿಯೇ ಸೆನ್ ಠಾಣೆಗೆ 1500 ದೂರುಗಳು ಬಂದಿವೆ. ಆದ್ದರಿಂದ ಮೋಸ ಹೋಗದಂತೆ ಎಷ್ಟೇ ಮನವಿ ಮಾಡಿದರೂ ದುರಾಸೆಯಿಂದ ಜನರು ಬಲಿ ಬೀಳುತ್ತಿದ್ದಾರೆ. ಆತಂಕ ಇಲ್ಲದೆ ಧೈರ್ಯದಿಂದ ದೂರು ಕೊಡುವಂತೆ ಮನವಿ ಮಾಡುತ್ತಿದ್ದೇವೆ ಎಂದು ಡಿವೈಎಸ್ಪಿ ಸೆನ್ ಠಾಣೆ ಕೊಪ್ಪಳ ಯಶವಂತಕುಮಾರ ತಿಳಿಸಿದ್ದಾರೆ. 

ಸೈಬರ್‌ ಕ್ರೈಮ್ ಇತ್ತೀಚಿಗೆ ಹೆಚ್ಚಾಗುತ್ತಿವೆ. ಆನ್‌ಲೈನ್ ಟ್ರೇಡಿಂಗ್ ಮಾಡಲು ಹೋಗಿ, ಅನೇಕರು ಬಕರಾ ಆಗಿದ್ದಾರೆ. ಈ ಕುರಿತು ಜಾಗೃತಿ ಮೂಡಿಸಲಾಗುತ್ತದೆ ಎಂದು ಕೊಪ್ಪಳ ಪಿಐ ಸೆನ್ ಠಾಣೆ ಮಹಾಂತೇಶ ಸಜ್ಜನ ಹೇಳಿದ್ದಾರೆ. 

Latest Videos
Follow Us:
Download App:
  • android
  • ios