ಬೆಂಗಳೂರು(ಡಿ.06): ನಗರ್ತಪೇಟೆಯ ಕೆಂಪಣ್ಣ ಲೇನ್‌ನಲ್ಲಿ ನಾಲ್ಕನೆ ಮಹಡಿಯಲ್ಲಿರುವ ಅಂಗಡಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಅಕ್ರಮವಾಗಿ ಚಿನ್ನಾಭರಣ ಮಾರಾಟಕ್ಕೆ ಯತ್ನಿಸಿದ್ದ ನಾಲ್ವರನ್ನು ಬಂಧಿಸಿದ್ದಾರೆ.

ಚಿನ್ನಾಭರಣ ವ್ಯಾಪಾರಿಗಳಾದ ನಿಖಿಲ್‌, ಗೌರವ್‌, ಗೌರವ್‌ ಹಾಗೂ ಸಮೀರ್‌ ಬಂಧಿತರು. ಆರೋಪಿಗಳಿಂದ 1 ಕೆ.ಜಿ. 477 ಗ್ರಾಂ ಚಿನ್ನ ಹಾಗೂ 98 ಸಾವಿರ ನಗದು ಜಪ್ತಿ ಮಾಡಲಾಗಿದೆ. ಚಿನ್ನವನ್ನು ಕರಗಿಸಿ ಬಿಸ್ಕೆಟ್‌ಗಳನ್ನಾಗಿ ಪರಿವರ್ತಿಸುತ್ತಿದ್ದ ಆರೋಪಿಗಳು, ಬಳಿಕ ಆ ಚಿನ್ನದ ಮೇಲೆ ಶುದ್ಧತೆ ಬಗ್ಗೆ ನಕಲಿ ಸೀಲು ಹಾಕಿ ಮಾರುತ್ತಿದ್ದರು. ನಿಗದಿತ ಪ್ರಮಾಣಕ್ಕಿಂತ ಕಡಿಮೆ ಚಿನ್ನದ ಅಂಶ ಇರುತ್ತಿತ್ತು. ಇದರಿಂದ ಆರೋಪಿಗಳು ಲಾಭ ಮಾಡಿಕೊಳ್ಳುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

40 ಲಕ್ಷಕ್ಕಾಗಿ ಪತ್ನಿಯಿಂದಲೇ ಪತಿ ಕಿಡ್ನಾಪ್‌..!

ಮಹಾರಾಷ್ಟ್ರ ಮೂಲದ ಆರೋಪಿಗಳು, ಹಲವು ವರ್ಷಗಳಿಂದ ನಗರ್ತಪೇಟೆಯಲ್ಲಿ ಚಿನ್ನಾಭರಣ ಮಳಿಗೆ ಹೊಂದಿದ್ದಾರೆ. ಸಗಟು ರೂಪದಲ್ಲಿ ಚಿನ್ನ ಮಾರುತ್ತಿದ್ದರು. ಸಣ್ಣಪುಟ್ಟ ವ್ಯಾಪಾರಿಗಳಿಗೆ ಪರಿಶುದ್ಧವಾದ ಚಿನ್ನದ ಗಟ್ಟಿ ಎಂದು ಸುಳ್ಳು ಹೇಳಿ ಯಮಾರಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.