Asianet Suvarna News Asianet Suvarna News

ಬೆಂಗಳೂರು: ನಕಲಿ ಡೈಮಂಡ್‌ ಮಾರಲು ಯತ್ನ, ನಾಲ್ವರ ಬಂಧನ

ಬೆಂಗಳೂರು ಮೂಲದ ರವಿ, ನವೀನ್‌ ಕುಮಾರ್‌, ಗೂರ್‌ ಅಹಮದ್‌ ಹಾಗೂ ಅಬ್ದುಲ್‌ ದಸ್ತಗಿರ್‌ ಬಂಧಿತರು. ಆರೋಪಿಗಳಿಂದ ನಕಲಿ ಡೈಮಂಡ್‌ ಹರಳುಗಳು, ಹರಳು ಪರೀಕ್ಷಿಸುವ ಯಂತ್ರ ಸೇರಿದಂತೆ ಕೆಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಹೈದರಾಬಾದ್‌ನ ರಾಜಮಂಡ್ರಿ ಮೂಲದ ಲಕ್ಷ್ಮೀನಾರಾಯಣ ಎಂಬುವವರು ನೀಡಿದ ದೂರಿನ ಮೇರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. 

Four Arrested For Trying to Sell Fake Diamonds in Bengaluru grg
Author
First Published Mar 19, 2024, 8:30 AM IST

ಬೆಂಗಳೂರು(ಮಾ.19):  ನಕಲಿ ವಜ್ರದ ಹರಳುಗಳನ್ನು ಅಸಲಿ ಎಂದು ವ್ಯಕ್ತಿಯೊಬ್ಬರನ್ನು ನಂಬಿಸಿ ವಂಚಿಸಲು ಯತ್ನಿಸಿದ ಆರೋಪದಡಿ ನಾಲ್ವರು ಆರೋಪಿಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಮೂಲದ ರವಿ, ನವೀನ್‌ ಕುಮಾರ್‌, ಗೂರ್‌ ಅಹಮದ್‌ ಹಾಗೂ ಅಬ್ದುಲ್‌ ದಸ್ತಗಿರ್‌ ಬಂಧಿತರು. ಆರೋಪಿಗಳಿಂದ ನಕಲಿ ಡೈಮಂಡ್‌ ಹರಳುಗಳು, ಹರಳು ಪರೀಕ್ಷಿಸುವ ಯಂತ್ರ ಸೇರಿದಂತೆ ಕೆಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಹೈದರಾಬಾದ್‌ನ ರಾಜಮಂಡ್ರಿ ಮೂಲದ ಲಕ್ಷ್ಮೀನಾರಾಯಣ ಎಂಬುವವರು ನೀಡಿದ ದೂರಿನ ಮೇರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ತಿಗಾಗಿ ತಂದೆಯನ್ನೇ ಗೃಹ ಬಂಧನದಲ್ಲಿಟ್ಟ ಪಾಪಿ ಮಕ್ಕಳು! ಕಂಪನಿ ಮಾಲೀಕನಿಗೆ ಇದೆಂಥಾ ಶಿಕ್ಷೆ ?

ಘಟನೆ ವಿವರ:

ದೂರುದಾರ ಲಕ್ಷ್ಮೀನಾರಾಯಣ ಅವರಿಗೆ ಮಾ.14ರಂದು ಪರಿಚಿತ ರವಿ ವಾಟ್ಸಾಪ್‌ ಕರೆ ಮಾಡಿ ವ್ಯವಹಾರ ಸಂಬಂಧ ಮಾತನಾಡಲು ವಿಮಾನ ನಿಲ್ದಾಣದ ತಾಜ್‌ ಹೋಟೆಲ್‌ಗೆ ಬರುವಂತೆ ತಿಳಿಸಿದ್ದಾನೆ. ಅದರಂತೆ ಲಕ್ಷ್ಮೀನಾರಾಯಣ ಅವರು ಮಾ.15ರಂದು ಬೆಳಗ್ಗೆ ತಮ್ಮ ಸ್ನೇಹಿತರಾದ ನಾಗೇಂದ್ರ ಮತ್ತು ರಾಮುಕುಮಾರ್‌ ಜತೆಗೆ ಹೋಟೆಲ್‌ಗೆ ಬಂದಿದ್ದಾರೆ.

ಸ್ವಾಮೀಜಿ ಆಶೀರ್ವಾದ ಪಡೆದರು:

ಈ ವೇಳೆ ಹೋಟೆಲ್‌ನ 403ನೇ ರೂಮ್‌ನಲ್ಲಿ ಶ್ರೀಶೈಲ ಸ್ವಾಮೀಜಿ ತಂಗಿರುವ ವಿಚಾರ ತಿಳಿದು ಲಕ್ಷ್ಮೀನಾರಾಯಣ ಹಾಗೂ ಅವರ ಇಬ್ಬರು ಸ್ನೇಹಿತರು ಸ್ವಾಮೀಜಿ ಭೇಟಿಯಾಗಿದ್ದಾರೆ. ಅಷ್ಟರಲ್ಲಿ ಆರೋಪಿ ರವಿ ಬಂದು ಸ್ವಾಮೀಜಿ ಆಶೀರ್ವಾದ ಪಡೆದಿದ್ದಾನೆ. ಬಳಿಕ ಎಲ್ಲರೂ ಅಲ್ಲಿಂದ ಹೊರಟು ಹೊಟೇಲ್‌ ಲಾಬಿಯಲ್ಲಿ ಕುಳಿತುಕೊಂಡಿದ್ದಾರೆ.

ಶಿವಮೊಗ್ಗ: ಇನ್ನೋವಾ ಕಾರಿಗೆ ಬೆಂಕಿಯಿಟ್ಟು ಯುವಕನ ಭೀಕರ ಕೊಲೆ

ನಕಲಿ ವಜ್ರದ ಹರಳು ತೋರಿಸಿದ

ಈ ಸಂದರ್ಭದಲ್ಲಿ ರವಿ ತನ್ನ ಜತೆಯಲ್ಲಿ ಕರೆತಂದಿದ್ದ ನವೀನ್‌ ಕುಮಾರ್‌, ಗೂರ್‌ ಅಹಮದ್‌ ಮತ್ತು ಅಬ್ದುಲ್‌ ದಸ್ತಗಿರ್‌ ಎಂಬುವವರನ್ನು ಪರಿಚಯಿಸಿ, ‘ಇವರು ವಜ್ರದ ವ್ಯವಹಾರ ಮಾಡುತ್ತಿದ್ದಾರೆ’ ಎಂದು ತನ್ನ ಬಳಿ ಇದ್ದ ಬ್ಯಾಗ್‌ ತೆರೆದಿದ್ದಾನೆ. ಅದರಲ್ಲಿನ ಸುಮಾರು 10 ಒಡವೆ ಬಾಕ್ಸ್‌ ತೆಗೆದು ‘ಇವು ಡೈಮಂಡ್‌ ಹರಳುಗಳು. ಇವುಗಳ ಮಾರುಕಟ್ಟೆ ಬೆಲೆ ಸುಮಾರು ₹10 ಕೋಟಿ ಆಗುತ್ತದೆ’ ಎಂದಿದ್ದಾನೆ. ಎರಡು ಮೆಷಿನ್‌ಗಳಿಂದ ಆ ಹರಗಳುಗಳನ್ನು ತಪಾಸಣೆ ಮಾಡಿ ‘ಇವು ಅಸಲಿ ವಜ್ರದ ಹರಳುಗಳು’ ಎಂದಿದ್ದಾನೆ. ‘ನೀವು ಒಪ್ಪಿಕೊಂಡರೆ, ಸುಮಾರು 1ರಿಂದ 3 ಕೋಟಿ ರು.ಗೆ ಮಾರಾಟ ಮಾಡುವುದಾಗಿ’ ತಿಳಿಸಿದ್ದಾನೆ.

ಎಚ್ಚತ್ತುಕೊಂಡು ದೂರು

ಈ ವೇಳೆ ಲಕ್ಷ್ಮೀನಾರಾಯಣ ಅವರು ತಮ್ಮ ಸ್ನೇಹಿತರ ಜತೆಗೆ ಹರಳು ಪರಿಶೀಲಿಸಿದಾಗ ಅವು ನಕಲಿ ಹರಳುಗಳು ಎಂಬುದು ಗೊತ್ತಾಗಿದೆ. ಬಳಿಕ ಯಾವುದೇ ವ್ಯವಹಾರ ಕುದುರಿಸದೆ ಅಲ್ಲಿಂದ ಎದ್ದು ಬಂದಿದ್ದಾರೆ. ಬಳಿಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್‌ ಠಾಣೆಗೆ ತೆರಳಿ, ತಮಗೆ ನಕಲಿ ವಜ್ರದ ಹರಳು ತೋರಿಸಿ ಅಸಲಿ ಎಂದು ನಂಬಿಸಿ ವಂಚಿಸಲು ಯತ್ನಿಸಿದ ರವಿ ಸೇರಿ ನಾಲ್ವರ ವಿರುದ್ಧ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios