ಮಧ್ಯಪ್ರದೇಶದ ನರಸಿಂಗ್‌ಪುರ ಜಿಲ್ಲೆಯ ಗೋಟೆಗಾಂವ್‌ನಿಂದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಲ್ಲಿ ಅಪ್ರಾಪ್ತ ಹದಿಹರೆಯದ ವ್ಯಕ್ತಿಯ ಸಾವಿಗೆ ಬೆಕ್ಕು ಕಾರಣವಾಗಿದೆ. ಇದು ಅಚ್ಚರಿಯಾದರೂ ಸತ್ಯ, ಹಾಗಂತ ಅಪ್ರಾಪ್ತ ಬಾಲಕನನ್ನು ಕೊಂದಿದ್ದು ಅಪರಿಚಿತರಲ್ಲ. ಸ್ವಂತ ತಂದೆಯಿಂದಲೇ ಮಗ ಕತ್ತು ಸೀಳಿ ಕೊಲೆಯಾಗಿದ್ದಾನೆ.
ನವದೆಹಲಿ (ಅ.28): ಬೆಕ್ಕಿನ ಕಾರಣಕ್ಕಾಗಿ ಸ್ವಂತ ಮಗನನ್ನೇ ಅತ್ಯಂತ ಭೀಕರವಾಗಿ ಕೊಂದಿರುವ ಘಟನೆ ಮಧ್ಯಪ್ರದೇಶದ ನರಸಿಂಗಪುರ ಜಿಲ್ಲೆಯ ಗೋಟೆಗಾಂವ್‌ನಲ್ಲಿ ನಡೆದಿದೆ. ಹೌದು ಈ ವಿಚಾರ ಕೇಳಿದರೆ ನಿಮಗೆ ಅಚ್ಚರಿಯಾಗೋದು ಖಂಡಿತ. ಆದರೆ, ಈ ಸುದ್ದಿ ಮಾತ್ರ ನಿಜ. 18 ವರ್ಷ ಹುಡುಗನ ಸಾವಿಗೆ ಬೆಕ್ಕೊಂದು ಕಾರಣವಾಗಿದೆ. ಸ್ವತಃ ತಂದೆಯೇ ಮಗನ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಪೊಲೀಸರು ಆರೋಪಿ ತಂದೆಯನ್ನು ವಶಪಡಿಸಿಕೊಂಡಿದ್ದು, ಭಾಯ್ ದೂಜ್ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಆಗಿದ್ದೇನೆಂದರೆ, ಗೊಟೆಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಕೇದಾರ್ ಪಟೇಲ್, ಭಾಯಿ ದೂಜ್ ಸಂಭ್ರಮದ ರಾತ್ರಿಯಲ್ಲಿ ತನ್ನ ಮನೆಯಲ್ಲಿ ಆಹಾರ ಸೇವನೆ ಮಾಡುತ್ತಿದ್ದರು. ಈ ವೇಳೆ ಆತನ ಮುಂದೆ ಬೆಕ್ಕು ಹಾದುಹೋಗಿದ್ದಲ್ಲದೆ, ಸಾಕಷ್ಟು ಕೀಟಲೆ ಮಾಡುತ್ತಿತ್ತು. ಸಾಕಷ್ಟು ಕಿರಿಕಿರಿ ಆಗುತ್ತಿದ್ದರಿಂದ ತಮ್ಮ 18 ವರ್ಷದ ಪುತ್ರ ಅಭಿಷೇಕ್ ಪಟೇಲ್‌ಗೆ ಬೆಕ್ಕನ್ನು ಓಡಿಸುವಂತೆ ಹೇಳಿದರೂ, ಆತ ಅಪ್ಪನ ಮಾತನ್ನು ಕಿವಿಗೆ ಹಾಕಿಕೊಂಡಿರಲಿಲ್ಲ.
ತನ್ನ ಮಾತನ್ನು ಕೇಳದ ಮಗನ ಅವಿಧೇಯತೆ ಬಗ್ಗೆ ತಂದೆಗೆ ಎಷ್ಟರ ಮಟ್ಟಿಗೆ ಸಿಟ್ಟು ಬಂದಿತ್ತೆಂದರೆ, ಮೊದಲು ಬೆಕ್ಕನ್ನು ಹಿಡಿದು ಕೊಂಡು ಹಾಕಿದ್ದಾರೆ. ಬಳಿಕ ಅದೇ ಹರಿತವಾದ ಆಯುಧದಿಂದ ಕೋಪದಲ್ಲಿ ಮಗನ ಕುತ್ತಿಗೆಯನ್ನು ಸೀಳಿದ್ದಾರೆ. ಇದರಿಂದಾಗಿ ಮಗ ಸ್ಥಳದಲ್ಲೇ ಸಾವು ಕಂಡಿದ್ದಾರೆ.
ಈ ಘಟನೆಯ ಬಳಿಕ ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೋಪಿಷ್ಠ ತಂದೆಯ ವಿರುದ್ಧ ಜನ ಆಕ್ರೋಶ ಹೊರಹಾಕುತ್ತಿತ್ತು. ಈ ಸಾವಿನ ಮಾಹಿತಿ ಪಡೆದುಕೊಂಡ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಲ್ಲದೆ, ಆರೋಪಿ ತಂದೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಅಪ್ರಾಪ್ತ ಬಾಲಕನನ್ನು ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಯಿತು. ನರಸಿಂಗಪುರ ಎಎಸ್ಪಿ ಸುನೀಲ್ ಕುಮಾರ್ ಶಿವಹರೆ ಪ್ರಕಾರ, ತಂದೆಯ ತಕ್ಷಣದ ಕೋಪವು ಕೊಲೆಗೆ ಕಾರಣವಾಯಿತು ಮತ್ತು ಆರೋಪಿ ತಂದೆ ಪೊಲೀಸರ ವಶದಲ್ಲಿದ್ದಾನೆ.
