Bengaluru Robbery: ಸಾಲ ಕೊಡದ್ದಕ್ಕೆ ಸೋದರತ್ತೆ ಮನೆ ದರೋಡೆ ನಂಬಿಕೆ ದ್ರೋಹಿ..!
* ಪೊಲೀಸರ ಸೋಗಿನಲ್ಲಿ ಮನೆಗೆ ಬಂದು ಕೃತ್ಯ
* ಕಳ್ಳ ಮಾಲು ಪಡೆದಿದ್ದೀರಿ ಎಂದು ಬೆದರಿಸಿ ಹಣ ದೋಚಿದ್ದ ಅಳಿಯ ಮತ್ತು ಗ್ಯಾಂಗ್ ಸೆರೆ
* ಫಾರಿನ್ ಬ್ರ್ಯಾಂಡ್ ಮದ್ಯ ಖರೀದಿ
ಬೆಂಗಳೂರು(ಜ.16) ವ್ಯವಹಾರ(Business) ಮಾಡಲು ಹಣ(Money) ಕೊಡಲಿಲ್ಲ ಎಂಬ ಕಾರಣಕ್ಕೆ ಪೊಲೀಸರ ಸೋಗಿನಲ್ಲಿ ಸೋದರ ಅತ್ತೆ ಮನೆಗೆ ನುಗ್ಗಿ ದರೋಡೆ(Robbery) ಮಾಡಿದ್ದ ಸೋದರ ಅಳಿಯ ಸೇರಿ ಐವರು ಆರೋಪಿಗಳನ್ನು ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ(Arrest).
ಮಹಾಲಕ್ಷ್ಮಿ ಲೇಔಟ್ ನಿವಾಸಿ ಪುನೀತ್(24), ಬಾಲಕೃಷ್ಣ(23), ರೋಹನ್ (24), ಪೃಥ್ವಿರಾಜ(25), ಚೇತನ್ ಕುಮಾರ್(22) ಬಂಧಿತರು. ಕಳೆದ ಡಿ.31ರ ಮಧ್ಯಾಹ್ನ 1ರ ಸುಮಾರಿಗೆ ನಾಲ್ವರು ಅಪರಿಚಿತರು ತಾವು ಪೊಲೀಸರು ಎಂದು ಹೇಳಿಕೊಂಡು ಸಿವಿಲ್ ಎಂಜಿನಿಯರ್ ಸಾಮ್ಯನಾಯ್ಕ ಎಂಬುವವರ ಮನೆಗೆ ನುಗ್ಗಿ .19 ಲಕ್ಷ ನಗದು ಹಾಗೂ 500 ಗ್ರಾಂ ಚಿನ್ನಾಭರಣ ದೋಚಿದ್ದರು. ಆರೋಪಿಗಳಿಂದ.16 ಲಕ್ಷ ಮೌಲ್ಯದ 318 ಗ್ರಾಂ ಚಿನ್ನಾಭರಣ, .10.30 ಲಕ್ಷ ನಗದು, ಎರಡು ದ್ವಿಚಕ್ರ ವಾಹನ ಹಾಗೂ ಕೃತ್ಯಕ್ಕೆ ಬಳಸಿದ್ದ ಚಾಕು ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Robbery Case: ತಾನೇ ಖಾರದ ಪುಡಿ ಎರಚಿಕೊಂಡು ದರೋಡೆ ಕಥೆ ಕಟ್ಟಿದ ಭೂಪ..!
ಸೋದರಳಿಯನೇ ಸೂತ್ರಧಾರ!
ಬಂಧಿತ ಆರೋಪಿ(Accused) ರೋಹನ್, ಸಿವಿಲ್ ಎಂಜಿನಿಯರ್ ಸಾಮ್ಯ ನಾಯ್ಕ್ ಪತ್ನಿ ವಿನೋದಾಬಾಯಿ ಅವರ ಅಣ್ಣನ ಮಗ. ಈತ ಮತ್ತೊಬ್ಬ ಆರೋಪಿ ಪುನೀತ್ ಜತೆಗೆ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಛಾಯಾಗ್ರಾಹನಾಗಿ ಕೆಲಸ ಮಾಡುತ್ತಿದ್ದ. ಸಾಮ್ಯ ನಾಯ್ಕ್ ಆರ್ಥಿಕವಾಗಿ ಸ್ಥಿತಿವಂತರಾಗಿದ್ದಾರೆ. ಹೀಗಾಗಿ ರೋಹನ್ ಕಳೆದ ತಿಂಗಳು ಸಾಮ್ಯ ನಾಯ್ಕ್ ಮನೆಗೆ ಬಂದು ವ್ಯವಹಾರ ಮಾಡಲು ಹಣದ ನೆರವು ಕೇಳಿದ್ದಾನೆ. ಈ ವೇಳೆ ಸಾಮ್ಯ ನಾಯ್ಕ್ ಅವರು ತಮ್ಮ ಬಳಿ ಹಣವಿಲ್ಲ. ನಮ್ಮದೇ ವ್ಯವಹಾರ ಹಾಗೂ ಮಕ್ಕಳ ವಿದ್ಯಾಭ್ಯಾಸ ಖರ್ಚು ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಬಳಿಕ ರೋಹನ್, ಸೋದರತ್ತೆ ಮನೆಗೆ ನುಗ್ಗಿ ದರೋಡೆ ಮಾಡಲು ನಿರ್ಧರಿಸಿದ್ದಾನೆ. ಪುನೀತ್, ಸ್ನೇಹಿತರಾದ ಪೃಥ್ವಿರಾಜ್, ಬಾಲಕೃಷ್ಣ, ಚೇತನ್ಕುಮಾರ್ ಜತೆಗೆ ಚರ್ಚಿಸಿದ್ದಾನೆ. ಆರೋಪಿಗಳು ಮಹಾಲಕ್ಷ್ಮಿ ಲೇಔಟ್ನ ಸ್ಟುಡಿಯೋ ಮೇಲಿರುವ ಕೊಠಡಿಯಲ್ಲಿ ಪಾರ್ಟಿ ಮಾಡಿ, ಪೊಲೀಸರ ಸೋಗಿನಲ್ಲಿ ದರೋಡೆಗೆ ಸಂಚು ರೂಪಿಸಿದ್ದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳ್ಳ ಮಾಲು ರಿಕವರಿ ಹೆಸರಿನಲ್ಲಿ ಪ್ರವೇಶ
ರೋಹನ್ ಹೊರತುಪಡಿಸಿ ಉಳಿದ ನಾಲ್ವರು ಆರೋಪಿಗಳು ಪೂರ್ವ ಯೋಜನೆಯಂತೆ ಡಿ.31ರಂದು ಮಧ್ಯಾಹ್ನ 1ರ ಸುಮಾರಿಗೆ ಸಾಮ್ಯ ನಾಯ್ಕ್ ಮನೆಗೆ ನುಗ್ಗಿ, ತಾವು ತಿಪಟೂರು ಪೊಲೀಸರು ಎಂದು ಪರಿಚಯಿಸಿಕೊಂಡಿದ್ದರು. ಈ ವೇಳೆ ಆರೋಪಿ ಪೃಥ್ವಿರಾಜ್‌ನನ್ನು ಈತ ಕಳ್ಳ ಎಂದು ತೋರಿಸಿ, ಕದ್ದ ಚಿನ್ನಾಭರಣ ಹಾಗೂ ನಗದು ಹಣವನ್ನು ನಿಮಗೆ ಕೊಟ್ಟಿರುವುದಾಗಿ ಹೇಳಿದ್ದಾನೆ. ಆ ಹಣ ಹಾಗೂ ಒಡೆವೆ ಕೊಡಿ. ಇಲ್ಲವಾದರೆ ಬಂಧಿಸುವುದಾಗಿ ರಿವಾಲ್ವರ್ ತೋರಿಸಿ ಸಾಮ್ಯ ನಾಯ್ಕ್ ಮನೆಯವರನ್ನು ಬೆದರಿಸಿದ್ದರು. ಮನೆ ತಪಾಸಣೆ ಮಾಡುವುದಾಗಿ ಮನೆಯ ಬೀರುವಿನಲ್ಲಿದ್ದ .19 ಲಕ್ಷ ನಗದು ಹಾಗೂ 500 ಗ್ರಾಂ ಚಿನ್ನಾಭರಣ(Gold) ದೋಚಿದ್ದಾರೆ. ಬಳಿಕ ವಿಚಾರಣೆ ಮಾಡುವುದಾಗಿ ಸಾಮ್ಯ ನಾಯ್ಕ್ ಹಾಗೂ ಅವರ ಪುತ್ರ ಮನೋಹರ್‌ನನ್ನು ಅವರದೇ ಕಾರಿನಲ್ಲಿ ಕರೆದುಕೊಂಡು ಹೋಗಿ ಬಳಿಕ ಪೀಣ್ಯ ಬಳಿ ಬಿಟ್ಟು ಪರಾರಿಯಾಗಿದ್ದರು. ಬಳಿಕ ಸಾಮ್ಯ ನಾಯ್ಕ್ ಅವರು ದೂರು ದಾಖಲಿಸಿದ್ದರು.
ಸ್ಟುಡಿಯೋ ಬಳಿ ರೋಹನ್ ಡ್ರಾಮ!
ದರೋಡೆ ನಡೆದ ನಂತರ ಅದೇ ದಿನ ಸಂಜೆ ಸಾಮ್ಯ ನಾಯ್ಕ್ ಪುತ್ರ ಮನೋಹರ್‌ಗೆ ಕರೆ ಮಾಡಿರುವ ರೋಹನ್, ಪೊಲೀಸರು ಸ್ಟುಡಿಯೋ ಬಳಿ ಬಂದು ಹಣ ಹಾಗೂ ಒಡವೆ ವಿಚಾರದ ಬಗ್ಗೆ ತನ್ನನ್ನು ಪ್ರಶ್ನಿಸುತ್ತಿದ್ದಾರೆ. ನೀನು ಬೇಗ ಬಾ ಎಂದು ಮನೋಹರ್‌ನನ್ನು ಸ್ಟುಡಿಯೋ ಬಳಿಗೆ ಕರೆಸಿಕೊಂಡಿದ್ದ. ಈ ವೇಳೆ ಪೊಲೀಸ್ ವೇಷದಲ್ಲಿದ್ದ ಆರೋಪಿ ಪುನೀತ್ ಹಾಗೂ ಇತರೆ ಆರೋಪಿಗಳು, ಮನೋಹರ್ ಎದುರಿಗೆ ರೋಹನ್‌ಗೆ ಥಳಿಸುವಂತೆ ನಾಟಕ ಮಾಡಿದ್ದರು. ಬಳಿಕ ಮನೋಹರ್‌ನನ್ನು ಬೆದರಿಸಿ ಮನೆಗೆ ಕಳುಹಿಸಿದ್ದರು. ಬಳಿಕ ರೋಹನ್ ಹಾಗೂ ಇತರೆ ಆರೋಪಿಗಳು ಸ್ಟುಡಿಯೋದಲ್ಲಿ ಹಣ ಲೆಕ್ಕ ಹಾಕಿಕೊಂಡು ಪರಾರಿಯಾಗಿದ್ದರು. ಈ ವೇಳೆ ಪೊಲೀಸರು ರೋಹನ್‌ಗೆ ಕರೆ ಮಾಡಿದಾಗ, ಘಟನೆಯಿಂದ ನನಗೆ ಭಯವಾಗಿದ್ದು, ಊರಿಗೆ ತೆರಳುತ್ತಿರುವುದಾಗಿ ಹೇಳಿದ್ದ. ಕೆಲ ಹೊತ್ತಿನ ಬಳಿಕ ಪೊಲೀಸರು ಮತ್ತೆ ಕರೆ ಮಾಡಿದಾಗ, ರೋಹನ್ ಮೊಬೈಲ್ ಸ್ವಿಚ್‌ಆಫ್ ಆಗಿತ್ತು. ಈ ವೇಳೆಯೇ ಪೊಲೀಸರಿಗೆ ರೋಹನ್ ಮೇಲೆ ಅನುಮಾನ ಮೂಡಿತ್ತು.
Robbery in Bengaluru: ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ದರೋಡೆ!
ಫಾರಿನ್ ಬ್ರ್ಯಾಂಡ್ ಮದ್ಯ ಖರೀದಿ
19 ಲಕ್ಷ ಹಣ ದರೋಡೆ ಬಳಿಕ ಆರೋಪಿಗಳು ಮುಂಬೈ, ಪುಣೆ, ಗೋವಾ, ಕಾರವಾರ, ಗೋಕರ್ಣ ಸೇರಿದಂತೆ ಹಲವೆಡೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದರು. ಐಷಾರಾಮಿ ರೆಸಾರ್ಟ್‌ಗಳಲ್ಲಿ(Luxury Resort) ತಂಗಿ ಮೋಜು-ಮಸ್ತಿ ಮಾಡಿದ್ದರು. ಆರೋಪಿಗಳು 15 ಸಾವಿರ ಮೌಲ್ಯದ ಐದು ಫಾರಿನ್ ಮದ್ಯದ ಬಾಟಲಿ ಖರೀದಿಸಿ ಮಜಾ ಮಾಡಿದ್ದರು.
ಅಪರಾಧದ ಹಿನ್ನೆಲೆ
ಆರೋಪಿಗಳಾದ ಪುನೀತ್ ಮತ್ತು ಪೃಥ್ವಿರಾಜ್ ವಿರುದ್ಧ ಗಂಗಮ್ಮನಗುಡಿ, ಸುಬ್ರಹ್ಮಣ್ಯನಗರ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣ ದಾಖಲಾಗಿವೆ. ಆರೋಪಿ ಬಾಲಕೃಷ್ಣ ಬಾಗಲಗುಂಟೆ ಮತ್ತು ಪೀಣ್ಯ ಠಾಣೆ ರೌಡಿಶೀಟರ್ ಆಗಿದ್ದು, ಕೊಲೆ, ಕೊಲೆ ಯತ್ನ ಪ್ರಕರಣ ದಾಖಲಾಗಿವೆ. ಆರೋಪಿ ಚೇತನ್ ಕುಮಾರ್ ಯಲಹಂಕ ಠಾಣೆ ರೌಡಿಶೀಟರ್ ಆಗಿದ್ದಾನೆ.