ಆರೋಪಿ ನವನೀತ್‌ ಪ್ರಸಾದ್‌, ಸಹೋದ್ಯೋಗಿಯೊಬ್ಬರ ಬಗ್ಗೆ ದ್ವೇಷ ಸಾಧಿಸುತ್ತಿದ್ದ. ಆತನ ಬಗ್ಗೆ ಸೀನಿಯರ್‌ ಮ್ಯಾನೇಜರ್‌ಗೆ ದೂರು ನೀಡಲು ಕಂಪನಿಗೆ ಕರೆ ಮಾಡಿದ್ದ. ಕಂಪನಿ ಸಿಬ್ಬಂದಿ ತಕ್ಷಣಕ್ಕೆ ಕರೆ ಕನೆಕ್ಟ್ ಮಾಡಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡು ಕಂಪನಿಯ ಕಟ್ಟಡಕ್ಕೆ ಬಾಂಬ್‌ ಇರಿಸಿರುವುದಾಗಿ ಬೆದರಿಸಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. 

ಬೆಂಗಳೂರು(ಜೂ.14): ಬೆಳ್ಳಂದೂರಿನ ಆರ್‌ಎಂಝಡ್‌ ಇಕೋ ಸ್ಪೇಸ್‌ ಕ್ಯಾಂಪಸ್‌ನ ಕಂಪನಿಯೊಂದಕ್ಕೆ ಅಲ್ಲಿನ ಉದ್ಯೋಗಿಯೇ ಹುಸಿ ಬಾಂಬ್‌ ಬೆದರಿಕೆ ಕರೆ ಮಾಡಿ ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ಮಂಗಳವಾರ ಜರುಗಿದೆ.

ಇಲ್ಲಿನ ‘ಐಡಿಬಿಒ ರೈಸ್‌ ಪ್ರೈವೆಟ್‌ ಲಿಮಿಟೆಡ್‌ ಕಂಪನಿ’ಗೆ ಮಧ್ಯಾಹ್ನ 12ರ ಸುಮಾರಿಗೆ ಬಾಂಬ್‌ ಬೆದರಿಕೆ ಕರೆ ಬಂದಿದೆ. ವಿಷಯ ತಿಳಿದ ಕೂಡಲೇ ಬೆಳ್ಳಂದೂರು ಠಾಣೆ ಪೊಲೀಸರು, ಬಾಂಬ್‌ ನಿಷ್ಕ್ರೀಯ ದಳ, ಶ್ವಾನದಳ, ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ. ಮೊದಲಿಗೆ ಕಂಪನಿಯ ಉದ್ಯೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿ, ಸುಮಾರು ಒಂದು ತಾಸು ಕಂಪನಿಯ ಕಟ್ಟಡ ಹಾಗೂ ಸುತ್ತಮುತ್ತಲ ಸ್ಥಳವನ್ನು ಇಂಚಿಂಚೂ ತಪಾಸಣೆ ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲಿ ಯಾವುದೇ ಬಾಂಬ್‌ ಅಥವಾ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಹೀಗಾಗಿ ಇದೊಂದು ಹುಸಿಬಾಂಬ್‌ ಬೆದರಿಕೆ ಕರೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಬಳಿಕ ಇಕೋ ಸ್ಪೇಸ್‌ ಕ್ಯಾಂಪಸ್‌ನ ವಿವಿಧ ಕಂಪನಿಗಳ ಉದ್ಯೋಗಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ವೈಯಕ್ತಿಕ ದ್ವೇಷ, ಗಾಂಜಾ ಘಾಟು: ಕಾಡಿನಲ್ಲಿ ಸಿಕ್ತು ಹುಡುಗನ ಶವ

ಉದ್ಯೋಗಿಯಿಂದಲೇ ಬೆದರಿಕೆ ಕರೆ:

ಐಡಿಬಿಒ ಕಂಪನಿಯ ಉದ್ಯೋಗಿ ನವನೀತ್‌ ಪ್ರಸಾದ್‌ ಎಂಬಾತನೇ ಹುಸಿ ಬಾಂಬ್‌ ಬೆದರಿಕೆ ಕರೆ ಮಾಡಿದ್ದು ಎಂಬುದು ಗೊತ್ತಾಗಿದೆ. ಕೇರಳ ಮೂಲದ ಈತ ಕಳೆದ ಒಂದು ವರ್ಷದಿಂದ ಐಡಿಬಿಒ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಎರಡು ದಿನಗಳಿಂದ ಕೆಲಸಕ್ಕೆ ಗೈರು ಹಾಜರಾಗಿದ್ದ. ಮಂಗಳವಾರ ಬೆಳಗ್ಗೆ 11ರ ಸುಮಾರಿಗೆ ಕಂಪನಿಗೆ ಕರೆ ಮಾಡಿರುವ ಈತ ತನ್ನ ಹೆಸರು ಹೇಳಿ ಪರಿಚಯಿಸಿಕೊಂಡು ಸೀನಿಯರ್‌ ಮ್ಯಾನೇಜರ್‌ಗೆ ಕರೆ ಕನೆಕ್ಟ್ ಮಾಡುವಂತೆ ಹೇಳಿದ್ದಾನೆ. ಈ ವೇಳೆ ಕಂಪನಿ ಸಿಬ್ಬಂದಿ ಕರೆ ಕನೆಕ್ಟ್ ಮಾಡಲು ವಿಳಂಬ ಮಾಡಿದ್ದಾರೆ. ಬಳಿಕ ಮಧ್ಯಾಹ್ನ 12ಕ್ಕೆ ಮತ್ತೆ ಕರೆ ಮಾಡಿರುವ ನವನೀತ್‌, ‘ಕಂಪನಿಯ ಕಟ್ಟಡದಲ್ಲಿ ಬಾಂಬ್‌ ಇರಿಸಲಾಗಿದೆ. ಸದ್ಯದಲ್ಲೇ ಸ್ಫೋಟವಾಗಲಿದೆ’ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾನೆ. ಬಳಿಕ ಕಂಪನಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನವನೀತ್‌ ಪ್ರಸಾದ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ.

ಸಹೋದ್ಯೋಗಿ ಬಗ್ಗೆ ದ್ವೇಷ:

ಆರೋಪಿ ನವನೀತ್‌ ಪ್ರಸಾದ್‌, ಸಹೋದ್ಯೋಗಿಯೊಬ್ಬರ ಬಗ್ಗೆ ದ್ವೇಷ ಸಾಧಿಸುತ್ತಿದ್ದ. ಆತನ ಬಗ್ಗೆ ಸೀನಿಯರ್‌ ಮ್ಯಾನೇಜರ್‌ಗೆ ದೂರು ನೀಡಲು ಕಂಪನಿಗೆ ಕರೆ ಮಾಡಿದ್ದ. ಕಂಪನಿ ಸಿಬ್ಬಂದಿ ತಕ್ಷಣಕ್ಕೆ ಕರೆ ಕನೆಕ್ಟ್ ಮಾಡಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡು ಕಂಪನಿಯ ಕಟ್ಟಡಕ್ಕೆ ಬಾಂಬ್‌ ಇರಿಸಿರುವುದಾಗಿ ಬೆದರಿಸಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.