ಬೆಂಗಳೂರು(ಫೆ.01):  ಮಾಜಿ ಮುಖ್ಯಮಂತ್ರಿ ದಿ.ಧರಂಸಿಂಗ್‌ ಅವರ ದೂರದ ಸಂಬಂಧಿಯೊಬ್ಬನನ್ನು ಅಪಹರಣ ಮಾಡಿ ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸಿದ್ಧಾರ್ಥ್‌ ಸಿಂಗ್‌ (28) ಕೊಲೆಯಾದವರು. ಈ ಸಂಬಂಧ ಓರ್ವ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಆತ ಕೊಟ್ಟ ಮಾಹಿತಿ ಮೇರೆಗೆ ಸಿದ್ಧಾರ್ಥ್‌ನನ್ನು ಹೂತು ಹಾಕಲಾಗಿರುವ ಆಂಧ್ರಪ್ರದೇಶದ ತಿರುಪತಿಗೆ ಅಮೃತಹಳ್ಳಿ ಠಾಣೆಯ ತಂಡವೊಂದು ತೆರಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿದ್ಧಾರ್ಥ್‌ ಅವರು ಸ್ವಂತ ವ್ಯವಹಾರ ಹೊಂದಿದ್ದು, ಕಳೆದ ಎರಡು ತಿಂಗಳಿಂದ ದಾಸರಹಳ್ಳಿಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ಒಬ್ಬರೇ ನೆಲೆಸಿದ್ದರು. ಜ.19ರಂದು ಬೆಳಗ್ಗೆ ಐದು ಗಂಟೆ ಸುಮಾರಿಗೆ ತನ್ನ ತಂದೆಗೆ ವಾಟ್ಸಪ್‌ ಮಾಡಿದ್ದ ಸಿದ್ಧಾರ್ಥ್‌, ಸ್ನೇಹಿತರನ್ನು ಭೇಟಿಯಾಗಲು ಅಮೆರಿಕಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದರು. ಬಳಿಕ ಪುತ್ರನಿಗೆ ತಂದೆ ದೇವೇಂದರ್‌ ಸಿಂಗ್‌ ಕರೆ ಮಾಡಿದರೆ ಸ್ವಿಚ್‌ಆಫ್‌ ಎಂದು ಬರುತ್ತಿತ್ತು. ಅನುಮಾನಗೊಂಡು ದೇವೇಂದರ್‌ ಸಿಂಗ್‌ ಅವರು ಪುತ್ರ ನಾಪತ್ತೆಯಾಗಿರುವುದಾಗಿ ಅಮೃತ್‌ಹಳ್ಳಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಉಸಿರುಗಟ್ಟಿ ಸತ್ತಳು ಪತ್ನಿ : ಪತಿಯೇ ಮಾಡಿ ಬೇರೆ ಕಥೆ ಹೇಳಿದ

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಅಪಾರ್ಟ್‌ಮೆಂಟ್‌ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದರು. ಅಲ್ಲದೆ, ಸಿದ್ಧಾರ್ಥ್‌ ಮೊಬೈಲ್‌ಗೆ ಕೊನೆಯದ್ದಾಗಿ ಬಂದಿದ್ದ ಕರೆಗಳ ವಿವರ ಪರಿಶೀಲಿಸಿದಾಗ ಅಪಹರಣವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಓರ್ವ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳು ಕಾರಿನಲ್ಲಿ ಸಿದ್ಧಾರ್ಥ್‌ನನ್ನು ಉಸಿರುಗಟ್ಟಿಸಿ ಹತ್ಯೆಗೈದು ಬಳಿಕ ತಿರುಪತಿಯಿಂದ 70 ಕಿ.ಮೀಟರ್‌ ದೂರದಲ್ಲಿರುವ ಅರಣ್ಯ ಪ್ರದೇಶವೊಂದರಲ್ಲಿ ಹೂತು ಹಾಕಿದ್ದಾರೆ.

ಸ್ಥಳೀಯ ತಹಸೀಲ್ದಾರ್‌ ಸಮ್ಮುಖದಲ್ಲಿ ಮೃತ ದೇಹವನ್ನು ಹೊರ ತೆಗೆಯಬೇಕಿದೆ. ಯಾವ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂಬುದು ತಿಳಿದು ಬಂದಿಲ್ಲ. ಪ್ರಮುಖ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.