ಹಸು ಮೇಯಿಸಲು ತೆರಳಿದ್ದ ವ್ಯಕ್ತಿಯೊಬ್ಬನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ತಾಲೂಕಿನ ಹಾದನೂರು ಒಡೆಯನಪುರ ಗ್ರಾಮದಲ್ಲಿ ನಡೆದಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನ ಅರಣ್ಯ ವ್ಯಾಪ್ತಿಗೆ ಒಳಪಡುವ ಒಡೆಯನಪುರ ಗ್ರಾಮದ ಪುಟ್ಟಸ್ವಾಮಿಗೌಡ (45) ಹಾಗೂ ಆತನಿಗೆ ಸೇರಿದ ಹಸು ಸ್ಥಳದಲ್ಲೇ ಸಾವಿಗೀಡಾಗಿದೆ. 

ನಂಜನಗೂಡು (ಆ.01): ಹಸು ಮೇಯಿಸಲು ತೆರಳಿದ್ದ ವ್ಯಕ್ತಿಯೊಬ್ಬನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ತಾಲೂಕಿನ ಹಾದನೂರು ಒಡೆಯನಪುರ ಗ್ರಾಮದಲ್ಲಿ ನಡೆದಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನ ಅರಣ್ಯ ವ್ಯಾಪ್ತಿಗೆ ಒಳಪಡುವ ಒಡೆಯನಪುರ ಗ್ರಾಮದ ಪುಟ್ಟಸ್ವಾಮಿಗೌಡ (45) ಹಾಗೂ ಆತನಿಗೆ ಸೇರಿದ ಹಸು ಸ್ಥಳದಲ್ಲೇ ಸಾವಿಗೀಡಾಗಿದೆ. ಮೃತ ಪುಟ್ಟಸ್ವಾಮಿಗೌಡ ಪಕ್ಕದ ಜಮೀನಿನ ಸುನೀಲ್‌ ಕುಮಾರ್‌ ಹಾಗೂ ನಾಗರಾಜೇಗೌಡ ಒಡೆಯನಪುರ ಗ್ರಾಮದ ನಂಜನದೇವರ ಬೆಟ್ಟದ ಸಮೀಪದಲ್ಲಿನ ತಮ್ಮ ಜಮೀನಿನಲ್ಲಿ ದನ ಮೇಯಿಸುತ್ತಿದ್ದ ವೇಳೆ ತಂಬಾಕು ಬೆಳೆಯ ಮಧ್ಯೆ ಅಡಗಿ ಕುಳಿತಿದ್ದ ಹುಲಿ ಪುಟ್ಟಸ್ವಾಮಿ ಗೌಡ ಮೇಲೆ ದಾಳಿ ನಡೆಸಿದೆ. 

ನಂತರ ಮೃತ ಪುಟ್ಟಸ್ವಾಮಿಗೌಡರಿಗೆ ಸೇರಿದ ಹಸುವಿನ ಮೇಲೂ ದಾಳೆ ನಡೆಸಿ ಬಲಿ ಪಡೆದಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಯಡಿಯಾಲ ವ್ಯಾಪ್ತಿಯ ಆರ್‌ಎಫ್‌ಒ ಮಂಜುನಾಥ್‌, ವೈದ್ಯ ಡಾ. ರಮೇಶ್‌ಕುಮಾರ್‌, ಹುಲ್ಲಹಳ್ಳಿ ಪೊಲೀಸ್‌ ಠಾಣೆಯ ಎಸೈ ಕೃಷ್ಣಕಾಂತ್‌ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಆರ್‌ಎಫ್‌ಒ ಮಂಜುನಾಥ್‌ ಮಾತನಾಡಿ, ಜಮೀನಿನಲ್ಲಿ ಹುಲಿ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಅಲ್ಲದೆ ಹುಲಿ ದಾಳಿ ನಡೆಸಿರುವುದು ಖಾತ್ರಿಯಾಗಿದ್ದು. ಸ್ಥಳಕ್ಕೆ ಅರಣ್ಯ ಇಲಾಖೆಯ ಮೇಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುವರು. ಮೃತರ ಕುಟುಂಬಕ್ಕೆ ಸರ್ಕಾರದಿಂದ ದೊರಕುವ ಸೌಲಭ್ಯ ಮತ್ತು ಪರಿಹಾರವನ್ನು ಒದಗಿಸಿಕೊಡಲಾಗುವುದು ಎಂದರು.

ಚಾಮರಾಜನಗರ: ಕೊನೆಗೂ ಸಿಕ್ಕಿಬಿದ್ದ ಹುಲಿರಾಯ, ನಿಟ್ಟುಸಿರು ಬಿಟ್ಟ ಜನತೆ..!

ಪ್ರತ್ಯಕ್ಷದರ್ಶಿ ಸುನೀಲ್‌ಕುಮಾರ್‌ ಮಾತನಾಡಿ, ಪುಟ್ಟಸ್ವಾಮಿಗೌಡ, ನಾಗರಾಜೇಗೌಡ ಮತ್ತು ನಾನು ದನ ಮೇಯಿಸುತ್ತಿದ್ದೆವು. ಈ ವೇಳೆ ಪುಟ್ಟಸ್ವಾಮಿಗೌಡ ಮೇಲೆ ಹುಲಿ ಏಕಾಏಕಿ ದಾಳಿ ನಡೆಸಿತು. ಈ ದೃಶ್ಯವನ್ನು ಕಣ್ಣಾರೆ ಕಂಡ ನಮಗೆ ಭಯದಿಂದ ಗಾಬರಿಗೊಂಡು ಓಡಿಹೋದೆವು. ನಮ್ಮನ್ನು ಹಿಂಬಾಲಿಸಿಕೊಂಡು ಹುಲಿ ಬಂದಿತು. ಈ ವೇಳೆ ಅಲ್ಲಿದ್ದ ಹಸುವಿನ ಮೇಲೆ ದಾಳಿ ನಡೆಸಿ ಹಸುವನ್ನೂ ಕೊಂದು ಹಾಕಿತು. ನಾವು ಪ್ರಾಣ ಭಯದಿಂದ ಓಡಿಹೋಗಿ ಸ್ವಲ್ಪ ಅಂತರದಲ್ಲಿ ಪಾರಾದೆವು ಎಂದರು. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್‌ಠಾಣೆಯಲ್ಲಿ ದೂರು ದಾಖಲಾಗಿದೆ.

ಹುಲಿ​ದಾ​ಳಿಗೆ ಇಬ್ಬರಿಗೆ ಗಂಭೀರ ಗಾಯ: ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರದ ಬಳಿ ಇಬ್ಬರು ವ್ಯಕ್ತಿ​ಗ​ಳ ಮೇಲೆ ಹುಲಿ ದಾಳಿ ಮಾಡಿ, ಗಂಭೀರ ಗಾಯಗೊಳಿಸಿದ ಘಟನೆ ಶನಿವಾರ ನಡೆದಿದೆ. ತಾಲೂಕಿನ ಗೋಪಾಲಪುರ ಗ್ರಾಮದ ರೈತ ಗವಿಯಪ್ಪ(45) ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಹಸುವಿನ ಮೇಲೆ ಹುಲಿ ದಾಳಿ ಮಾಡಿದೆ. ಸನಿಹಕ್ಕೆ ಬಂದ ಗವಿಯಪ್ಪನ ಮೇಲೂ ಹುಲಿ ದಾಳಿ ಮಾಡಿ ಮುಖಕ್ಕೆ ಗಾಯಗೊಳಿಸಿದೆ. ರೈತನ ಚೀರಾಟ ಕಂಡು ಅಕ್ಕ ಪಕ್ಕದ ರೈತರು ಕೂಗಾಟ ನಡೆಸಿ ಬರುವುದನ್ನು ಕಂಡು ಹುಲಿ ಕಾಲ್ಕಿತ್ತು ಗವಿಯಪ್ಪನ ಜಮೀನಿನ ಬಳಿಯ ಶಿವಬಸಪ್ಪ ಬಾಳೆ ತೋಟಕ್ಕೆ ನುಗ್ಗಿದೆ ಎನ್ನಲಾಗುತ್ತಿದೆ. ಹುಲಿಯಿಂದ ಗಾಯಗೊಂಡ ರೈತ ಗವಿಯಪ್ಪರನ್ನು ಮೈಸೂರು ಬೃಂದಾವನ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. 

ಕೊಡಗಿನ ಕಾಫಿ ತೋಟದಲ್ಲಿ ಹುಲಿ ಮೃತದೇಹ ಪತ್ತೆ

ಆ ವೇಳೆಗೆ ಗೋಪಾಲಸ್ವಾಮಿ ಬೆಟ್ಟದ ವಲಯ ಅರಣ್ಯಾಧಿಕಾರಿ ಎನ್‌.ಪಿ.ನವೀನ್‌ಕುಮಾರ್‌ ಹಾಗು ಸಿಬ್ಬಂದಿ ಸ್ಥಳಕ್ಕಾಗಮಿಸಿದರು. ರೈತ ಶಿವಬಸಪ್ಪ ಅವರ ಜಮೀನಿನಲ್ಲಿದೆ ಎಂದು ನೂರಾರು ಜನರು ಜಮಾಯಿಸಿದ್ದು, ಈ ವೇಳೆ ಬಾಳೆತೋಟದಲ್ಲಿ ಹುಲಿ ನೋಡಲು ನಿಂತಿದ್ದ ಗೋಪಾಲಪುರ ಗ್ರಾಮದ ರಾಜಶೇಖರ್‌(32) ಮೇಲೂ ಶನಿವಾರ ಸಂಜೆ ಹುಲಿ ದಾಳಿ ಮಾಡಿ ಗಾಯಗೊಳಿಸಿದೆ. ರಾಜಶೇಖರ್‌ನ ಕಾಲು ಹಿಡಿದ ಹುಲಿ ಬಾಳೆತೋಟಕ್ಕೆ ಎಳೆದೊಯ್ಯಲು ಮುಂದಾದಾಗ ಸ್ಥಳದಲ್ಲಿದ್ದ ಜನರು ಕೂಗಾಡುತ್ತ ಕಲ್ಲು ಹೊಡೆದ ಹಿನ್ನೆಲೆ ಬಿಟ್ಟು ಮತ್ತೆ ಬಾಳೆ ತೋಟಕ್ಕೆ ತೆರಳಿದೆ. ನಂತರ ರಾಜಶೇಖರ್‌ರನ್ನು ಆಸ್ಪತ್ರೆಗೆ ಕಳುಹಿಸಲಾಯಿತು. ಹುಲಿದಾಳಿಗೆ ಬೆಚ್ಚಿದ ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸರ ದಂಡು ಕರೆಸಿಕೊಂಡು ರೈತ ಶಿವಬಸಪ್ಪ ಬಾಳೆ ತೋಟದ ಸುತ್ತ ಕಾವಲು ಹಾಕಲಾಗಿದ್ದು ರೈತರು ಹಾಗೂ ಜನರು ಆತಂಕದಲ್ಲಿದ್ದಾರೆ. ಇಬ್ಬರು ರೈತರ ಮೇಲೆ ದಾಳಿ ಮಾಡಿ ಬಾಳೆತೋಟದಲ್ಲಿರುವ ಹುಲಿ ಸೆರೆಗೆ ಅರಣ್ಯ ಇಲಾಖೆ ಮುಂದಾಗಿದ್ದು ಶನಿವಾರ ಸಂಜೆಯಾದರೂ ಅರವಳಿಕೆ ತಜ್ಞರು ಬಂದಿರಲಿಲ್ಲ.