ಬೆಂಗಳೂರು(ಸೆ.12): ಶ್ರೀಲಂಕಾದಲ್ಲಿ ನಟಿ ಸಂಜನಾ ಜೊತೆ ಶಾಸಕ ಜಮೀರ್‌ ಅಹಮದ್‌ ಖಾನ್‌ ಕ್ಯಾಸಿನೋ ಪಾರ್ಟಿ ಮಾಡಿದ್ದಾರೆ ಎಂದು ಆರೋಪ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ವಿರುದ್ಧ ನ್ಯಾಯಾಲಯದ ಆದೇಶದ ಮೇರೆಗೆ ಚಾಮರಾಜಪೇಟೆ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

"

ಶಾಸಕ ಜಮೀರ್‌ ಅವರು ಕೊಟ್ಟ ದೂರಿನ ಮೇರೆಗೆ ಮೊದಲ ಗಂಭೀರ ಸ್ವರೂಪವಲ್ಲದ ಪ್ರಕರಣ (ಎನ್‌ಸಿ) ಎಂದು ದಾಖಲಿಸಿಕೊಳ್ಳಲಾಗಿತ್ತು. ಕನ್ನಡ ಚಲನಚಿತ್ರಕ್ಕೆ ಮಾದಕ ವಸ್ತು ಜಾಲ ನಂಟು ಕೃತ್ಯ ಬೆಳಕಿಗೆ ಬಂದ ನಂತರ ಸಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ಅವರು, ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಶಾಸಕ ಜಮೀರ್‌ ಅವರ ಹೆಸರು ಪ್ರಸ್ತಾಪಿಸಿ ಆರೋಪ ಮಾಡಿದ್ದರು. ಶ್ರೀಲಂಕಾದಲ್ಲಿ ನಟಿ ಸಂಜನಾ ಜೊತೆ ಶಾಸಕ ಜಮೀರ್‌ ಅಹಮ್ಮದ್‌ ಪಾರ್ಟಿ ಮಾಡಿದ್ದಾರೆ. ಇದಕ್ಕೆ ಪುರಾವೆಗಳಿವೆ ಎಂದಿದ್ದರು. ಈ ಆರೋಪಗಳಿಗೆ ತಿರುಗೇಟು ನೀಡಿರುವ ಶಾಸಕರು, ತಮ್ಮ ಮೇಲೆ ಸುಳ್ಳು ಆಪಾದನೆ ಮಾಡುವ ಮೂಲಕ ತೇಜೋವಧೆ ಮಾಡಿದ್ದಾರೆ ಎಂದು ಠಾಣೆಗೆ ದೂರು ನೀಡಿದ್ದರು.

ಶ್ರೀಲಂಕಾದ ಕ್ಯಾಸಿನೋಗಳಲ್ಲಿ ಜಮೀರ್ ಆಪ್ತ ಮಾಡುತ್ತಿದ್ದುದು ಬೇರೆಯದ್ದೇ ಕೆಲಸ..!

ಇದೀಗ ನ್ಯಾಯಾಲಯ ಎಫ್‌ಐಆರ್‌ ದಾಖಲಿಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಸಂಬರಗಿ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಅದರಂತೆ ಕಾನೂನಿನ ಪ್ರಕಾರ ತನಿಖೆ ನಡೆಸಲಾಗುವುದು ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್‌ ಪಾಟೀಲ್‌ ತಿಳಿಸಿದ್ದಾರೆ.

ನನ್ನ ಆರೋಪಕ್ಕೆ ಬದ್ಧ: ಸಂಬರಗಿ

"

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಂಬರಗಿ ಅವರು, ನನ್ನ ಆರೋಪಕ್ಕೆ ಬದ್ಧನಾಗಿದ್ದೇನೆ. ನನ್ನ ಆರೋಪ ಸುಳ್ಳು ಎಂದಾದರೆ ಸಾರ್ವಜನಿಕವಾಗಿ ಜಮೀರ್‌ ಅವರು ತಮ್ಮ ವೀಸಾ ತೋರಿಸಲಿ. ಜೂ.8ರಿಂದ 10ರವರೆಗೆ ಶಾಸಕ ಜಮೀರ್‌ ಅಹಮದ್‌ ಖಾನ್‌ ಅವರು, ಶ್ರೀಲಂಕಾದ ರಾಜಧಾನಿ ಕೊಲಂಬೊದ ಕ್ಯಾಸಿನೋದಲ್ಲಿ ಇದ್ದರು. ಅಲ್ಲಿ ನಡೆದ ಪಾರ್ಟಿಯಲ್ಲಿ ಸಂಜನಾ ಹಾಗೂ ಇತರ ಬಾಲಿವುಡ್‌ ನಟರು ಕೂಡ ಇದ್ದರು. ಈ ಹೇಳಿಕೆಯನ್ನು ನಾನು ಎದುರಿಸಲು ಸಿದ್ಧನಿದ್ದು, ಕಾನೂನಿನ ಪ್ರಕಾರ ಹೋರಾಟ ನಡೆಸುತ್ತೇನೆ ಎಂದು ತಿಳಿಸಿದರು.