*  ಚಿನ್ನಾಭರಣ ಮಳಿಗೆ ವ್ಯವಸ್ಥಾಪಕನಿಗೆ ಬೆದರಿಸಿ 1.7 ಕೇಜಿ ಚಿನ್ನ ದೋಚಿದ್ದ ಗ್ಯಾಂಗ್‌*  ಬೆಂಗಳೂರಿಗೆ ಬರುವಾಗ ಖಾಕಿ ಬಲೆಗೆ*  ಮತ್ತೊಬ್ಬ ಆರೋಪಿ ಬಂಧನಕ್ಕೆ ಬಲೆ ಬೀಸಿದ ಪೊಲೀಸರು 

ಬೆಂಗಳೂರು(ಮಾ.20):  ಹಾಲ್‌ ಮಾರ್ಕ್ ಮುದ್ರೆ ಹಾಕಿಸಲು ತೆರಳುತ್ತಿದ್ದ ಚಿನ್ನಾಭರಣ(Gold) ಕುಸುರಿ ಅಂಗಡಿ ವ್ಯವಸ್ಥಾಪಕನನ್ನು ಬೆದರಿಸಿ 1.7 ಕೆ.ಜಿ. ಚಿನ್ನಾಭರಣ ದೋಚಿ(Robbery) ಪರಾರಿಯಾಗಿದ್ದ ಇಬ್ಬರು ಹಾಗೂ ಚಿನ್ನಾಭರಣ ವಿಲೇವಾರಿಗೆ ಸಹಕರಿಸಿದ್ದ ಇಬ್ಬರು ಸೇರಿ ನಾಲ್ವರನ್ನು ಹಲಸೂರು ಗೇಟ್‌ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

ಮಹಾರಾಷ್ಟ್ರದ ನಾಗಪುರ ಮೂಲದ ಅಲಿ ರಾಜಾ (36), ನಾದಿರ್‌ ಜೈದಿ (50), ಚಿನ್ನಾಭರಣ ವಿಲೇವಾರಿಗೆ ಸಹಕರಿಸಿದ್ದ ಮೈಸೂರಿನ(Mysuru) ವಿಕಾಸ್‌ ಪಾಟೀಲ್‌(27) ಹಾಗೂ ಮೀರ್‌ ಹಸನ್‌ ರಾಜಾ (38) ಬಂಧಿತರು. ಪ್ರಕರಣದ ಮತ್ತೊಬ್ಬ ಆರೋಪಿ ತನ್ವಿರ್‌ ತಲೆಮರೆಸಿಕೊಂಡಿದ್ದು, ಬಂಧನಕ್ಕೆ(Arrest) ಬಲೆ ಬೀಸಲಾಗಿದೆ. ಬಂಧಿತ ಆರೋಪಿಗಳಿಂದ 1 ಕೆ.ಜಿ. ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bengaluru Crime: ರೌಡಿ ಭಾವನ ಹತ್ಯೆಗೆ ಜೈಲಲ್ಲೇ ಸುಪಾರಿ..!

ಪ್ರಕರಣದ ಹಿನ್ನೆಲೆ:

ರಾಜಾಜಿನಗರದ ಚೇತನ್‌ ಎಂಬುವವರು ಬಿ.ಜಿ.ಜ್ಯುವೆಲರಿ ಹೆಸರಿನ ಚಿನ್ನದ ಕುಸುರಿ ಅಂಗಡಿ ಹೊಂದಿದ್ದಾರೆ. ಆಭರಣ ತಯಾರಿಕೆ ಬಳಿಕ ನಗರ್ತ ಪೇಟೆಯಲ್ಲಿ ಹಾಲ್‌ ಮಾರ್ಕ್ ಹಾಕುತ್ತಿದ್ದರು. ಹೀಗಾಗಿ ಫೆ.12ರಂದು ಚೇತನ್‌ ಅವರು ತಮ್ಮ ಜ್ಯುವೆಲರಿ ಅಂಗಡಿಯ ವ್ಯವಸ್ಥಾಪಕ ಪ್ರಭುರಾಮ್‌ಗೆ 1.7 ಕೆ.ಜಿ. ಚಿನ್ನಾಭರಣ ಕೊಟ್ಟು ಹಾಲ್‌ ಮಾರ್ಕ್ ಹಾಕಿಸಿಕೊಂಡು ಬರುವಂತೆ ಸೂಚಿಸಿದ್ದರು. ಅದರಂತೆ ಪ್ರಭುರಾಮ್‌ ಅವರು ಸಂಜೆ 6ರ ಸುಮಾರಿಗೆ ಚಿನ್ನಾಭರಣ ತೆಗೆದುಕೊಂಡು ದ್ವಿಚಕ್ರ ವಾಹನದಲ್ಲಿ ನಗರ್ತಪೇಟೆಯಲ್ಲಿ ಹೋಗುವಾಗ, ಆರೋಪಿ ನಾದಿರ್‌ ಜೈದಿ ಏಕಾಏಕಿ ಪ್ರಭುರಾಮ್‌ನನ್ನು ಅಡ್ಡಗಟ್ಟಿದ್ದಾನೆ.

ನಾನು ದೈವಭಕ್ತ. ಚಿನ್ನಾಭರಣಕ್ಕೆ ಪೂಜೆ ಮಾಡಬೇಕು ಎಂದು ಹೇಳಿ ಬಲವಂತವಾಗಿ ಪಕ್ಕದ ರಸ್ತೆಗೆ ಕರೆದೊಯ್ದಿದ್ದಾನೆ. ಬಳಿಕ ಮತ್ತೋರ್ವ ಆರೋಪಿ(Accused) ಅಲಿ ರಾಜಾ ಅಲ್ಲಿಗೆ ಬಂದಿದ್ದಾನೆ. ಬ್ಯಾಗ್‌ನಲ್ಲಿ ಗನ್‌ ಇದೆ. ಕಿರುಚಾಡಿದರೆ ಸುಟ್ಟು ಬಿಡುವುದಾಗಿ ಆರೋಪಿಗಳು ಪ್ರಭುರಾಮ್‌ಗೆ ಬೆದರಿಸಿ ಚಿನ್ನಾಭರಣವಿದ್ದ ಬ್ಯಾಗ್‌ ಕಸಿದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Sex Racket : ಹೆಸರಿಗೆ ಸ್ಪಾ.. ಒಳಗೆ ಅದೇ ದಂಧೆ.. ಆನ್‌ಲೈನ್‌ನಲ್ಲೇ ವ್ಯವಹಾರ!

ಹಣದ ಆಸೆ ತೋರಿಸಿ ವಿಲೇವಾರಿ

ಆರೋಪಿಗಳು ಚಿನ್ನಾಭರಣ ದರೋಡೆ ಮಾಡಿದ ಬಳಿಕ ಮೈಸೂರಿಗೆ ತೆರಳಿದ್ದಾರೆ. ಬಳಿಕ ಪರಿಚಿತ ವಿಕಾಸ್‌ ಪಾಟೀಲ್‌ ಮತ್ತು ಮೀರ್‌ ಹಸನ್‌ ರಾಜಾನನ್ನು ಭೇಟಿಯಾಗಿ ಇವರ ಮೂಲಕ ಚಿನ್ನಾಭರಣ ವಿಲೇವಾರಿ ಮಾಡಿಸಿ ಮಹಾರಾಷ್ಟ್ರಕ್ಕೆ ಪರಾರಿಯಾಗಿದ್ದರು. ವಿಕಾಸ್‌ ಪಾಟೀಲ್‌ ಮತ್ತು ಹಸನ್‌ ರಾಜಾ ಹಣದಾಸೆಗಾಗಿ ಆರೋಪಿಗಳು ಕದ್ದ ತರುವ ಚಿನ್ನಾಭರಣ ವಿಲೇವಾರಿ ಮಾಡಿಸುತ್ತಿದ್ದರು. ಈ ಇಬ್ಬರು ಆರೋಪಿಗಳಿಗೆ ಹಲವು ವರ್ಷಗಳಿಂದ ಪರಿಚಿತರಾಗಿದ್ದು, ಈ ಹಿಂದೆಯೂ ಚಿನ್ನಾಭರಣ ವಿಲೇವಾರಿ ಮಾಡಿಸಿ ಹಣ ಪಡೆದುಕೊಂಡಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಬೆಂಗಳೂರಿಗೆ ಬರುವಾಗ ಖಾಕಿ ಬಲೆಗೆ!

ಆರೋಪಿಗಳು ಫೆ.12ರಂದು ನಗರ್ತಪೇಟೆಯಲ್ಲಿ ಪ್ರಭುರಾಮ್‌ನನ್ನು ಬೆದರಿಸಿ ಕರೆದೊಯ್ಯುವ ದೃಶ್ಯಾವಳಿಗಳು ಸಿಸಿಟಿವಿ(CCTV) ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯಾವಳಿಗಳ ಆಧರಿಸಿ ಪೊಲೀಸರು(Police) ಆರೋಪಿಗಳ ಚಹರೆ ಪತ್ತೆಹಚ್ಚಿದ್ದರು. ಆರೋಪಿಗಳ ಜಾಡು ಹಿಡಿದು ಹೊರಟಾಗ ಮಹಾರಾಷ್ಟ್ರದಲ್ಲಿರುವ(Maharashtra) ಬಗ್ಗೆ ಮಾಹಿತಿ ಸಿಕ್ಕಿತ್ತು. ಬಳಿಕ ಪೊಲೀಸರ ಒಂದು ತಂಡ ನಾಗಪುರಕ್ಕೆ ತೆರಳಿತ್ತು. ಅಷ್ಟರಲ್ಲಿ ಆರೋಪಿಗಳು ರೈಲಿನಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಪೊಲೀಸರು ಆರೋಪಿಗಳನ್ನು ಹಿಂಬಾಲಿಸಿ ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ. ಆರೋಪಿಗಳ ವಿರುದ್ಧ ಈ ಹಿಂದೆ ಪೀಣ್ಯ, ನಾಗಪುರ, ಆಗ್ರಾ, ದೆಹಲಿ ಸೇರಿದಂತೆ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದರೋಡೆ, ಸುಲಿಗೆ ಇನ್ನಿತರೆ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.