ಬೆಳಗಾವಿ: ಸಾಲಬಾಧೆಯಿಂದ ಮನನೊಂದು ರೈತ ಆತ್ಮಹತ್ಯೆ
* ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ತೋಲಗಿ ಗ್ರಾಮದಲ್ಲಿ ನಡೆದ ಘಟನೆ
* ಕೃಷಿಗಾಗಿ ಒಟ್ಟು 3.25 ಲಕ್ಷ ರು. ಸಾಲ ಮಾಡಿಕೊಂಡಿದ್ದ ಮೃತ ರೈತ
* ಈ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಖಾನಾಪುರ(ಸೆ.20): ಕಾಲಕ್ಕೆ ಸರಿಯಾಗಿ ಮಳೆಯಾಗದೇ ಬೆಳೆಹಾನಿಯಾಗಿದ್ದರಿಂದ ಹಾಗೂ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಬೆಳೆಗೆ ಸರಿಯಾದ ಬೆಲೆ ಸಿಗದಿದ್ದರಿಂದ ಮನನೊಂದ ರೈತರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ತೋಲಗಿ ಗ್ರಾಮದಲ್ಲಿ ಇತ್ತೀಚೆಗೆ ಸಂಭವಿಸಿದೆ.
ತೋಲಗಿ ಗ್ರಾಮದ ರೈತ ಗದುಗೆಯ್ಯ ಅಲಿಯಾಸ್ ಬಾಬಯ್ಯ ಚಂದ್ರಯ್ಯ ಚಿಕ್ಕಮಠ (55) ಮೃತ ರೈತ. ಇವರು ಖಾಸಗಿ ಸೊಸೈಟಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ನಿಂದ ಕೃಷಿಗಾಗಿ ಒಟ್ಟು 3.25 ಲಕ್ಷ ರು. ಸಾಲ ಪಡೆದಿದ್ದರು.
ರಾಜ್ಯದಲ್ಲಿ ಮತ್ತೊಂದು ದುರ್ಘಟನೆ: ಒಂದೇ ಕುಟುಂಬದ ಮೂವರ ಆತ್ಮಹತ್ಯೆ
ಸಾಲ ಮರುಪಾವತಿ ಬಗ್ಗೆ ಚಿಂತಿತರಾಗಿದ್ದರು. ಇದೇ ಚಿಂತೆಯಲ್ಲಿ ತೋಲಗಿ ಗ್ರಾಮದ ಹೊರವಲಯದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಈ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.