ಬೆಂಗಳೂರು(ನ.15): ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಮಾಸ್ಕ್‌ ಧರಿಸಿದವರ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಖೋಟಾ ನೋಟು ಜಾಲದ ಮೂವರು ಆರೋಪಿಗಳು ಮೈಕೋ ಲೇಔಟ್‌ಠಾಣೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ತಮಿಳುನಾಡು ಮೂಲದ ಸುಮನ್‌, ದೇವರಾಜನ್‌ ಮತ್ತು ಮುನಿಶೇಖರ್‌ ಬಂಧಿತರು. ಆರೋಪಿಗಳಿಂದ 2000 ಮುಖಬೆಲೆಯ 389 ನಕಲಿ ನೋಟು, ಕಾರು ಜಪ್ತಿ ಮಾಡಲಾಗಿದೆ. ಬಿಟಿಎಂ ಲೇಔಟ್‌ಬಳಿ ಗುರುವಾರ ಸಂಜೆ ಪೊಲೀಸರು ಮಾಸ್ಕ್‌ ಧರಿಸದವರ ತಪಾಸಣೆಯಲ್ಲಿ ತೊಡಗಿದ್ದರು. ಆ ವೇಳೆ ಕಾರಿನಲ್ಲಿ ಬಂದ ಮೂವರು ಪೊಲೀಸರು ಎದುರಾದ ಕೂಡಲೇ ತಬ್ಬಿಬ್ಬಾಗಿದ್ದಾರೆ. ಇದರಿಂದ ಶಂಕೆಗೊಂಡ ಸಿಬ್ಬಂದಿ, ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಪ್ರಶ್ನಿಸಿದಾಗ ನಕಲಿ ನೋಟಗಳು ಪತ್ತೆಯಾಗಿವೆ.

ಕರ್ತವ್ಯ ನಿರತ ಪಿಎಸ್‌ಐ ಮೇಲೆ ಮಾರಣಾಂತಿಕ ಹಲ್ಲೆ: ಆರೋಪಿ ಬಂಧನ

ಅಸಲಿ ಬದಲು ಜೆರಾಕ್ಸ್‌ನೋಟು

ತಮಿಳುನಾಡು ಮೂಲದ ಆರೋಪಿಗಳು, 2000 ಮುಖಬೆಲೆಯ ನೋಟುಗಳನ್ನು ಕಲರ್‌ಜೆರಾಕ್ಸ್‌ಮಾಡಿ ಮಾರಾಟಕ್ಕೆ ಯತ್ನಿಸಿದ್ದರು. ಈ ಸಲುವಾಗಿಯೇ ತಮ್ಮೂರಿನಿಂದ ನಗರಕ್ಕೆ ಬಂದಿದ್ದರು. ಇದೇ ವೇಳೆ ಬಿಟಿಎಂ ಲೇಔಟ್‌ ಹತ್ತಿರ ಸಬ್‌ಇನ್ಸ್‌ಪೆಕ್ಟರ್‌ ರಾಜ್‌ಕುಮಾರ್‌ ಜೋಡಟ್ಟಿ ಹಾಗೂ ಹೆಡ್‌ಕಾನ್‌ಸ್ಟೇಬಲ್‌ ಪ್ರಮೋದ್‌, ಮಾಸ್ಕ್‌  ಧರಿಸದವರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದರು. ಅದೇ ಹೊತ್ತಿಗೆ ಆರೋಪಿಗಳ ಕಾರು ಬಂದಿದ್ದು, ಮಾಸ್ಕ್‌ಧರಿಸದ ಕಾರಣ ಕಾರನ್ನು ತಡೆದಿದ್ದಾರೆ. ಕಾರು ತಡೆದು ಕೂಡಲೇ ಆರೋಪಿಗಳು ಭೀತಿಗೊಂಡಿದ್ದು, ಈ ನಡವಳಿಕೆ ಪೊಲೀಸರಲ್ಲಿ ಅನುಮಾನ ಮೂಡಿಸಿತು. ಕಾರನ್ನು ಪರಿಶೀಲಿಸಿದಾಗ ನಕಲಿ ನೋಟಿ ಕಂತೆಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.