ಬೆಂಗಳೂರು(ಡಿ.05): ಹಣಕ್ಕಾಗಿ ಕೊರೋನಾ ಸೋಂಕಿತ ಎಂದು ನಕಲಿ ದಾಖಲೆ ಸೃಷ್ಟಿಸಿ ಪತಿಯನ್ನು ಆ್ಯಂಬುಲೆನ್ಸ್‌ನಲ್ಲಿ ಅಪಹರಿಸಿದ್ದ ಆತನ ಪತ್ನಿ ಹಾಗೂ ಆಕೆಯ ಸ್ನೇಹಿತನ ತಂಡ ಬಾಗಲಗುಂಟೆ ಠಾಣೆ ಪೊಲೀಸರ ಬಲೆಗೆ ಬಿದ್ದಿದೆ.

ತ್ಯಾಗರಾಜನಗರದ ಸೋಮಶೇಖರ್‌ ಎಂಬುವರೇ ಅಪಹೃತರಾಗಿದ್ದು, ಈ ಪ್ರಕರಣ ಸಂಬಂಧ ಅವರ ಪತ್ನಿ ಎ.ಸುಪ್ರಿಯಾ, ಆಕೆಯ ಸ್ನೇಹಿತ ಕೆ.ಗಗನ್‌, ಗಗನ್‌ ತಾಯಿ ಎನ್‌.ಲತಾ, ಪಿ.ಬಾಲಾಜಿ ತೇಜಸ್‌ ಹಾಗೂ ನಕಲಿ ವೈದ್ಯಕೀಯ ದಾಖಲೆ ನೀಡಿದ್ದ ಆರೋಪದ ಮೇರೆಗೆ ಕುಮಾರಸ್ವಾಮಿ ಲೇಔಟ್‌ನ ಎನ್‌.ಕಿರಣ್‌ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಆರ್‌.ಪ್ರಶಾಂತ್‌, ಸುಪ್ರೀತ್‌ ವೈ.ಪವಾರ್‌ ಹಾಗೂ ಅರವಿಂದ್‌ ರಾಮಪ್ಪ ಪತ್ತೆಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪತಿ ಹಣಕ್ಕೆ ಪತ್ನಿ ಖನ್ನ:

ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಸೋಮಶೇಖರ್‌, ನಗರದಲ್ಲಿ ನಿವೇಶನವೊಂದರ ಖರೀದಿಗೆ ಮುಂದಾಗಿದ್ದರು. ಇದಕ್ಕಾಗಿ .40 ಲಕ್ಷ ಹಣವನ್ನು ಅವರು ಕೂಡಿಸಿದ್ದರು. ಈ ಹಣ ಲಪಟಾಯಿಸಲು ಅವರ ಪತ್ನಿ ಸುಪ್ರಿಯಾ, ತನ್ನ ಸ್ನೇಹಿತ ಗಗನ್‌ ಹಾಗೂ ಆತನ ತಾಯಿ ಲತಾ ಜತೆ ಸೇರಿ ಸಂಚು ರೂಪಿಸಿದ್ದಳು. ಈ ಕೃತ್ಯಕ್ಕೆ ಹಣದಾಸೆ ತೋರಿಸಿ ಇನ್ನುಳಿದ ಆರೋಪಿಗಳನ್ನು ಗಗನ್‌ ಒಗ್ಗೂಡಿಸಿದ್ದ. ಹಣದಾಸೆಗೆ ಬಿದ್ದು ಪತಿಯನ್ನು ಅಪಹರಿಸಿ ಈಗ ಆಕೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಮಶಾನದ ಬಳಿ ಖಾರದಪುಡು ಚೆಲ್ಲಿದ್ದ ಒಂಟಿ ಕಾರು ಬಿಚ್ಚಿಟ್ಟ 30  ಕೋಟಿ ರಹಸ್ಯ

ನ.1ರಂದು ನಿವೇಶನವೊಂದನ್ನು ನೋಡಿ ಮಧ್ಯಾಹ್ನ 2 ಗಂಟೆಗೆ ಮನೆಗೆ ಸೋಮಶೇಖರ್‌ ಮರಳಿದ್ದರು. ಊಟ ಮಾಡಿದ ಬಳಿಕ ಸುಪ್ರಿಯಾ, ತನಗೆ ವಿಪರೀತ ಹೊಟ್ಟೆನೋವು. ಕೂಡಲೇ ಮಾತ್ರೆ ತೆಗೆದುಕೊಂಡು ಬನ್ನಿ ಎಂದು ಸುಳ್ಳು ಹೇಳಿ ಪತಿಯನ್ನು ಮನೆಯಿಂದ ಕಳುಹಿಸಿದ್ದಳು. ಆ ವೇಳೆ ಮೆಡಿಕಲ್‌ ಶಾಪ್‌ ಬಳಿ ಆ್ಯಂಬುಲೆನ್ಸ್‌ನಲ್ಲಿ ಗಗನ್‌ನ ಸಹಚರರು ಕಾಯುತ್ತಿದ್ದರು. ಮಾತ್ರೆ ಖರೀದಿಗೆ ಸೋಮಶೇಖರ್‌ ಬರುತ್ತಿದ್ದಂತೆ ಆರೋಪಿಗಳು, ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದಿರುವ ಕೊರೋನಾ ಸೋಕಿಂತ ಎಂದು ಹೇಳಿ ಸೋಮಶೇಖರ್‌ನನ್ನು ಆ್ಯಂಬುಲೆನ್ಸ್‌ಗೆ ಬಲವಂತವಾಗಿ ಹತ್ತಿಸಿಕೊಂಡಿದ್ದರು. ನಂತರ ಚಾಮರಾಜನಗರಕ್ಕೆ ಕರೆದೊಯ್ದು ತೋಟದ ಮನೆಯಲ್ಲಿ ಒತ್ತೆಯಾಗಿಟ್ಟುಕೊಂಡಿದ್ದರು.

ನಿನ್ನನ್ನು ಬಿಡುಗಡೆ ಮಾಡಬೇಕಾದರೆ .40 ಲಕ್ಷ ನೀಡುವಂತೆ ಅಪಹರಣಕಾರರು ಬೇಡಿಕೆ ಇಟ್ಟಿದ್ದರು. ಅಲ್ಲದೆ, ಸೋಮಶೇಖರ್‌ನಿಂದ ಡೆಬಿಟ್‌ ಹಾಗೂ ಕ್ರೆಡಿಟ್‌ ಕಾರ್ಡ್‌ ಕಸಿದುಕೊಂಡ ಆರೋಪಿಗಳು, ನಕಲಿ ಪಾಸ್‌ವರ್ಡ್‌ ಹೇಳಿದ್ದಕ್ಕೆ ಆತನ ಮೇಲೆ ಹಲ್ಲೆ ನಡೆಸಿದ್ದರು. ಅಷ್ಟರಲ್ಲಿ ತೋಟದ ಮನೆಗೆ ಆಗಮಿಸಿದ ಗಗನ್‌ ಹಾಗೂ ಆತನ ತಾಯಿ, ಹಣ ಕೊಡಲು ನಿರಾಕರಿಸಿದ ಸೋಮಶೇಖರ್‌ ಕೈ-ಕಾಲು ಕಟ್ಟಿಹಾಕಿ ಅವರು ಹಲ್ಲೆ ನಡೆಸಿದ್ದರು. ಈ ಹಿಂಸೆ ಸಹಿಸಲಾರದೆ ಸೋಮಶೇಖರ್‌, ಗೆಳೆಯರಿಗೆ ನೆರವು ಕೋರಿದ್ದರು.

ಸ್ನೇಹಿತರಿಗೆ ಕರೆ ಮಾಡಿ ಬಚಾವ್‌ ಆದ್ರು

ತನ್ನ ಕೆಲವು ಸ್ನೇಹಿತರಿಗೆ ಕರೆ ಮಾಡಿ ತಕ್ಷಣವೇ .10 ಲಕ್ಷ ಹಣವನ್ನು ಪತ್ನಿ ಸುಪ್ರಿಯಾಳಿಗೆ ಕೊಡುವಂತೆ ಸೋಮಶೇಖರ್‌ ಹೇಳಿದ್ದರು. ಆದರೆ ಗೆಳೆಯನ ಮಾತುಗಾರಿಕೆಯಿಂದ ಶಂಕಿತರಾದ ಸೋಮಶೇಖರ್‌ನ ಮಿತ್ರರು, ಕೂಡಲೇ ಸುಪ್ರಿಯಾಳಿಗೆ ಕರೆ ಮಾಡಿ ವಿಚಾರಿಸಿದ್ದರು. ಆಗ ತನ್ನ ಪತಿಗೆ ಕೊರೋನಾ ಸೋಂಕಿತರಾಗಿ ಮಾಗಡಿ ರಸ್ತೆಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದಿದ್ದಳು. ಈ ಮಾತು ನಂಬದ ಆ ಸ್ನೇಹಿತರು, ಕೊನೆಗೆ ಬಾಗಲಗುಂಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಅದರಂತೆ ಪೊಲೀಸರು, ಸೋಮಶೇಖರ್‌ ಮನೆಗೆ ತೆರಳಿ ಆತನ ಪತ್ನಿ ಸುಪ್ರಿಯಾಳನ್ನು ವಿಚಾರಣೆ ನಡೆಸಿದ್ದರು. ಆ ವೇಳೆ ಆಕೆಯ ಮುಗ್ಧಳಂತೆ ನಟಿಸಿದ್ದಳು. ಬಳಿಕ ಗೆಳೆಯ ಗಗನ್‌ಗೆ ಕರೆ ಮಾಡಿದ ಸುಪ್ರಿಯಾ, ಪೊಲೀಸರಿಗೆ ಅಪಹರಣ ವಿಷಯ ಗೊತ್ತಾಗಿದೆ ಎಂದಿದ್ದಳು. ಇದರಿಂದ ಭಯಗೊಂಡ ಗಗನ್‌, ಸೋಮಶೇಖರ್‌ ಮೂಲಕ ಆತನ ಸ್ನೇಹಿತರಿಗೆ ಕರೆ ಮಾಡಿಸಿ ತಾನು ಆಸ್ಪತ್ರೆಯಿಂದ ಡಿಸ್ಚಾಜ್‌ರ್‍ ಆಗಿ ನ.3ರಂದು ಮನೆಗೆ ಮರಳುತ್ತಿರುವುದಾಗಿ ಹೇಳಿದ್ದ. ಆಗ ಗಗನ್‌ ಹಾಗೂ ಆತನ ತಾಯಿ ಲತಾ, ಸೋಮಶೇಖರ್‌ನನ್ನು ಮನೆಗೆ ಕರೆ ತಂದು ಬಿಟ್ಟು ಹೋಗಿದ್ದರು. ಆ ವೇಳೆ ಅವರಿಬ್ಬರನ್ನು ಹಿಡಿದು ಪೊಲೀಸರಿಗೆ ಸೋಮಶೇಖರ್‌ ಗೆಳೆಯರು ಒಪ್ಪಿಸಿದ್ದರು. ವಿಚಾರಿಸಿದಾಗ ಅಪಹರಣ ನಾಟಕ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೋಂಕಿತ ಎಂಬ ನಾಟಕ

ಕೊರೋನಾ ವೈದ್ಯಕೀಯ ಸೇವೆಗೆ ಕಿರಣ್‌ ಕುಮಾರ್‌ನನ್ನು ಹೊರಗುತ್ತಿಗೆ ಆಧಾರದಡಿ ಬಿಬಿಎಂಪಿ ನೇಮಕ ಮಾಡಿತ್ತು. ಬಿಬಿಎಂಪಿಯಲ್ಲಿ ಉದ್ಯೋಗದಲ್ಲಿರುವ ಲತಾ, ವೈದ್ಯರಿಗೆ ಪುಸಲಾಯಿಸಿ ಸೋಮಶೇಖರ್‌ ಸೋಂಕಿತ ಎಂದು ವೈದ್ಯಕೀಯ ದಾಖಲೆ ಪಡೆದಿದ್ದಳು. ಈ ಆರೋಪದ ಬಂಧಿತನಾಗಿದ್ದ ವೈದ್ಯ ಕಿರಣ್‌, ಈಗ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.