ಕೆಲವರು ಏನೋನೋ ಕಾರಣಗಳಿಗಾಗಿ ಕಳ್ಳತನಕ್ಕೆ ಇಳಿಯುತ್ತಾರೆ. ಆದರೆ, ತಮಿಳುನಾಡಿನಲ್ಲಿ ತಾವು ನಿರ್ಮಾಣ ಮಾಡಿದ್ದ ಸಿನಿಮಾ ಶೂಟಿಂಗ್‌ಅನ್ನು ಪೂರ್ಣ ಮಾಡುವ ಸಲುವಾಗಿ ಸರಗಳ್ಳತನಕ್ಕೆ ಇಳಿದಿದ್ದ ಗ್ಯಾಂಗ್‌ಅನ್ನು ಪೊಲೀಸರು ಬಂಧಿಸಿದ್ದಾರೆ. 

ತೂತುಕುಡಿ (ಜೂ.17): ತಮಿಳು ಚಿತ್ರವನ್ನು ನಿರ್ಮಾಣ ಮಾಡುವ ಸಲುವಾಗಿ ಸರಣಿ ಸರಗಳ್ಳತನದಲ್ಲಿ ಭಾಗಿಯಾಗಿದ್ದ ಮಹಾರಾಷ್ಟ್ರ ಮೂಲದ ಒಂದೇ ಕುಟುಂಬದ ಮೂವರನ್ನು ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕೋವಿಲ್‌ಪಟ್ಟಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಸನಾಬುಲ್ಲಾ (42), ಅವರ ಮಗ ಜಾಫರ್ (19) ಮತ್ತು ಸನಾಬುಲ್ಲಾ ಅವರ ಪತ್ನಿ ರಶಿಯಾ (38) ಎಂದು ಗುರುತಿಸಲಾಗಿದ್ದು, ಅವರು ಕಳೆದ ಕೆಲವು ವರ್ಷಗಳಿಂದ ದಿಂಡುಗಲ್ ಜಿಲ್ಲೆಯ ಸೆಂಬಟ್ಟಿ ಬಳಿಯ ಗಾಂಧಿ ನಗರದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಕೋವಿಲ್‌ಪಟ್ಟಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಸರಗಳ್ಳತನದ ಬಗ್ಗೆ ಅತಿಯಾದ ದೂರುಗಳು ಬಂದ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಅದರಂತೆ, ಮೇ 14 ರಂದು ರಾತ್ರಿ 57 ವರ್ಷದ ಮಹಿಳೆ ತನ್ನ ಮನೆಯ ಮುಂದೆ ಕುಳಿತಿದ್ದಾಗ, ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ವ್ಯಕ್ತಿಗಳು ಆಕೆಯ ಚಿನ್ನದ ಸರವನ್ನು ಏಕಾಏಕಿ ದೋಚಿದ್ದಾರೆ. ಮತ್ತೊಂದು ಘಟನೆಯಲ್ಲಿ, 44 ವರ್ಷದ ಮಹಿಳೆಯ ಚಿನ್ನದ ಸರವನ್ನು ಇದೇ ವ್ಯಕ್ತಿಗಳು ಅದೇ ರೀತಿಯಲ್ಲಿ ಕದ್ದಿದ್ದಾರೆ. ಎಲ್ಲಾ ಅಪರಾಧದ ದೃಶ್ಯಗಳಲ್ಲಿ, ಮಹಿಳೆಯರು ಒಂಟಿಯಾಗಿರುವಾಗ ಗುರಿಯಾಗಿದ್ದು ಕಂಡು ಬಂದಿದೆ.

ಇದರ ಬೆನ್ನಲ್ಲೇ ಜಿಲ್ಲಾ ಪೊಲೀಸರು ಚಿನ್ನದ ಸರ ದರೋಡೆಯಲ್ಲಿ ತೊಡಗಿದ್ದ ತಂಡದ ಪತ್ತೆಗೆ ವಿಶೇಷ ತಂಡ ರಚಿಸಿ ತನಿಖೆ ನಡೆಸಿದ್ದರು. ಅಪರಾಧ ಸ್ಥಳಗಳಿಂದ ವಶಪಡಿಸಿಕೊಂಡ ಸಿಸಿಟಿವಿ ದೃಶ್ಯಾವಳಿಗಳಿಂದ ಬೈಕ್‌ನಲ್ಲಿದ್ದ ವೃದ್ಧ ಮತ್ತು ಯುವಕ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನುಳಿದ ಎಲ್ಲಾ ಸರಗಳ್ಳತನ ಘಟನೆಗಳಲ್ಲಿ ಇದೇ ಜೋಡಿ ಭಾಗಿಯಾಗಿರುವುದು ಪೊಲೀಸರಿಗೆ ತಿಳಿದು ಬಂದಿದೆ.

ನಂತರ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ಬೈಕ್ ನಂಬರ್ ಸಹಾಯದಿಂದ ಮೂವರನ್ನೂ ಬಂಧಿಸಿದ್ದಾರೆ. ಈ ಮೂವರನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ ವೇಳೆ, ತಮಿಳು ಸಿನಿಮಾವೊಂದರ ನಿರ್ಮಾಣಕ್ಕೆ ಹಣ ಹೂಡುವ ಸಲುವಾಗಿ ಹೀಗೆ ಮಾಡಿದ್ದಾಗಿ ತಿಳಿಸಿದ್ದಾರೆ. ಈಗಾಗಲೇ ಅವರು ನಿರ್ಮಾಣ ಮಾಡಿರುವ ಸಿನಿಮಾದ ಚಿತ್ರೀಕರಣ ಕೂಡ ಆರಂಭವಾಗಿತ್ತು. ಆರೋಪಿ ಸನಾಬುಲ್ಲಾ ತಮಿಳು ಮತ್ತು ಹಿಂದಿಯಲ್ಲಿ ಕೆಲವು ಬಿ ದರ್ಜೆಯ ಸಿನಿಮಾಗಳಲ್ಲಿ ನಟಿಸಿದ್ದು, ಸಿನಿಮಾ ನಿರ್ದೇಶಿಸಲು ಬಯಸಿದ್ದ.

ಬೆಂಗಳೂರಿನ ಐಟಿ ಕಂಪನಿಗೆ ಬಾಂಬ್ ಬೆದರಿಕೆ ಸತ್ಯ ಬಾಯ್ಬಿಟ್ಟ ಮಾಜಿ ಉದ್ಯೋಗಿ

ಚಿತ್ರ ನಿರ್ಮಿಸಲು ಹಣದ ಅಗತ್ಯವಿದ್ದು, ಮೂವರೂ ಕೂಡ ಸರಗಳ್ಳತನ ಮಾಡುವ ಉಪಾಯ ರೂಪಿಸಿದ್ದರು. ಒಂಟಿಯಾಗಿರುವ ಮತ್ತು ಚಿನ್ನದ ಸರಗಳನ್ನು ಧರಿಸಿರುವ ಮಹಿಳೆಯರನ್ನು ಗುರುತಿಸಲು ವಿವಿಧ ಸ್ಥಳಗಳಿಗೆ ಭೇಟಿ ನೀಡಿದರು. ಆರೋಪಿ ಸನಾಬುಲ್ಲಾ ಈ ಚಿತ್ರಕ್ಕೆ ‘ನಾನ್ ಅವಂಥನ್’ (ಇದು ನಾನು) ಎಂದು ಶೀರ್ಷಿಕೆ ನೀಡಿದ್ದು, ಅದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲು ಯೋಜಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಂಡ್ತಿ ಕೊಲ್ಲೋಕೆ ಕಂಟ್ರಿ ಪಿಸ್ತೂಲ್‌ ಖರೀದಿಸಿದ ಪತಿ: ಗನ್‌ ಇಟ್ಕೊಳೋಕೆ ಗೊತ್ತಾಗದೇ ಜೈಲು ಸೇರಿದ