ಕೃಷಿ ಸಚಿವ ಬಿ ಸಿ ಪಾಟೀಲ್ ಉಸ್ತುವಾರಿ ಜಿಲ್ಲೆಯಲ್ಲಿ ನಕಲಿ ಗೊಬ್ಬರ, ಅನ್ನದಾತರಿಗೆ ವಂಚನೆ..!
ಕೃಷಿ ಮಂತ್ರಿಗಳ ಉಸ್ತುವಾರಿ ಜಿಲ್ಲೆಯಲ್ಲಿ ನಕಲಿ DAP ಗೊಬ್ಬರದ ಹಾವಳಿ ಹೆಚ್ಚಾಗಿದ್ದು, ನಕಲಿ ರಸಗೊಬ್ಬರದ ಅಕ್ರಮ ಮಾರಾಟದಿಂದ ಅನ್ನದಾತರಿಗೆ ವಂಚನೆ ಮಾಡಲಾಗಿದೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ, (ಜುಲೈ.22): ರಾಜ್ಯದಲ್ಲಿ ರಸಗೊಬ್ಬರ ಸಮಸ್ಯೆಯು ದಿನೇ ದಿನೇ ಉಲ್ಬಣವಾಗುತ್ತಿದೆ. ಗೊಬ್ಬರ ಸಿಗದೆ ಅನ್ನದಾತರು ನಿತ್ಯ ಪರದಾಡುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೃಷಿ ಮಂತ್ರಿಗಳ ಉಸ್ತುವಾರಿ ಜಿಲ್ಲೆಯಲ್ಲೇ ವಂಚಕರ ಟೀಂ ನಕಲಿ ರಸಗೊಬ್ಬರ ತಯಾರಿಸಿ, ನೂರಾರು ಅನ್ನದಾತರಿಗೆ ಮೋಸ ಮಾಡಲು ಮುಂದಾಗಿದೆ. DAP ಎಂದು ನಂಬಿಸಿ ರಸಗೊಬ್ಬರ ವಿತರಣೆ ಮಾಡಿದ್ದು, ನಕಲಿ ಗೊಬ್ಬರ ಹಾಕಿದ ಅನ್ನದಾತರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.....,
ಇದು ಕೋಟೆನಾಡು ಚಿತ್ರದುರ್ಗ ನಗರದ ಮೆದೇಹಳ್ಳಿ ರಸ್ತೆಯಲ್ಲಿರುವ ಲಕ್ಷ್ಮಿ ಪರ್ಟಿಲೈಸರ್ಸ್. ಕಳೆದ 1 ತಿಂಗಳ ಹಿಂದೆ ಕೃಷಿ ಸಚಿವರ ಉಸ್ತುವಾರಿ ಜಿಲ್ಲೆ ಚಿತ್ರದುರ್ಗದಲ್ಲಿ DAP ರಸಗೊಬ್ಬರ ಸಮಸ್ಯೆಯಿಂದ ಅನ್ನದಾತರು ಕಂಗಾಲಾಗಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಲಕ್ಷ್ಮಿ ಎಂಟರ್ ಪ್ರೈಸಸ್ ಮಾಲೀಕ ಹಾಗೂ ಅವರ ಟೀಂ ಮಂಗಳ ಜೈ ಕಿಸಾನ್ ಹೆಸರಲ್ಲಿ ನಕಲಿ DAP ಗೊಬ್ಬರ ತಯಾರು ಮಾಡಿದೆ. ಆಂಧ್ರ ಮೂಲದ ಕಂಪನಿಯಿಂದ ಈ ಗೊಬ್ಬರವನ್ನ ತಂದಿದ್ದು, ಜಿಲ್ಲೆಯ ನೂರಾರು ರೈತರಿಗೆ ವಿತರಣೆ ಮಾಡಿದ್ದಾರೆ.
ನಕಲಿ ರಸಗೊಬ್ಬರ: ಅನ್ನದಾತರಿಗೆ ಪಂಗನಾಮ!
ಜಿಲ್ಲೆಯಲ್ಲಿ ಕೃಷಿ ಇಲಾಖೆಯಲ್ಲಿ ರಸಗೊಬ್ಬರ ಗೊಬ್ಬರದ ಸಮಸ್ಯೆಯಿಂದ ಲಕ್ಷ್ಮಿ ಟ್ರೇಡರ್ಸ್ ಗೆ ಅನ್ನದಾತರು ಮುಗಿಬಿದಿದ್ದರು. ನೂರಾರು ಪಾಕೆಟ್ ತೆಗೆದುಕೊಂಡು ಹೋಗಿ ಬಿತ್ತನೆ ಕೂಡಾ ಮಾಡಿದ್ರು. ಆದರೆ ಇದೀಗ ಸಂಪೂರ್ಣ ಬೆಳಗಳು ಕೈಕೊಟ್ಟಿದ್ದು, ನಕಲಿ ರಸಗೊಬ್ಬರದ ಜಾಲ ಪತ್ತೆಯಾಗಿದೆ. ಇದ್ರಿಂದ ಸಾಲಸೂಲ ಮಾಡಿ ಕೈಸುಟ್ಟುಕೊಂಡ ಅನ್ನದಾತರು ಚಿತ್ರದುರ್ಗದ ಲಕ್ಷ್ಮಿ ಟ್ರೇಡರ್ಸ್ ಅಂಗಡಿಗೆ ಮುತ್ತಿಗೆ ಹಾಕಿದ್ದು, ಅಂಗಡಿ ಮಾಲೀಕ ಹಾಗೂ ನಕಲಿ ಕಂಪನಿಯ ವಿರುದ್ದ ಆಕ್ರೋಶಗೊಂಡಿದ್ದಾರೆ. ಅಲ್ಲದೆ ಕೃಷಿ ಮಂತ್ರಿ ಬಿಸಿ ಪಾಟೀಲ್ ಉಸ್ತುವಾರಿ ಜಿಲ್ಲೆಯಲ್ಲೇ ಇಂಥ ಮಹಾ ಮೋಸವಾಗಿದ್ದು, ಕೃಷಿ ಸಚಿವರ ವಿರುದ್ದ ಅನ್ನದಾತರು ಗರಂ ಆಗಿದ್ದಾರೆ.
ಇನ್ನೂ ಪಕ್ಕದ ಆಂಧ್ರದಿಂದ ನಕಲಿ ಗೊಬ್ಬರ ಜಿಲ್ಲೆಗೆ ಎಂಟ್ರಿ ಕೊಟ್ಟಿದ್ದು, ಕೃಷಿ ಇಲಾಖೆ ಅಧಿಕಾರಿಗಳ ಮೇಲೂ ಸಂಶಯಕ್ಕೆ ಕಾರಣವಾಗಿದೆ. ಅಲ್ಲದೆ ಘಟನೆ ಬೆಳಕಿಗೆ ಬರುತ್ತಿದ್ದಂತೆ ಕೂಡಲೇ ಎಚ್ಚೆತ್ತ ಕೃಷಿ ಇಲಾಖೆ ಅಧಿಕಾರಿಗಳು ನೂರಾರು ಚೀಲ ನಕಲಿ ಗೊಬ್ಬರ ವಶಕ್ಕೆ ಪಡೆದಿದ್ದು, ದಾವಣಗೆರೆಯ ಲ್ಯಾಬ್ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಅಷ್ಟೆ ಅಲ್ಲದೆ ಕೃಷಿ ಇಲಾಖೆ ಅಧಿಕಾರಿಗಳು ಲಕ್ಷ್ಮಿ ಟ್ರೇಡರ್ಸ್ ಅಂಗಡಿ ಮಾಲೀಕ ಹಾಗೂ ದಾವಣಗೆರೆ ಮೂಲದ ಒರ್ವನ ವಿರುದ್ದ ಚಿತ್ರದುರ್ಗ ನಗರ ಠಾಣೆಯಲ್ಲಿ FIR ದಾಖಲಿಸಿದ್ದು, ಅಂಗಡಿಯ ಪರವಾನಗಿ ಕೂಡ ರದ್ದು ಮಾಡಿದ್ದಾರೆ. .
ಒಟ್ಟಿನಲ್ಲಿ ಕೃಷಿ ಮಂತ್ರಿಗಳ ಉಸ್ತುವಾರಿ ಜಿಲ್ಲೆಯಲ್ಲೇ ನಕಲಿ ಗೊಬ್ಬರದ ಹಾವಳಿ ಹೆಚ್ಚಾಗಿದ್ದು, ಇದೀಗ ಮಹಾ ವಂಚನೆಯ ಜಾಲ ಬೆಳಕಿಗೆ ಬಂದಿದೆ. ಇನ್ನಾದ್ರು ಸಚುವರು ಎಚ್ಚೇತ್ತು ರೈತರಿಗೆ ವಂಚಿಸುವ ಇಂಥ ವಂಚಕರನ್ನ ಮಟ್ಟ ಹಾಕಬೇಕಿದೆ.......,