ದರೋಡೆ ವೇಳೆ ಎಟಿಎಂಗೆ ಬೆಂಕಿ, ₹4.5 ಲಕ್ಷ ರು. ಭಸ್ಮ!
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅರಿಶಿನಕುಂಟೆ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಕಳ್ಳರು ಎಟಿಎಂನಲ್ಲಿದ್ದ ಹಣ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಗ್ಯಾಸ್ ಕಟರ್ ಮೂಲಕ ಎಟಿಎಂ ಯಂತ್ರವನ್ನು ಕಟ್ ಮಾಡುತ್ತಿದ್ದ ವೇಳೆ ಬೆಂಕಿ ತಗುಲಿದ್ದು, ಎಟಿಎಂನೊಳಗಿದ್ದ ಸುಮಾರು ನಾಲ್ಕೂವರೆ ಲಕ್ಷ ರೂ. ಬೆಂಕಿಗಾಹುತಿಯಾಗಿದೆ
ದಾಬಸ್‌ಪೇಟೆ/ನೆಲಮಂಗಲ (ಡಿ.9) : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅರಿಶಿನಕುಂಟೆ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಕಳ್ಳರು ಎಟಿಎಂನಲ್ಲಿದ್ದ ಹಣ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಗ್ಯಾಸ್ ಕಟರ್ ಮೂಲಕ ಎಟಿಎಂ ಯಂತ್ರವನ್ನು ಕಟ್ ಮಾಡುತ್ತಿದ್ದ ವೇಳೆ ಬೆಂಕಿ ತಗುಲಿದ್ದು, ಎಟಿಎಂನೊಳಗಿದ್ದ ಸುಮಾರು ನಾಲ್ಕೂವರೆ ಲಕ್ಷ ರೂ. ಬೆಂಕಿಗಾಹುತಿಯಾಗಿದೆ. ಮಾಹಿತಿ ತಿಳಿದು ಕಟ್ಟಡದ ಮಾಲೀಕ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ.
ಗುರುವಾರ ಬೆಳಗಿನ ಜಾವ ಸುಮಾರು 1.50 ರ ವೇಳೆಯಲ್ಲಿ ಅರಿಶಿನಕುಂಟೆ ಗ್ರಾಮದ ಖಾಸಗಿ ಬ್ಯಾಂಕ್ ಎಟಿಎಂಗೆ ನುಗ್ಗಿದ ಇಬ್ಬರು ಕಳ್ಳರು ಗ್ಯಾಸ್ ಕಟರ್ ಬಳಕೆ ಮಾಡಿಕೊಂಡು ಕಳ್ಳತನಕ್ಕೆ ಯತ್ನಿಸಿದ್ದಾರೆ. ಗ್ಯಾಸ್ ಕಟರ್‌ನಲ್ಲಿ ಎಟಿಎಂ ಯಂತ್ರವನ್ನು ಕತ್ತರಿಸುತ್ತಿದ್ದ ವೇಳೆ ಮುಂಬೈನ ಬ್ಯಾಂಕ್ ಕಚೇರಿಗೆ ಸಂದೇಶ ತಲುಪಿದೆ. ತಕ್ಷಣವೇ ಬ್ಯಾಂಕ್ ಸಿಬ್ಬಂದಿಗಳು ಸ್ಥಳೀಯ ಬ್ಯಾಂಕ್ ಮ್ಯಾನೇಜರ್‌ಗೆ ಕರೆ ಮಾಡಿ ವಿಚಾರ ತಿಳಿಸಿದರು. ತಕ್ಷಣ ಬ್ಯಾಂಕ್ ಮ್ಯಾನೇಜರ್ ಕಟ್ಟಡದ ಮಾಲೀಕರಿಗೆ ಕರೆ ಮಾಡಿ ವಿಚಾರ ತಿಳಿಸಿದರು.
ಹಾಡಹಗಲೇ ಮನೆ ಬೀಗಮುರಿದು ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರು ಅರೆಸ್ಟ್
ಕಟ್ಟಡದ ಮಾಲೀಕ ಸ್ಥಳಕ್ಕೆ ಬರುತ್ತಿದ್ದಂತೆ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಮಧ್ಯೆ, ಗ್ಯಾಸ್ ಕಟರ್‌ನಿಂದ ಕಳ್ಳತನಕ್ಕೆ ಯತ್ನಿಸುತ್ತಿದ್ದ ವೇಳೆ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು 4 ಲಕ್ಷದ 60 ಸಾವಿರ ರೂ. ನಗದು ಸುಟ್ಟು ಹೋಗಿದೆ. ವಿಷಯ ತಿಳಿದು ಬ್ಯಾಂಕ್ ಸಿಬ್ಬಂದಿ ಕೂಡ ಸ್ಥಳಕ್ಕೆ ಆಗಮಿಸಿದ್ದು, ಉಳಿದ ಹಣವನ್ನು ಬ್ಯಾಂಕ್ ನ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಎಂಟಿಎಂ ಸಂಪೂರ್ಣ ಬೆಂಕಿಗಾಹುತಿಯಾಗಿದೆ.
ಕಳ್ಳರ ಓಡಾಟ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ದಾವಣಗೆರೆಯಲ್ಲಿ ಹುಲಿ ಉಗುರು ಮಾರಾಟ, ಬೆಂಗಳೂರಿನ ಇಬ್ಬರು ಸೇರಿ 7 ಜನರು ಬಂಧನ