ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್‌ನ ರಿಜಿಸ್ಟ್ರಾರ್ ಮಲ್ಲು ಎಂಬಾತ ತನ್ನದೇ ಕಚೇರಿಯ ಮಹಿಳಾ ಸಿಬ್ಬಂದಿಗೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಸಂತ್ರಸ್ತೆ ದೂರಿನ ಅನ್ವಯ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿ ಅಧಿಕಾರಿಯು ತಲೆಮರೆಸಿಕೊಂಡಿದ್ದಾನೆ.

ಬೆಂಗಳೂರು (ಏ.1): ರಾಜ್ಯದ ಆರೋಗ್ಯ ಕ್ಷೇತ್ರಕ್ಕೆ ಕಳಂಕ ತಂದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶಿಸ್ತು, ಉತ್ತಮ ನಡೆವಳಿಕೆಯಿಂದ ಇರಬೇಕಾದ ಉನ್ನತ ಅಧಿಕಾರಿಯೇ ತನ್ನದೇ ಕಚೇರಿಯ ಮಹಿಳೆ ಸಿಬ್ಬಂದಿಯ ಅಂಗಾಂಗ ಮುಟ್ಟಿ ಬಲವಂತವಾಗಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪದ ಮೇಲೆ ಸಿಕ್ಕಿಬಿದ್ದಿದ್ದಾರೆ.

ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ರಿಜಿಸ್ಟ್ರಾರ್ ಮಲ್ಲೂ ಎಂಬಾತ ಕೃತ್ಯ ನಡೆಸಿರುವ ಆರೋಪಿ. ತಮ್ಮದೇ ಕಚೇರಿಯ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಸಂತ್ರಸ್ತೆ ಮಹಿಳೆ ಆರೋಪಿಸಿದ್ದಾರೆ.

ಆರೋಗ್ಯ ಕ್ಷೇತ್ರದಲ್ಲೂ ಮಹಿಳೆ ಸುರಕ್ಷಿತವಲ್ಲ?

ನಗರದ ಗಾಂಧೀನಗರದಲ್ಲಿರುವ 'ಕರ್ನಾಟಕ ನರ್ಸಿಂಗ್ ಕೌನ್ಸಿಲ್' ಕಚೇರಿಯಲ್ಲಿ ಈ ಕೃತ್ಯ ನಡೆದಿದೆ. ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸಂತ್ರಸ್ತೆ. ಆದರೆ ಕೆಲಸದ ನೆಪದಲ್ಲಿ ಸಂತ್ರಸ್ತೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಸಂತ್ರಸ್ತೆ ಮಹಿಳೆಯ ಹೇಳಿಕೆಯಂತೆ, ಆರೋಪಿ ಮಲ್ಲು ಸಂತ್ರಸ್ತೆ ಮಹಿಳೆಯ ಬಳಿ ಬಂದು ಬಲವಂತವಾಗಿ ಅಂಗಾಂಗ ಮುಟ್ಟಿ ಎಳೆದಾಡಿದ್ದಾನೆ. ಈ ವೇಳೆ ಸಂತ್ರಸ್ತೆ ವಿರೋಧ ವ್ಯಕ್ತಪಡಿಸಿದರೂ ಬಿಡದೆ ಅಧಿಕಾರದ ಮದದಲ್ಲಿ ಎಳೆದಾಡಿ ವಿಕೃತಿ ಮೆರೆದಿದ್ದಾನೆ ಎಂದು ಆರೋಪಿಸಲಾಗಿದೆ.

ಸಂತ್ರಸ್ತೆ ಮಹಿಳೆಯನ್ನ ಕಾರೊಳಗೆ ಹತ್ತಿಸಲು ಯತ್ನ

ಆರೋಪಿ ಮಲ್ಲು ಕಚೇರಿಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ್ದಲ್ಲದೆ ಸಾರ್ವಜನಿಕ ಸ್ಥಳದಲ್ಲೂ ಸಂತ್ರಸ್ತೆಯ ಮೈ ಮುಟ್ಟಿ ಬಲವಂತವಾಗಿ ಎಳೆದಾಡಿದ್ದಲ್ಲದೆ ಕಾರೊಳಗೆ ಹತ್ತಿಸಲು ಯತ್ನಿಸಿದ್ದಾನೆ. ಇದಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಾರೆ. ಇಷ್ಟಕ್ಕೂ ಬಿಡದ ಆರೋಪಿ ಮಲ್ಲು, ಈ ವೇಳೆ ಆಕೆಯನ್ನು ಬಲವಂತವಾಗಿ ತಬ್ಬಿಕೊಂಡು, ಮುತ್ತು ಕೊಡಲು ಯತ್ನಿಸಿ ವಿಕೃತಿ ಮೆರೆದಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್

ರಿಜಿಸ್ಟ್ರಾರ್ ಮಲ್ಲು ವಿಕೃತ ಕಾಮದಾಟಕ್ಕೆ ನಲುಗಿ ಹೋಗಿರುವ ಸಂತ್ರಸ್ತೆ ಧೈರ್ಯ ಮಾಡಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಆರೋಪಿ ಮಲ್ಲು ವಿರುದ್ಧ ಅಧಿಕೃತವಾಗಿ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆಯ ಹೇಳಿಕೆ ಆಧರಿಸಿ ತನಿಖೆ ಚುರುಕುಗೊಂಡಿದೆ.

ಆರೋಪಿ ರಿಜಿಸ್ಟ್ರಾರ್ ಮಲ್ಲು ಎಸ್ಕೇಪ್

ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ರಿಜಿಸ್ಟ್ರಾರ್ ಮಲ್ಲು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಮಹಿಳೆಯ ಘನತೆಗೆ ಧಕ್ಕೆ ತಂದಿರುವ ಕಾಮುಕ ಅಧಿಕಾರಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸರ್ಕಾರಿ ಕಚೇರಿಯಲ್ಲೇ ಮಹಿಳಾ ಸಿಬ್ಬಂದಿಗೆ ರಕ್ಷಣೆ ಇಲ್ಲದಂತಾಗಿರುವುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.