ನವದೆಹಲಿ(ಅ. 12)  ಬಾಲಿವುಡ್ ಡ್ರಗ್ಸ್ ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ಒಂದಿಷ್ಟು ಮಾಧ್ಯಮಗಳ ವಿರುದ್ಧ ಬಾಲಿವುಡ್ ನಿರ್ಮಾಪಕರು ಕೆಂಡ ಕಾರಿದ್ದು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ರಿಪಬ್ಲಿಕ್ ಟಿವಿ ಮತ್ತು ಟೈಮ್ಸ್ ನೌನ ವರದಿಯ ವಿರುದ್ಧ ಪ್ರಮುಖ ಬಾಲಿವುಡ್ ನಿರ್ಮಾಪಕರು ಸೋಮವಾರ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.  ಡ್ರಗ್ಸ್ ಪ್ರಕರಣದ ನಂತರ ಬಾಲಿವುಡ್ ನ್ನು ಮಾಧ್ಯಮಗಳು ತಮಗೆ ಬೇಕಾದಂತೆ  ಆಡಿಕೊಳ್ಳುತ್ತಿವೆ. ಇಡೀ ಬಾಲಿವುಡ್ ಡ್ರಗ್ಸ್ ನಲ್ಲಿ ಮುಳುಗಿದೆ ಎಂಬ ಅರ್ಥದಲ್ಲಿ ವರದಿ ಪ್ರಸಾರ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.

ಡ್ರಗ್ಸ್ ತಗೋತೀರಾ ಎಂದು ನಟಿಗೆ ನೇರವಾದ ಪ್ರಶ್ನೆ; ಉತ್ತರ!

ಶಾರುಕ್ ಖಾನ್, ಅಮೀರ್ ಖಾನ್, ಯಶ್ ರಾಜ್ ಹಾಗೂ ಕರಣ್ ಜೋಹರ್ ಸೇರಿದಂತೆ 34 ಬಾಲಿವುಡ್ ನಿರ್ಮಾಪಕರು ಮತ್ತು ನಾಲ್ಕು ಚಿತ್ರೋದ್ಯಮ ಸಂಘಟನೆಗಳು ರಿಪ್ಲಬಿಕ್ ಟಿವಿ ಮತ್ತು ಟೈಮ್ಸ್ ನೌ ವಿರುದ್ಧ ಪ್ರಕರಣ ದಾಖಲಿಸಿವೆ.  ಅವಹೇಳನಕಾರಿ ಮತ್ತು ಮಾನಹಾನಿಕರ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಮತ್ತು ಚಿತ್ರೋದ್ಯಮದವರನ್ನು ವಿವಿಧ ವಿಷಯಗಳ ಕುರಿತ ಡಿಬೇಟ್ ಬಂದ್ ಮಾಡಬೇಕು ಎಂದು ಕೇಳಿಕೊಂಡಿವೆ.

ರಿಪಬ್ಲಿಕ್ ಟಿವಿ ಅರ್ನಬ್ ಗೋಸ್ವಾಮಿ, ವರದಿಗಾರ ಪ್ರದೀಪ್ ಭಂಡಾರಿ ಮತ್ತು ಟೈಮ್ಸ್ ನೌನ ಪತ್ರಕರ್ತರಾದ ರಾಹುಲ್ ಶಿವಶಂಕರ್ ಹಾಗೂ ನವಿಕಾ ಕುಮಾರ್ ಗೆ ನ್ಯಾಯಾಲಯ ನಿರ್ದೇಶನ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.

ವಿನೋದ್ ಚೋಪ್ರಾ ಫಿಲ್ಮ್ಸ್ , ಯಶ್ ರಾಜ್,ವಿಶಾಲ್  ಭಾರಧ್ವಜ್, ಅಜಯ್ ದೆವಗನ್ ಫಿಲ್ಮ್ಸ್ ಸೇರಿದಂತೆ ವಿವಿಧ ನಿರ್ಮಾಪಕ ಸಂಸ್ಥೆಗಳು ನ್ಯಾಯಾಲಯದ ಮೊರೆ ಹೋಗಿದ್ದು ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.