ಬೆಂಗಳೂರು (ನ. 11): ಸ್ಯಾನಿಟೈಸರ್‌ ಉತ್ಪಾದಿಸುವ ಖಾಸಗಿ ರಾಸಾಯನಿಕ ಕಾರ್ಖಾನೆಯೊಂದರ ಗೋದಾಮಿನಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿಪಾಸ್ತಿ ಸುಟ್ಟು ಕರಕಲಾಗಿರುವ ಘಟನೆ ಮೈಸೂರು ರಸ್ತೆ ಸಮೀಪದ ಬಾಪೂಜಿ ನಗರದ ಮುಖ್ಯರಸ್ತೆಯಲ್ಲಿ ಮಂಗಳವಾರ ನಡೆದಿದೆ.

ಬೆಂಕಿಗೆ ರಾಸಾಯನಿಕ ಕಾರ್ಖಾನೆ ಹಾಗೂ ಅದರ ಪಕ್ಕದ ಎರಡು ಅಂತಸ್ತಿನ ಕಟ್ಟಡಕ್ಕೆ ಹಾನಿಯಾಗಿದೆ. ಏಳು ವಾಹನಗಳು ಸಂಪೂರ್ಣವಾಗಿ ಅಗ್ನಿಗೆ ಆಹುತಿಯಾಗಿವೆ. ಓರ್ವ ಕಾರ್ಮಿಕನಿಗೆ ಗಾಯವಾಗಿದೆ.

ಎಷ್ಟೇ ನೀರು ಸುರಿದರೂ ಬೆಂಕಿ ಆರಲಿಲ್ಲ. ಈ ಹಂತದಲ್ಲಿ ಮೂವರು ಸಿಬ್ಬಂದಿ ನಿತ್ರಾಣರಾದರು. ಹೆಚ್ಚುವರಿ ಸಿಬ್ಬಂದಿ ಆಗಮಿಸಿ, ಕಾರ್ಯಾಚರಣೆ ಮುಂದುವರೆಸಿದರು. ಬೆಳಗ್ಗೆ 10 ರಿಂದ ರಾತ್ರಿ 8 ಗಂಟವರೆಗೆ ಸತತ 10 ತಾಸುಗಳು ಕಾರ್ಯಾಚರಣೆ ಬಳಿಕ ಬೆಂಕಿ ನಂದಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಂದಿನಂತೆ ಮಂಗಳವಾರ ಬೆಳಗ್ಗೆ 10 ಗಂಟೆಗೆ ನಾಲ್ವರು ಕಾರ್ಮಿಕರು, ರಾಸಾಯನಿಕ ವಸ್ತುಗಳನ್ನು ಆನ್‌ಲೋಡ್‌ ಮಾಡುತ್ತಿದ್ದರು. ಆಗ ಬೆಂಕಿ ಕಿಡಿ ತಾಕಿ ರಾಸಾಯನಿಕ ತುಂಬಿದ್ದ ಪೆಟ್ಟಿಗೆಗಳು ಸ್ಫೋಟಗೊಂಡಿವೆ. ಇದರಿಂದ ಕ್ಷಣಾರ್ಧದಲ್ಲಿ ಕಟ್ಟಡವನ್ನು ಅಗ್ನಿ ಜ್ವಾಲೆ ಆವರಿಸಿದೆ.