ಮಂಡ್ಯ, (ಸೆ.06):  ಮಂಡ್ಯದ ಕಾಳೇನಹಳ್ಳಿಯ ಇಟ್ಟಿಗೆ ಕಾರ್ಖಾನೆಯಲ್ಲಿ ಮಲಗಿದ್ದ ಇಬ್ಬರು ಕಾರ್ಮಿಕರ ಭೀಕರ ಹತ್ಯೆ ಪ್ರಕರಣವನ್ನು  ಪೊಲೀಸರು 24 ಗಂಟೆಗಳಲ್ಲಿ ಭೇದಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ಶುಕ್ರವಾರ (ಸೆ.೦4) ರಂದು ಕಾಳೇನಹಳ್ಳಿಯ ಇಟ್ಟಿಗೆ ಕಾರ್ಖಾನೆಯಲ್ಲಿ ಮಲಗಿದ್ದ ಇಬ್ಬರು ಕಾರ್ಮಿಕರನ್ನು ಬರ್ಬರವಾಗಿ ಮಾರಕಾಸ್ತ್ರದಿಂದ ಹತ್ಯೆ ಮಾಡಲಾಗಿತ್ತು. ತಗಡಗವಾಡಿ ಗ್ರಾಮದ ಬಸವ ರಾಜು ಮತ್ತು‌ ತುಮಕೂರು ಮೂಲದ ರಾಮಮೂರ್ತಿ ಎಂಬ ಕಾರ್ಮಿಕರ ಬರ್ಬರ ಹತ್ಯೆಯಾಗಿತ್ತು.

ಕೂಡ್ಲಿಗಿ: ಶೀಲ ಶಂಕಿಸಿ ಕತ್ತು ಸೀಳಿ ಪತ್ನಿ ಹತ್ಯೆಗೈದ ಪತಿ

ಈ ಪ್ರಕರಣ ದಾಖಲಿಸಿಕೊಂಡಿದ್ದ ಮಂಡ್ಯದ ಗ್ರಾಮಾಂತರ ಠಾಣಾ ಪೊಲೀಸರು ಒಂದೇ ದಿನದಲ್ಲಿ  ಜೋಡಿ ಕೊಲೆ ಆರೋಪಿಯನ್ನು ಸಾಕ್ಷಿ ಸಮೇತ ಬಂಧಿಸಿದ್ದಾರೆ. 

ಅದೇ ಕಾರ್ಖಾನೆಯಲ್ಲಿ‌ ಕೆಲಸ‌ ಮಾಡುತ್ತಿದ್ದ ಮತ್ತೋರ್ವ ಕಾರ್ಮಿಕ ಚಿಕ್ಕಮಗಳೂರು ಜಿಲ್ಲೆ‌ಯ ಕೋಡಿಹಳ್ಳಿ ಗ್ರಾಮದ ರಮೇಶ್ (51) ‌ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.  ಪೋಲೀಸರಿಗೆ ಕೊಲೆ ನಡೆದಿರುವ ಬಗ್ಗೆ  ಮಾಹಿತಿ ನೀಡಿದ್ದ ರಮೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ   ಸತ್ಯ ಬಾಯ್ಬಿಟ್ಟಿದ್ದಾನೆ.

ಆ ದಿನ ಕೊಲೆಯಾದ ಇಬ್ಬರಿಗೂ ಮದ್ಯ ಕುಡಿಸಿ ಮಲಗಿದ್ದಾಗ ಹಾರೆಯಿಂದ ಒಡೆದು ಸಾಯಿಸಿರುವುದಾಗಿ ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟಿದ್ದಾನೆ. ಈ ಹಿಂದೆ ಕೂಡ ಈ ಇಬ್ಬರು ಹಲವಾರು ಬಾರಿ ಮದ್ಯ ಸೇವಿಸಿ ಬಂದು ತನಗೆ  ಕಿರುಕುಳ ನೀಡಿದ್ದರು. ಇದಕ್ಕಾಗಿ ನಾನು ಇವರನ್ನು ಹತ್ಯೆ ಮಾಡಿರುವುದಾಗಿ ಪೊಲೀಸ್ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ.