ತಿಪಟೂರು (ಜ.31):  ಹಣದ ಆಸೆ ಮತ್ತು ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಪತಿ, ಹೆಂಡತಿಯನ್ನು ಹೊಡೆದು, ಉಸಿರುಗಟ್ಟಿಸಿ ಕೊಂದ ಘಟನೆ ಘಟನೆ ತಾಲೂಕಿನ ಆದಿನಾಯಕನಹಳ್ಳಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

ಬಿ.ಸಾಹಿರಾ ಮೃತಪಟ್ಟಮಹಿಳೆ, ಜಾಫರ್‌ ಕೊಲೆ ಮಾಡಿದವ. ಜಾಫರ್‌ಗೆ ಸಾಹಿರಾ ಎರಡನೇ ಹೆಂಡತಿ. ಗ್ರಾಮದಲ್ಲಿ ಮನೆ ಕಟ್ಟಬೇಕು ಎಂದು ತವರು ಮನೆಯಿಂದ ಹಣ ತರಲು ಪೀಡಿಸುತ್ತಿದ್ದ. ಇದರಿಂದ ಸಾಹಿರಾ ತವರು ಮನೆಯಿಂದ 5 ಲಕ್ಷ ರು. ಹಣವನ್ನು ಸಾಲವಾಗಿ ಕೊಡಿಸಿದ್ದಳು. ಇಷ್ಟಕ್ಕೇ ಸುಮ್ಮನಾಗದ ಜಾಫರ್‌ ಇನ್ನೂ ಹಣ ತರಲು ಪೀಡಿಸುತ್ತಿದ್ದ. ಅಲ್ಲದೇ ಸಾಹಿರಾಗೆ ಮದುವೆಯಾಗಿ 4 ವರ್ಷವಾದರೂ ಮಕ್ಕಳಾಗಿರಲಿಲ್ಲ. ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೂ ಹೆಂಡತಿಯನ್ನು ಹಿಂಸಿಸುತ್ತಿದ್ದ ಎನ್ನಲಾಗಿದೆ.

ಮನೆಗೆ ಬಾರದ ಗಂಡ : ಇತ್ತ ಕೊನೆಯಾದ ಸುರಸುಂದರಿ ಹೆಂಡತಿ ಬದುಕು

ಶನಿವಾರ ಬೆಳಗ್ಗೆ ಇಬ್ಬರ ಮಧ್ಯೆ ಜಗಳ ನಡೆದು ಸಾಹಿರಾಳನ್ನು ಜಾಫರ್‌ ಹೊಡೆದಿದ್ದಾನೆ. ಅಲ್ಲದೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಶನಿವಾರ ಬೆಳಗ್ಗೆ 6 ಗಂಟೆಗೆ ಅವಳ ತವರು ಮನೆಗೆ ಕರೆ ಮಾಡಿ ಸಾಹಿರಾಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾನೆ. ತವರು ಮನೆಯವರು ಬಂದು ನೋಡಿದಾಗ ಸಾಹಿರಾಳ ಮೈಮೇಲೆ ಬರೆ, ಗಾಯಗಳು ಕಂಡುಬಂದಿವೆ. ಇದರಿಂದ ಅನುಮಾನಗೊಂಡ ಸಾಹಿರಾಳ ಅಣ್ಣ ರಫೀಕ್‌, ತನ್ನ ತಂಗಿಯನ್ನು ಕೊಲೆ ಮಾಡಲಾಗಿದೆ ಎಂದು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಫರ್‌ ಮತ್ತು ಅವನ ತಂದೆ, ತಾಯಿ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಇನ್ನಿಬ್ಬರು ಪ್ರಕರಣದಲ್ಲಿ ಶಾಮೀಲಾಗಿದ್ದು, ಅವರ ಬಂಧನಕ್ಕೆ ಪೊಲೀಸರು ತಲಾಶ್‌ ನಡೆಸುತ್ತಿದ್ದಾರೆ.