ಬೆಂಗಳೂರು: ಜ್ಯುವೆಲ್ಲರಿ ಶಾಪಲ್ಲಿ ಶೂಟೌಟ್, ಸಿನಿಮೀಯ ಶೈಲಿಯಲ್ಲಿ ಚಿನ್ನ ಕದ್ದು ದರೋಡೆಕೋರರು ಪರಾರಿ..!
ಬೆಂಗಳೂರಿನ ಗೊಲ್ಲರಹಟ್ಟಿ ಬಳಿಯ ವಿನಾಯಕ ಜ್ಯುವೆಲ್ಲರ್ಸ್‌ನಲ್ಲಿ ಈ ಕೃತ್ಯ ನಡೆದಿದ್ದು, ಘಟನೆಯಲ್ಲಿ ದರೋಡೆಕೋರರು ಹಾರಿಸಿದ ಗುಂಡು ತೊಡೆಗೆ ಹೊಕ್ಕಿ ಗಾಯಗೊಂಡಿರುವ ಚಿನ್ನದ ವ್ಯಾಪಾರಿ ಮನೋಜ್ ಲೋಹರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಪ್ರಾಣಾಪಾಯದಿಂದ ಸುರಕ್ಷಿತವಾಗಿದ್ದಾರೆ. ಅಂಗಡಿಯಲ್ಲಿ ಮನೋಜ್ ಒಬ್ಬರೇ ಇದ್ದಾಗ ಬೆಳಗ್ಗೆ 10.45ರ ವೇಳೆ ನುಗ್ಗಿ ಕೃತ್ಯ ಎಸಗಿದ ದುಷ್ಕರ್ಮಿಗಳು

ಬೆಂಗಳೂರು(ಅ.13): ಗ್ರಾಹಕರ ಸೋಗಿನಲ್ಲಿ ಚಿನ್ನಾಭರಣ ಮಾರಾಟ ಮಳಿಗೆಯೊಂದಕ್ಕೆ ನುಗ್ಗಿದ ನಾಲ್ವರು ದರೋಡೆಕೋರರು, ಚಿನ್ನದ ವ್ಯಾಪಾರಿ ಮೇಲೆ ಗುಂಡಿನ ದಾಳಿ ನಡೆಸಿ ಸಿನಿಮೀಯ ಶೈಲಿಯಲ್ಲಿ ಒಂದು ಕೇಜಿ ಆಭರಣ ದೋಚಿ ಪರಾರಿಯಾಗಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಹಾಡಹಗಲೇ ನಡೆದಿದೆ.
ಗೊಲ್ಲರಹಟ್ಟಿ ಬಳಿಯ ವಿನಾಯಕ ಜ್ಯುವೆಲ್ಲರ್ಸ್‌ನಲ್ಲಿ ಈ ಕೃತ್ಯ ನಡೆದಿದ್ದು, ಘಟನೆಯಲ್ಲಿ ದರೋಡೆಕೋರರು ಹಾರಿಸಿದ ಗುಂಡು ತೊಡೆಗೆ ಹೊಕ್ಕಿ ಗಾಯಗೊಂಡಿರುವ ಚಿನ್ನದ ವ್ಯಾಪಾರಿ ಮನೋಜ್ ಲೋಹರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಪ್ರಾಣಾಪಾಯದಿಂದ ಸುರಕ್ಷಿತವಾಗಿದ್ದಾರೆ. ಅಂಗಡಿಯಲ್ಲಿ ಮನೋಜ್ ಒಬ್ಬರೇ ಇದ್ದಾಗ ಬೆಳಗ್ಗೆ 10.45ರ ವೇಳೆ ನುಗ್ಗಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗನ್ ತೋರಿಸಿ ಕ್ಯಾಶಿಯರ್ ಬೆದರಿಸಿ ಹಣ ದೋಚಿದ 12 ವರ್ಷದ ಬಾಲಕ: ಸಿಸಿಟಿವಿ ವೀಡಿಯೋ
ಹಿಡಿಯಲು ಹೋದಾಗ ಗುಂಡು:
ರಾಜಸ್ಥಾನ ಮೂಲದ ಮನೋಜ್ ಅವರು, ಹತ್ತು ವರ್ಷಗಳಿಂದ ಗೊಲ್ಲರಹಟ್ಟಿಯಲ್ಲಿ ವಿನಾಯಕ ಜ್ಯುವೆಲ್ಲರ್ಸ್ ಹೆಸರಿನ ಚಿನ್ನಾಭರಣ ಮಾರಾಟ ಮಳಿಗೆ ಇಟ್ಟಿದ್ದಾರೆ. ಪ್ರತಿದಿನ ಬೆಳಗ್ಗೆ 10ಕ್ಕೆ ಮಳಿಗೆ ಬಾಗಿಲು ತೆರೆದು ವಹಿವಾಟು ಆರಂಭಿಸಿದರೆ ರಾತ್ರಿ 8ಕ್ಕೆ ಬಂದ್ ಮಾಡಿ ಮನೋಜ್ ತೆರಳುತ್ತಿದ್ದರು. ಎಂದಿನಂತೆ ಬೆಳಗ್ಗೆ 10ಕ್ಕೆ ಅವರು ಅಂಗಡಿ ಬಾಗಿಲು ತೆರೆದಿದ್ದರು. ಆದರೆ ಗುರುವಾರ ಅವರಿಗೆ ಕರಾಳ ದಿನವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮನೋಜ್ ಅವರ ಮಳಿಗೆ ಬಳಿಗೆ ಎರಡು ಬೈಕ್‌ಗಳಲ್ಲಿ ಬೆಳಗ್ಗೆ 10.30ಕ್ಕೆ ನಾಲ್ವರು ದರೋಡೆಕೋರರು ಬಂದಿದ್ದಾರೆ. ಅಂಗಡಿಯಲ್ಲಿ ಮನೋಜ್ ಒಬ್ಬರೇ ಇರುವುದನ್ನು ಖಚಿತಪಡಿಸಿಕೊಂಡ ದುಷ್ಕರ್ಮಿಗಳು, ಮೊದಲು ಗ್ರಾಹಕರ ಸೋಗಿನಲ್ಲಿ ಚಿನ್ನ ಖರೀದಿಗೆ ಚಿನ್ನಾಭರಣ ಮಳಿಗೆಗೆ ನಾಲ್ವರ ಪೈಕಿ ಇಬ್ಬರು ತೆರಳಿದ್ದಾರೆ. ತಮ್ಮ ಅಂಗಡಿಗೆ ಬಂದವರನ್ನು ಗ್ರಾಹಕರೇ ಎಂದು ಭಾವಿಸಿ ಮಾಮೂಲಿಯಂತೆ ಮನೋಜ್ ವ್ಯವಹರಿಸಿದ್ದಾರೆ.
ಆಗ ಆರೋಪಿಗಳು, ಆ ವಿನ್ಯಾಸ ತೋರಿಸಿ, ಇದನ್ನು ಕೊಡಿ ಎಂದು ಹೇಳಿ ಪ್ರದರ್ಶನಕ್ಕಿಟ್ಟಿದ್ದ ಎಲ್ಲ ಆಭರಣಗಳನ್ನು ಪಡೆದಿದ್ದಾರೆ. ಈ ವೇಳೆ ದಿಢೀರನೇ ಮಳಿಗೆಯೊಳಗೆ ಪ್ರವೇಶಿಸಿದ ಮತ್ತಿಬ್ಬರು, ತಕ್ಷಣವೇ ಅಂಗಡಿ ಶೆಲ್ಟರ್ ಎಳೆದಿದ್ದಾರೆ. ಕೂಡಲೇ ರಕ್ಷಣೆಗೆ ಕೂಗಿಕೊಳ್ಳಲು ಯತ್ನಿಸಿದ ಮನೋಜ್ ಕುತ್ತಿಗೆ ಮಚ್ಚು ಇಟ್ಟು ಜೀವ ಬೆದರಿಕೆ ಹಾಕಿದ ಇನ್ನುಳಿದ ಇಬ್ಬರು, ಎಲ್ಲ ಆಭರಣಗಳನ್ನು ಚೀಲದೊಳಗೆ ತುಂಬುವಂತೆ ಹೇಳಿದ್ದಾರೆ.
ಭೀತಿಗೊಂಡ ಮನೋಜ್, ಸುಮಾರು 1 ಕೇಜಿ ಆಭರಣವನ್ನು ಒಂದು ಬ್ಯಾಗಿನೊಳಗೆ ತುಂಬಿದ್ದಾರೆ. ಬಂಗಾರ ವಸೂಲಿ ಮಾಡಿದ ತಕ್ಷಣವೇ ದರೋಡೆಕೋರರು ಕಾಲ್ಕಿಳಲು ಯತ್ನಿಸಿದ್ದಾರೆ. ಆಗ ಶೆಲ್ಟರ್ ಅನ್ನು ಅರ್ಧ ತೆರೆದು ಒಬ್ಬೊಬ್ಬರಾಗಿ ಹೊರಗೆ ಹೋಗಿದ್ದಾರೆ. ಈ ಹಂತದಲ್ಲಿ ಇಬ್ಬರು ತೆರಳಿದ ಬಳಿಕ ಜೋರಾಗಿ ಚೀರಾಟ ಮಾಡಿ ಉಳಿದ ಇಬ್ಬರನ್ನು ಹಿಡಿದುಕೊಳ್ಳಲು ಮನೋಜ್ ಮುಂದಾಗಿದ್ದಾರೆ. ಆಗ ಕೆರಳಿದ ದರೋಡೆಕೋರನೊಬ್ಬ, ಮನೋಜ್ ತೊಡೆಗೆ ನಾಡ ಪಿಸ್ತೂಲ್‌ನಿಂದ ಗುಂಡು ಹಾರಿಸಿ ತಪ್ಪಿಸಿಕೊಂಡಿದ್ದಾನೆ. ಈ ಚೀರಾಟ ಕೇಳಿ ಅಂಗಡಿ ಬಳಿ ಜಮಾಯಿಸಿದ ಸ್ಥಳೀಯರಿಗೆ ಪಿಸ್ತೂಲ್‌ನಿಂದ ಹೆದರಿಸಿ ದರೋಡೆಕೋರರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆ ವಿಚಾರ ತಿಳಿದ ಕೂಡಲೇ ಹೆಚ್ಚುವರಿ ಆಯುಕ್ತ (ಪಶ್ಚಿಮ) ಎನ್.ಸತೀಶ್ ಕುಮಾರ್ ಹಾಗೂ ಡಿಸಿಪಿ ಎಸ್.ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೀಗ ಹಾಕಿದ ಮನೆ ದೋಚುತ್ತಿದ್ದ ನೇಪಾಳಿಗರು, ಹೆಚ್ಚು ಚಿನ್ನ ಸಿಕ್ಕಿದ್ದರೆ ವಿಮಾನದಲ್ಲೇ ಎಸ್ಕೇಪ್ ಆಗಲು ಪ್ಲಾನ್!
ಎರಡು ತಂಡಗಳಾಗಿ ಪರಾರಿ
ಈ ದರೋಡೆ ಕೃತ್ಯ ಎಸಗಿದ ಬಳಿಕ ನಾಲ್ವರು ದುಷ್ಕರ್ಮಿಗಳು, ಇಬ್ಬಿಬ್ಬರಾಗಿ ಪ್ರತ್ಯೇಕವಾಗಿ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಒಂದು ತಂಡವು ನೈಸ್ ರಸ್ತೆ ಮೂಲಕ ನಗರ ತೊರೆದಿದ್ದರೆ, ಮತ್ತೊಂದು ತಂಡ ನಗರದ ಸಂಗೊಳ್ಳಿ ರಾಯಣ ರೈಲ್ವೆ ನಿಲ್ದಾಣಕ್ಕೆ ಬಂದು ರೈಲಿನಲ್ಲಿ ಪರಾರಿಯಾಗಿರುವ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಹಾಗೂ ನೈಸ್ ರಸ್ತೆ ಭಾಗದಲ್ಲಿ ಹುಡುಕಾಟ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗೊಲ್ಲರಹಟ್ಟಿಯ ಚಿನ್ನಾಭರಣ ಮಳಿಗೆ ದರೋಡೆ ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿದ್ದು, ದರೋಡೆಕೋರರ ಮಾಹಿತಿ ಸಿಕ್ಕಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.