ಬೆಂಗಳೂರು (ಅ.01):  ಮಾದಕ ವಸ್ತು ಮಾರಾಟ ಜಾಲ, ಹವಾಲಾ ದಂಧೆ, ಅಕ್ರಮ ಹಣ ವರ್ಗಾವಣೆ ಬಳಿಕ ಈಗ ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲೂ ನಟಿ ಸಂಜನಾ ಗಲ್ರಾನಿ ಹೆಸರು ಕೇಳಿ ಬಂದಿದ್ದು, ದುಬಾರಿ ಬಡ್ಡಿಯ ಆಸೆಗೆ ಬಿದ್ದು ಆ ಮೋಸದ ಕಂಪನಿಯಲ್ಲಿ ಲಕ್ಷಾಂತರ ಮೊತ್ತದ ಬಂಡವಾಳ ತೊಡಗಿಸಿ ನಟಿ ಸಹ ಹಣ ಕಳೆದುಕೊಂಡು ಸಂತ್ರಸ್ತೆಯಾಗಿದ್ದಾಳೆ ಎಂದು ತಿಳಿದುಬಂದಿದೆ.

ಡ್ರಗ್ಸ್‌ ಜಾಲದಲ್ಲಿದ್ದ ರಂಜನಿ ಎಸ್ಕೇಪ್‌! ಬಲೆ ಬೀಸಿದ ಪೊಲೀಸ್

‘ನನ್ನ ಕೆಲವು ಸ್ನೇಹಿತರ ಮೂಲಕ ಐ ಮಾನಿಟರಿ ಅಡ್ವೈಸರಿ (ಐಎಂಎ) ಕಂಪನಿ ಮಾಲಿಕ ಮನ್ಸೂರ್‌ ಮಹಮ್ಮದ್‌ ಖಾನ್‌ ಪರಿಚಯವಾಯಿತು. ನಾವು ಹಾಕಿದ ಬಂಡವಾಳಕ್ಕೆ ಎರಡರಿಂದ ಮೂರು ಪಟ್ಟು ಲಾಭ ಬರಲಿದೆ ಎಂದು ಆತ ಹೇಳಿದ್ದ. ಈ ಮಾತುಗಳನ್ನು ನಂಬಿ ನಾನು ಹಣ ಹಾಕಿದೆ. ಆದರೆ ಬಿಡಿಗಾಸು ಸಂಪಾದನೆಯಾಗದೆ ನಷ್ಟವಾಯಿತು. ಚಲನಚಿತ್ರ ಹಾಗೂ ಜಾಹೀರಾತು ಕ್ಷೇತ್ರಗಳಲ್ಲಿ ದುಡಿದ ಹಣವು ನೀರಿನಲ್ಲಿ ಹೋಮ ಮಾಡಿದಂತಾಯಿತು’ ಎಂದು ಸಿಸಿಬಿ ಅಧಿಕಾರಿಗಳ ವಿಚಾರಣೆ ಸಂಜನಾ ಹೇಳಿ ಕಣ್ಣೀರಿಟ್ಟಿದ್ದಳು ಎಂದು ಮೂಲಗಳು ತಿಳಿಸಿವೆ.

ಮಂಗಳೂರು ಡ್ರಗ್ಸ್ ತನಿಖೆಗೆ ಟ್ವಿಸ್ಟ್; ಸಿಸಿಬಿ ಇನ್ ಸ್ಪೆಕ್ಟರ್ ಶಿವಪ್ರಕಾಶ್ ದಿಢೀರ್ ವರ್ಗಾವಣೆ!

‘ಐಎಂಎ ಕಂಪನಿಯಿಂದ ವಂಚನೆಯಾಗುತ್ತದೆ ಎಂದು ಭಾವಿಸಿರಲಿಲ್ಲ. ನನ್ನ ಕೆಲ ಗೆಳೆಯರು ಆ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದರು. ಇದರಿಂದ ನನಗೂ ವಿಶ್ವಾಸ ಮೂಡಿತು. ಬಂಡವಾಳ ಹೂಡಿಕೆ ನಂತರವು ಮಾಲಿಕ ಮನ್ಸೂರ್‌ ಸ್ನೇಹದಿಂದಲೇ ನಡೆದುಕೊಂಡಿದ್ದ. ಹಣ ಸಿಗದೆ ಹೋದರೂ ಚಿನ್ನ ಕೊಡುವ ಆಶ್ವಾಸನೆ ಕೊಟ್ಟಿದ್ದ. ಒಂದೆರಡು ಕಂತಿನ ಆದಾಯ ಸಿಕ್ಕಿತು. ನಂತರ ಹಣ ಬರಲಿಲ್ಲ.ನಾನು ಹೂಡಿಕೆ ಮಾಡಿದ್ದ ಹಣ ಮರಳಿ ಪಡೆಯಲು ಸಾಧ್ಯವಾಗಲಿಲ್ಲ’ ಎಂದು ಸಂಜನಾ ಬೇಸರ ವ್ಯಕ್ತಪಡಿಸಿದ್ದಾಳೆ.

ಹೀಗಾಗಿ ಐಎಂಎ ಕಂಪನಿಯಿಂದ ವಂಚನೆಗೊಂಡವರ ಸಾವಿರಾರು ಜನರಲ್ಲಿ ಸಂಜನಾ ಸಹ ಒಬ್ಬ ಸಂತ್ರಸ್ತೆಯಾಗಿದ್ದಾಳೆ. ಆದರೆ ಈ ಕಂಪನಿ ವಿರುದ್ಧ ದೂರು ಕೊಟ್ಟಿರುವ ಬಗ್ಗೆ ಖಚಿತಪಡಿಸಿಲ್ಲ. ಇದೇ ಕಂಪನಿಯ ವಂಚನೆ ಕೃತ್ಯದಲ್ಲೂ ಚಾಮರಾಜಪೇಟೆ ಶಾಸಕ ಜಮೀರ್‌ ಅಹಮ್ಮದ್‌ ಖಾನ್‌ ಹೆಸರು ಕೇಳಿ ಬಂದಿತ್ತು. ಹಾಗಾಗಿ ಮಾದಕ ವಸ್ತು ಮಾರಾಟ ಜಾಲದ ಬಳಿಕ ಸಂಜನಾ ಹಣಕಾಸು ವ್ಯವಹಾರಗಳು ಒಂದೊಂದಾಗಿ ಹೊರ ಬರುತ್ತಿವೆ. ಈಗಾಗಲೇ ಬಿಟ್‌ ಕಾಯಿನ್‌ ಬಳಸಿ ಹವಾಲಾ ದಂಧೆ, ಅಕ್ರಮ ವರ್ಗಾವಣೆ ಪ್ರಕರಣಗಳ ಸಂಬಂಧ ಆಕೆ ಇ.ಡಿ. ತನಿಖೆ ಎದುರಿಸುತ್ತಿದ್ದಾಳೆ. ಐಎಂಎ ಪ್ರಕರಣದಲ್ಲೂ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆಯಬಹುದು ಎಂದು ತಿಳಿದು ಬಂದಿದೆ.

ಸಂಜನಾ ಬಳಿ 11 ಬ್ಯಾಂಕ್‌ ಖಾತೆ

ತನ್ನ ಹಣಕಾಸು ವ್ಯವಹಾರಗಳಿಗೆ 11 ಬ್ಯಾಂಕ್‌ಗಳಲ್ಲಿ ಸಂಜನಾ ಖಾತೆಗಳನ್ನು ಹೊಂದಿದ್ದಳು. ಮಾದಕ ವಸ್ತು ಮಾರಾಟ ಜಾಲ ಪ್ರಕರಣದಲ್ಲಿ ಬಂಧನಕ್ಕೂ ಮುನ್ನ ಆಕೆ ಆ ಎಲ್ಲ ಖಾತೆಗಳಲ್ಲಿ ದೊಡ್ಡ ಮೊತ್ತದ ಹಣ ಡ್ರಾ ಮಾಡಿದ್ದಾಳೆ. ಪ್ರಸ್ತುತ ನಟಿ ಖಾತೆಯಲ್ಲಿ .40 ಲಕ್ಷ ಮಾತ್ರ ಉಳಿದಿದೆ. ಅಲ್ಲದೆ ವಿದೇಶಿ ಬ್ಯಾಂಕ್‌ ಖಾತೆಗಳಿಗೆ ಸಹ ಸಂಜನಾ ಹಣ ವರ್ಗಾವಣೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಎಲ್ಲ ಹಣಕಾಸು ವ್ಯವಹಾರ ಬಗ್ಗೆ ಇ.ಡಿ. ಅಧಿಕಾರಿಗಳು ಶೋಧಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.