ಸ್ವಾತಂತ್ರ್ಯ ದಿನದಂದು ಈತ ದುಷ್ಕೃತ್ಯಕ್ಕೆ ಸಂಚು ಹೂಡಿದ್ದು ಬೆಳಕಿಗೆ

ನವದೆಹಲಿ(ಆ.13):  ಸ್ವಾತಂತ್ರ್ಯ ದಿನಾಚರಣೆಗೆ ಇನ್ನು 3 ದಿನ ಬಾಕಿ ಇದೆ ಎನ್ನುವಾಗ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 2252 ಜೀವಂತ ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದ್ದು, 6 ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೆ ಕೋಲ್ಕತಾದ ವಿಕ್ಟೋರಿಯಾ ಮೆಮೊರಿಯಲ್‌ ಮೇಲೆ ಡ್ರೋನ್‌ ಹಾರಿಸಿದ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ಎರಡು ದಿನಗಳ ಹಿಂದಷ್ಟೇ ಐಸಿಸ್‌ ನಂಟಿರುವ ಮುಂಬೈ ಮೂಲದ ಸಬಾವುದ್ದೀನ್‌ ಅಜ್ಮಿ ಎಂಬಾತನನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದರು. ಈತ ಕೂಡ ಸ್ವಾತಂತ್ರ್ಯ ದಿನದಂದು ಆತ್ಮಾಹುತಿ ದಾಳಿ ನಡೆಸುವ ಮೂಲಕ ಭಾರೀ ದುಷ್ಕೃತ್ಯಕ್ಕೆ ಸಂಚು ರೂಪಿಸಿದ್ದ ವಿಷಯ ಬೆಳಕಿಗೆ ಬಂದಿತ್ತು. ಹೀಗಾಗಿ 75ನೇ ಸ್ವಾತಂತ್ರ್ಯೋತ್ಸವಕ್ಕೆ ಉಗ್ರಾತಂಕ ಎದುರಾಗಿದೆ.

ಮದ್ದುಗುಂಡು ವಶ:

ದೆಹಲಿಯಲ್ಲಿ ಆಟೋ ಚಾಲಕನೊಬ್ಬ ನೀಡಿದ ಮಾಹಿತಿ ಆಧರಿಸಿ ದಾಳಿ ನಡೆಸಿರುವ ಪೊಲೀಸರು, ಆರು ಜನರನ್ನು ಬಂಧಿಸಿದ್ದಾರೆ. ಬಂಧಿತರನ್ನು ಉತ್ತರಪ್ರದೇಶ ಮೂಲದ ರಶೀದ್‌, ಅಜ್ಮಲ್‌, ಸದ್ದಾಂ, ಉತ್ತರಾಖಂಡದ ಪರೀಕ್ಷಿತ್‌ ನೇಗಿ, ದೆಹಲಿಯ ಕಮ್ರಾನ್‌ ಮತ್ತು ನಾಸಿರ್‌ ಎಂದು ಗುರುತಿಸಲಾಗಿದೆ. ಇವರಿಂದ 2252 ಜೀವಂತ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೇಲ್ನೋಟಕ್ಕೆ ಇದು ಕ್ರಿಮಿನಲ್‌ ಜಾಲ ಎಂದು ಕಂಡುಬರುತ್ತದೆ. ಆದರೂ ಭಯೋತ್ಪಾದನೆಯ ಉದ್ದೇಶವನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಬಂಧಿತರ ವಿಚಾರಣೆ ನಡೆದಿದೆ ಎಂದು ಪೂರ್ವ ವಲಯದ ದಿಲ್ಲಿ ಪೊಲೀಸ್‌ ಹೆಚ್ಚುವರಿ ಆಯುಕ್ತ ವಿಕ್ರಮಜಿತ್‌ ಸಿಂಗ್‌ ಹೇಳಿದ್ದಾರೆ. ಬಂಧಿತರ 6 ಜನರಲ್ಲಿ ಒಬ್ಬ ಡೆಹ್ರಾಡೂನ್‌ ಮೂಲದವನು. ಆತ ಗನ್‌ ಹೌಸ್‌ ಒಂದರ ಮಾಲೀಕ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಗೆ ಕೋವಿಡ್ ಸ್ಫೋಟ ಆತಂಕ, ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಸರ್ಕಾರ

ಡ್ರೋನ್‌ ಆತಂಕ:

ಈ ನಡುವೆ ವಿಕ್ಟೋರಿಯಾ ಮೆಮೊರಿಯಲ್‌ ಮೇಲೆ ಡ್ರೋನ್‌ ಹಾರಾಡುತ್ತಿರುವುದ ಕುರಿತಾಗಿ ಸಿಐಎಸ್‌ಎಫ್‌ ಸಿಬ್ಬಂದಿ ದೂರು ನೀಡಿದ ಹಿನ್ನೆಲೆಯಲ್ಲಿ ಮೊಹಮ್ಮದ್‌ ಶಿಫಾತ್‌ ಮತ್ತು ಮೊಹಮ್ಮದ್‌ ಜಿಲ್ಲೂರ್‌ ರೆಹಮಾನ್‌ ಎಂಬ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಗಿ ಭದ್ರತೆ ಹೆಚ್ಚಿಸಲಾಗಿದೆ.

ನೂಪುರ್‌ ಶರ್ಮಾ ಮೇಲೆ ಆತ್ಮಾಹುತಿ ದಾಳಿಗೆ ಸಂಚು: ಜೈಷ್‌ ಉಗ್ರನ ಸೆರೆ

ಲಖನೌ: ಪ್ರವಾದಿ ಮೊಹಮ್ಮದರ ಅವಹೇಳನ ಆರೋಪದ ಪ್ರಕರಣ ಎದುರಿಸುತ್ತಿರುವ ಬಿಜೆಪಿಯ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಅವರ ಮೇಲೆ ಆತ್ಮಾಹುತಿ ದಾಳಿ ನಡೆಸಲು ನಿಯೋಜನೆಯಾಗಿದ್ದ ಜೈಷ್‌-ಎ-ಮೊಹಮ್ಮದ್‌ ಉಗ್ರನನ್ನು ಉತ್ತರಪ್ರದೇಶ ಪೊಲೀಸರ ಭಯೋತ್ಪಾದನಾ ನಿಗ್ರಹ ಘಟಕ ಶುಕ್ರವಾರ ಬಂಧಿಸಿದೆ. ಆರ್‌ಎಸ್‌ಎಸ್‌ ನಾಯಕರನ್ನು ಹತ್ಯೆ ಮಾಡಲು ನಿಯೋಜಿಸಿದ ಐಸಿಸ್‌ ನಂಟಿನ ಉಗ್ರ ಸಬಾವುದ್ದೀನ್‌ ಅಜ್ಮಿ ಬಂಧನದ ಬೆನ್ನಲ್ಲೇ ಮತ್ತೆ ಇಂತಹ ಘಟನೆ ವರದಿಯಾಗಿದೆ. ಶುಕ್ರವಾರ ಬಂಧಿಸಲ್ಪಟ್ಟ ವ್ಯಕ್ತಿಯನ್ನು ಮೊಹಮ್ಮದ್‌ ನದೀಮ್‌ (25) ಎಂದು ಗುರುತಿಸಲಾಗಿದೆ. ಈತ ಸಹರಾನ್‌ಪುರ ಜಿಲ್ಲೆಯ ಕುಂದಕಾಲಾ ಗ್ರಾಮದವನಾಗಿದ್ದಾನೆ. ಈತನ ಮೊಬೈಲ್‌ನಲ್ಲಿ ಪಾಕಿಸ್ತಾನ ಹಾಗೂ ಅಷ್ಘಾನಿಸ್ತಾನದಿಂದ ಕಳುಹಿಸಲಾದ ಸಂದೇಶ ಹಾಗೂ ಧ್ವನಿ ಸಂದೇಶಗಳು ಪತ್ತೆಯಾಗಿವೆ.