20 ವರ್ಷದ ಅತ್ಯಾಚಾರಕ್ಕೊಳಗಾದ ಯುವತಿ ಚಿಕಿಯತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಯುವತಿಯ ಅಂತ್ಯ ಸಂಸ್ಕಾರ ನೆರವೇರಿದೆ. ಯುವತಿಯ ಮೃತದೇಹ ಕೊಡಿ, ನಾಳೆ ಬೆಳಗ್ಗೆ ಅಂತ್ಯ ಸಂಸ್ಕಾರ ಮಾಡುತ್ತೇವೆ ಎಂಬ ಪೋಷಕರ ಮನವಿಯನ್ನೂ, ತಾಯಿಯ ಕಣ್ಣೀರನ್ನೂ ಲೆಕ್ಕಿಸದೆ ಉತ್ತರಪ್ರದೇಶ ಪೊಲೀಸರು ರಾತ್ರೋ ರಾತ್ರಿ ಅಂತ್ಯ ಸಂಸ್ಕಾರ ಮುಗಿಸಿದ್ದಾರೆ. ಕನಿಷ್ಠ ಮನೆಯವರಿಗೆ ಮಗಳ ಮುಖ ನೋಡುವುದಕ್ಕೂ ಸಾಧ್ಯವಾಗಿಲ್ಲ.

ಗ್ರಾಮಸ್ಥರು ಮೃತದೇಹದ ಬಳಿ ಬರದಂತೆ ಪೊಲೀಸರು ಮಾನವ ಸರಪಳಿಯನ್ನೂ ರಚಿಸಿದ್ದರು. ದೆಹಲಿ ಆಸ್ಪತ್ರೆ ಮುಂದೆ ಧರಣಿ ಕುಳಿತ ಯುವತಿಯ ಸಹೋದರರನ್ನು ಹಾಗೂ ತಂದೆಯನ್ನು ಪೊಲೀಸರು ಬಲವಂತವಾಗಿ ಎಳೆದೊಯ್ದಿದ್ದಾರೆ.

ಕಾಮಪಿಶಾಚಿಗಳ ಕ್ರೌರ್ಯಕ್ಕೆ ಬಲಿಯಾದ ಯುವತಿ; ನಾಲಿಗೆ ಕತ್ತರಿಸಿದ್ದ ದುರುಳರು!

ದೆಹಲಿಯಿಂದ 200 ಕಿಲೋ ಮೀಟರ್ ದೂರದಲ್ಲಿ ಹತ್ರಾಸ್ ಎಂಬ ಗ್ರಾಮದಲ್ಲಿ ಸೆಪ್ಟೆಂಬರ್ 14ರಂದು ದಲಿತ ಮಹಿಳೆ ಮೇಲೆ ಅತ್ಯಾಚಾರ ನಡೆದಿತ್ತು. ಗದ್ದೆಯೊಂದರಲ್ಲಿ ಮಹಿಳೆ ತನ್ನ ಕುಟುಂಬದವರ ಜೊತೆ ಹುಲ್ಲು ಕೀಳುತ್ತಿದ್ದ ವೇಳೆ ಆಕೆಯ ದುಪ್ಪಟ್ಟಾ ಹಿಡಿದು ಎಳೆದುಕೊಂಡು ಹೋಗಿದ್ದ  ಬಹುಸಂಖ್ಯಾತ ಸಮುದಾಯದ ನಾಲ್ವರು ಆಕೆ ಮೇಲೆ ಅತ್ಯಾಚಾರ ಎಸಗಿದ್ದರು.

 ಆರೋಪಿಗಳಾದ ಸಂದೀಪ್, ರಾಮು, ಲವ್‌ಕುಶ್ ಮತ್ತು ರವಿ ಎಂಬುವರನ್ನು ಈಗಾಗಲೇ ಬಂಧಿಸಲಾಗಿದೆ. ಸಂತ್ರಸ್ತೆಯ ಕುಟುಂಬಕ್ಕೆ 4.12 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ.