ಹಿಟ್‌ ಆ್ಯಂಡ್‌ ರನ್‌: ಹಿಂಬದಿಯಿಂದ ಬೈಕ್‌ಗೆ ಗುದ್ದಿದ ಬಿಎಂಟಿಸಿ ಬಸ್‌; ಫುಡ್‌ ಡೆಲಿವರಿ ಬಾಯ್‌ ಸ್ಥಳದಲ್ಲೇ ಸಾವು

ವೇಗವಾಗಿ ಹಿಂಬದಿಯಿಂದ ಬಂದ ಬಿಎಂಟಿಸಿ ಬಸ್‌ ಬೈಕ್‌ಗೆ ಗುದ್ದಿದ್ದು, ಕೆಳಗೆ ಬಿದ್ದ ಸವಾರನ ಮೇಲೆ ಬಸ್‌ ಚಕ್ರ ಹರಿದಿದೆ. ಬನ್ನೇರುಘಟ್ಟ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. 

food delivery boy died in hit and run accident by bmtc bus in bengaluru ash

ಬೆಂಗಳೂರು (ಫೆಬ್ರವರಿ 20, 2023): ಬಿಎಂಟಿಸಿ ಬಸ್‌ ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸವಾರನ ತಲೆ ಮೇಲೆ ಬಸ್‌ ಚಕ್ರ ಹರಿದು ಆತ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಮೈಕೋ ಲೇಔಟ್‌ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಜೆ.ಸಿ.ನಗರ ನಿವಾಸಿ ಕಮಿಲ್‌ ಅಹಮ್ಮದ್‌ ಮಜೂಂದಾರ್‌ (20) ಮೃತ ಸವಾರ. ಹಿಂಬದಿ ಸವಾರ ಖಲೀದ್‌ ಉಲ್ಲಾ ಲಷ್ಕರ್‌(26) ಎಂಬುವರ ಕಾಲಿಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾನುವಾರ ಮುಂಜಾನೆ 5 ಗಂಟೆ ಸುಮಾರಿಗೆ ಬನ್ನೇರುಘಟ್ಟ ಮುಖ್ಯರಸ್ತೆಯ ಜಲ ಭವನದ ಬಳಿ ಈ ದುರ್ಘಟನೆ ನಡೆದಿದೆ.

ಇದನ್ನು ಓದಿ: ಹಣವಿಲ್ಲದ್ದರೂ ಆಪಲ್‌ ಮೊಬೈಲ್ ಆರ್ಡರ್: ಡೆಲಿವರಿ ಬಾಯ್‌ನನ್ನು ಕೊಲೆ ಮಾಡಿ ಪಾರ್ಸೆಲ್‌ ಕಿತ್ತುಕೊಂಡ ಗ್ರಾಹಕ

ಕಮಿಲ್‌ ಮತ್ತು ಖಲೀದ್‌ ಸ್ವಿಗ್ಗಿ ಫುಡ್‌ ಡೆಲಿವರಿ ಬಾಯ್‌ಗಳಾಗಿ ಕೆಲಸ ಮಾಡುತ್ತಿದ್ದರು. ಭಾನುವಾರ ಮುಂಜಾನೆ ಗ್ರಾಹಕರಿಂದ ಆರ್ಡರ್‌ ಪಡೆದು ಬಿಟಿಎಂ ಲೇಔಟ್‌ನ 7ನೇ ಕ್ರಾಸ್‌ನ ಮೊಮೋಸ್‌ ರೆಸ್ಟೋರೆಂಟ್‌ನಲ್ಲಿ ಆಹಾರ ಪಾರ್ಸೆಲ್‌ ಕಟ್ಟಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಡೈರಿ ಸರ್ಕಲ್‌ ಕಡೆಗೆ ಹೋಗುತ್ತಿದ್ದರು. ಬನ್ನೇರುಘಟ್ಟರಸ್ತೆಯಲ್ಲಿ ಜಲಭವನದಿಂದ ಸ್ವಲ್ಪ ಮುಂದಕ್ಕೆ ಭಾರತ್‌ ಪೆಟ್ರೋಲ್‌ ಬಂಕ್‌ ಬಳಿ ಹೋಗುವಾಗ ಹಿಂದಿನಿಂದ ವೇಗವಾಗಿ ಬಂದ ಬಿಎಂಟಿಸಿ ಬಸ್‌ ಏಕಾಏಕಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಯ ಬಲಭಾಗಕ್ಕೆ ಬಿದ್ದ ಸವಾರ ಕಮಿಲ್‌ ತಲೆ ಮೇಲೆಯೇ ಬಸ್‌ ಚಕ್ರ ಹರಿದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿ ಸವಾರ ಖಲೀದ್‌ ರಸ್ತೆಯ ಎಡಭಾಗಕ್ಕೆ ಬಿದ್ದ ಪರಿಣಾಮ ಕಾಲಿಗೆ ಗಾಯವಾಗಿದೆ.

ಬಸ್‌ ನಿಲ್ಲಿಸದೆ ಪರಾರಿ
ಅಪಘಾತಕದ ಬಳಿಕ ಬಿಎಂಟಿಸಿ ಚಾಲಕ ಸ್ವಲ್ಪ ದೂರ ಕ್ರಮಿಸಿ ಬಸ್‌ ನಿಲ್ಲಿಸದೆ ಪರಾರಿಯಾಗಿದ್ದಾನೆ. ಬಳಿಕ ಸ್ಥಳೀಯರು ಗಾಯಾಳು ಖಲೀದ್‌ನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಿಎಂಟಿಸಿ ಬಸ್‌ ಚಾಲಕ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಗಾಯಾಳು ಖಲೀದ್‌ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಅಪಘಾತ ಎಸಗಿದ ಬಿಎಂಟಿಸಿ ಬಸ್‌ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೈಕೋ ಲೇಔಟ್‌ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪ್ರೇಯಸಿ ಜತೆಗೆ ಓಡಿಹೋಗಿದ್ದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ: ಪತ್ನಿ ತೊರೆದು ಪ್ರೇಯಸಿ ಹಿಂದೆ ಹೋಗಿದ್ದ ಭೂಪ..!

ಫುಡ್‌ ಡೆಲಿವರಿ ಬಾಯ್‌ನನ್ನು ಬೆದರಿಸಿ ಮೊಬೈಲ್‌ ದೋಚಿದರು

ಮೂವರು ದುಷ್ಕರ್ಮಿಗಳು ಫುಡ್‌ ಡೆಲವರಿ ಬಾಯ್‌ನನ್ನು ಅಡ್ಡಗಟ್ಟಿಮಾರಕಾಸ್ತ್ರ ತೋರಿಸಿ ಬೆದರಿಸಿ ಮೊಬೈಲ್‌ ಕಸಿದು ಪರಾರಿಯಾಗಿರುವ ಘಟನೆ ಬನಶಂಕರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಜಯನಗರದ ನವೀನ್‌ಕುಮಾರ್‌ ದರೋಡೆಗೆ ಒಳಗಾದ ವ್ಯಕ್ತಿ. ಸ್ವಿಗ್ಗಿ ಫುಡ್‌ ಡೆಲಿವರಿ ಬಾಯ್‌ ಆಗಿರುವ ನವೀನ್‌ ಕುಮಾರ್‌ ಭಾನುವಾರ ಬೆಳಗಿನ ಜಾವ 3.30ರ ಸುಮಾರಿಗೆ ಜಯನಗರ ಹೋಟೆಲ್‌ನಿಂದ ಆಹಾರ ತೆಗೆದುಕೊಂಡು ಗ್ರಾಹಕರಿಗೆ ತಲುಪಿಸಿ ವಾಪಾಸ್‌ ಬರುವಾಗ ಪದ್ಮನಾಭನಗರದ ಲಕ್ಷ್ಮಿ ಪಾರ್ಕ್ ಬಳಿ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ದುಷ್ಕರ್ಮಿಗಳು, ನವೀನ್‌ ಕುಮಾರ್‌ನ ದ್ವಿಚಕ್ರ ವಾಹನ ಅಡ್ಡಗಟ್ಟಿನಿಲ್ಲಿಸಿದ್ದಾರೆ. ಬಳಿಕ ಮಾರಕಾಸ್ತ್ರ ತೋರಿಸಿ ಬೆದರಿಸಿ ಮೊಬೈಲ್‌ ಕುಸಿದುಕೊಂಡು ಪರಾರಿಯಾಗಿದ್ದಾರೆ. ಬನಶಂಕರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios