ನವದೆಹಲಿ[ಫೆ. 09] ರಾಷ್ಟ್ರ ರಾಜಧಾನಿಯಿಂದ ಒಂದು ಸುದ್ದಿ ಸ್ಫೋಟವಾಗಿದೆ. ಕಾಲೇಜು ಆವರಣಕ್ಕೆ ನುಗ್ಗಿದ ಮಧ್ಯವಯಸ್ಕ ಪುಂಡರ ಗುಂಪು ವಿದ್ಯಾರ್ಥಿನಿಯರ ಎದರುರಿಗೆ ಹಸ್ತಮೈಥುನ ಮಾಡಿಕೊಂಡಿದೆ.

ರಾಷ್ಟ್ರ ರಾಜಧಾನಿ ದೆಹಲಿಯ ಗಾರ್ಗಿ ಕಾಲೇಜಿನಲ್ಲಿ ಫೆ. 6ರಂದು ನಡೆದ ಉತ್ಸವದ ವೇಳೆ ಪಾನಮತ್ತ ವ್ಯಕ್ತಿಗಳ ದೊಡ್ಡ ಗುಂಪೊಂದು ಕಾಲೇಜು ಆವರಣ ಪ್ರವೇಶಿಸಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ವಿದ್ಯಾರ್ಥಿನಿಯರನ್ನು ಶೌಚಾಲಯದಲ್ಲಿ ಬಂಧಿಸಿ ಅನುಚಿತ ವರ್ತನೆ ಮಾಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಮೂರು ದಿನಗಳ ಕಾಲ ನಡೆದ ಕಾಲೇಜು ಉತ್ಸವದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಕಾಲೇಜು ಪ್ರವೇಶಿಸುವ ಮುನ್ನ ಅಲ್ಲೇ ಹತ್ತಿರದಲ್ಲಿ ನಡೆದ ಸಿಎಎ ಪರ ಸಮಾವೇಶದಲ್ಲಿಯೂ ಇಲ್ಲಿ ಕಿರುಕುಳ ಕೊಟ್ಟವರು ಪಾಲ್ಗೊಂಡಿದ್ದರು ಎನ್ನಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಇದೆಂಥಾ ವಿಕೃತಿ

ಗಾರ್ಗಿ ಕಾಲೇಜಿನ ವಿದ್ಯಾರ್ಥಿನಿಯರು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಅವರೆಲ್ಲ ಪಾನಮತ್ತ ಮಧ್ಯವಯಸ್ಕ ವ್ಯಕ್ತಿಗಳು. ನಮಗೆ ಕಿರುಕುಳ ನೀಡಿದರು. ಅಲ್ಲದೆ, ನಮ್ಮ ಮುಂದೆಯೇ ಹಸ್ತಮೈಥುನ ಮಾಡಿಕೊಂಡರು. ನಾವು ಕಿರುಚಿದರೆ ಅವರು ನಗುತ್ತಿದ್ದರು ಎಂದು ಹೇಳಿದ್ದಾರೆ.

ಆದರೆ ಈ ಬಗ್ಗೆ ಗಾರ್ಗಿ ಕಾಲೇಜು ಆಡಳಿತ ಮಂಡಳಿ ಇನ್ನೂ ದೂರು ದಾಖಲಿಸಿಲ್ಲ. ಈ ಉತ್ಸವವು ದೆಹಲಿ ವಿಶ್ವವಿದ್ಯಾಲಯದ ಇತರೆ ಕಾಲೇಜಿನಲ್ಲಿ ಓದುವ ಪುರುಷರಿಗೂ ಮುಕ್ತವಾಗಿತ್ತು. ಉತ್ಸವ ವೇಳೆ ಪೊಲೀಸ್​ ಮತ್ತು ಬೌನ್ಸರ್​ಗಳು ಕ್ಯಾಂಪಸ್​ನಲ್ಲಿದ್ದರು, ಕಾಲೇಜು ಸಿಬ್ಬಂದಿಯೂ ಕೂಡ ಕರ್ತವ್ಯದಲ್ಲಿದ್ದರು ಎಂದು ಕಾಲೇಜು ಆಡಳಿತ ಮಂಡಳಿ ಹೇಳಿದೆ.