ಬೆಂಗಳೂರು: ಅಂಗಡಿ ಮಾಲೀಕನ ಮೇಲೆ ಸಿಟ್ಟಿಗೆ 110 ಲ್ಯಾಪ್ಟಾಪ್ಗಳನ್ನೇ ಕದ್ದರು..!
* ಲ್ಯಾಪ್‌ಟಾಪ್ ಖರೀದಿಗೆ ಬಂದಿದ್ದ ಅಸ್ಲಾಂ
* ಸಹಚರರೊಂದಿಗೆ ಸೇರಿ ಲ್ಯಾಪ್‌ಟಾಪ್ ಕಾರಲ್ಲಿ ಕದ್ದೊಯ್ದಿದ್ದ
* ಲ್ಯಾಪ್‌ಟಾಪ್ ಕದಿಯಲು ಸಂಚು ರೂಪಿಸಿದ್ದ ಆರೋಪಿಗಳು
ಬೆಂಗಳೂರು(ಜು.07): ಇತ್ತೀಚೆಗೆ ಸೋಮಶೆಟ್ಟಿಹಳ್ಳಿ ಸಮೀಪ ಮಳಿಗೆಯೊಂದರಿಂದ ಹಳೇ ಲ್ಯಾಪ್‌ಟಾಪ್ ಕದ್ದಿದ್ದ ನಾಲ್ವರು ಕಳ್ಳರನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಜಯ ನಗರದ ಚೋಳರ ಪಾಳ್ಯದ ಗುಜರಿ ವ್ಯಾಪಾರಿ ಅಸ್ಲಂ ಪಾಷಾ, ಜೆ.ಪಿ.ನಗರದ ಗಫರ್ ಲೇಔಟ್‌ನ ಬಟ್ಟೆವ್ಯಾಪಾರಿ ಯಾಸೀನ್ ಶರೀಫ್, ತುಮಕೂರಿನ ಮೊಬೈಲ್ ಟೆಂಪರ್ ಗ್ಲಾಸ್ ವ್ಯಾಪಾರಿ ರಫೀ ಹಾಗೂ ಕೆ.ಆರ್.ಪುರದ ಅಕ್ಬರ್ ಬಂಧಿತರಾಗಿದ್ದು, ಆರೋಪಿಗಳಿಂದ .5 ಲಕ್ಷ ಮೌಲ್ಯದ 110 ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳು ಸೋಮಶೆಟ್ಟಿಹಳ್ಳಿಯಲ್ಲಿ ಝಡ್‌ಎಂಆರ್ ಎಂಟರ್‌ಪ್ರೈಸಸ್ ಮಳಿಗೆ ಬೀಗ ಮುರಿದು ಲ್ಯಾಪ್‌ಟಾಪ್ ದೋಚಿದ್ದರು ಎಂದು ಪೊಲೀಸರು ಹೇಳಿದ್ದಾರೆ.
Chandrashekhar Guruji Murder: ಗುರೂಜಿ ಹಂತಕರನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರು
ಗ್ರಾಹಕರ ಸೋಗಿನಲ್ಲಿ ಬಂದು ತಪಾಸಣೆ:
ಕೆಲ ದಿನಗಳ ಹಿಂದೆ ಅಸ್ಲಂ ಪಾಷ ಸೆಕೆಂಡ್‌ಹ್ಯಾಂಡ್ ಲ್ಯಾಪ್‌ಟಾಪ್ ಕಡಿಮೆ ಬೆಲೆಗೆ ಖರೀದಿಸಿ ಮಾರಾಟ ಮಾಡುವ ವ್ಯವಹಾರ ಶುರು ಮಾಡಿದ್ದ. ಜೂ.10ರಂದು ಸೋಮಶೆಟ್ಟಿಯಲ್ಲಿ ಝಡ್‌ಎಂಆರ್ ಎಂಟರ್‌ಪ್ರೈಸಸ್ ಮಳಿಗೆಗೆ ಗ್ರಾಹಕರ ಸೋಗಿನಲ್ಲಿ ಲ್ಯಾಪ್‌ಟಾಪ್ ಖರೀದಿಗೆ ಪಾಷ ಬಂದಿದ್ದ. ಈ ಮಳಿಗೆಯಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳಲ್ಲಿ ಹಳೇ ಲ್ಯಾಪ್‌ಟಾಪ್ ಟೆಂಡರ್‌ನಲ್ಲಿ ಖರೀದಿಸಿ ಸವೀರ್‍ಸ್ ಮಾಡಿಸಿ ಮಾರಲಾಗುತ್ತಿತ್ತು. ಲ್ಯಾಪ್‌ಟಾಪ್ ಖರೀದಿಗೆ ಬಂದಿದ್ದಾಗ ಅಂಗಡಿ ಮಾಲಿಕನ ಜತೆ ಪಾಷನಿಗೆ ಜಗಳವಾಗಿತ್ತು. ಇದರಿಂದ ಕೆರಳಿದ ಆರೋಪಿ, ತನ್ನ ಸಹಚರರ ಜತೆ ಸೇರಿ ಲ್ಯಾಪ್‌ಟಾಪ್ ಕದಿಯಲು ಸಂಚು ರೂಪಿಸಿದ್ದ.
ಅಂತೆಯೇ ಜೂ.16ರ ರಾತ್ರಿ 9ಕ್ಕೆ ಅಂಗಡಿ ಮಾಲಿಕ ವ್ಯಾಪಾರ ಮುಗಿಸಿ ಮನೆಗೆ ಮರಳಿದ ಬಳಿಕ ಅಂಗಡಿಗೆ ಕನ್ನ ಹಾಕಿದ ಆರೋಪಿಗಳು, ಆ ಮಳಿಗೆಯಲ್ಲಿ 110 ಲ್ಯಾಪ್‌ಟಾಪ್‌ಗಳನ್ನು ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಸೋಲದೇವನಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ಜೆ.ಗೌತಮ್ ನೇತೃತ್ವದ ತಂಡವು, ಘಟನಾ ಸ್ಥಳದಲ್ಲಿ ಸಿಕ್ಕ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಮತ್ತು ಮೊಬೈಲ್ ನೆಟ್‌ವರ್ಕ್ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.