ಬೆಂಗಳೂರು(ಜು.30): ರಾಜಧಾನಿಯಲ್ಲಿ ಪ್ರಮುಖ ಪಬ್‌ಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ಅಂತಾರಾಷ್ಟ್ರೀಯ ಮಟ್ಟದ ನಾಲ್ವರು ಪೆಡ್ಲರ್‌ಗಳನ್ನು ಬಂಧಿಸಿದ ಸಿಸಿಬಿ ಪೊಲೀಸರು, .1.25 ಕೋಟಿ ಮೌಲ್ಯದ ಭಾರಿ ಪ್ರಮಾಣದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಕೇರಳ ಮೂಲದ ಶಾಹದ್‌ ಮೊಹಮ್ಮದ್‌, ಅಜ್ಮಲ್‌, ಅಜಿನ್‌ ಕೆ.ಜಿ.ವರ್ಗಿಸ್‌, ನಿತಿನ್‌ ಮೋಹನ್‌ ಬಂಧಿತರು. ಆರೋಪಿಗಳಿಂದ 2 ಸಾವಿರ ಎಲ್‌ಎಸ್‌ಡಿ ಮಾತ್ರೆಗಳು, 110 ಗ್ರಾಂ ತೂಕದ ಎಂಡಿಎಂಎ, 5 ಕೆ.ಜಿ.ಗಾಂಜಾ ಸೇರಿದಂತೆ .1.25 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಲಾಗಿದೆ. ಈ ವೇಳೆ ತಪ್ಪಿಸಿಕೊಂಡಿರುವ ಪ್ರಮುಖ ಆರೋಪಿ ಹಾಗೂ ಪಬ್‌ವೊಂದರ ಡಿಜೆ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಬೆಂಗಳೂರಿಗೆ 1 ಲಕ್ಷ ರ‍್ಯಾಪಿಡ್ ಆ್ಯಂಟಿಜೆನ್‌ ಕಿಟ್‌

ಕೆಲ ದಿನಗಳಿಂದ ಡಾರ್ಕ್ ವೆಬ್‌ ಮೂಲಕ ವಿದೇಶದಿಂದ ಡ್ರಗ್ಸ್‌ ತರಿಸಿಕೊಳ್ಳುತ್ತಿದ್ದ ಡಿಜೆ ಹಾಗೂ ಆತನ ಸಹಚರರು, ಬಳಿಕ ನಗರದ ಪಬ್‌ಗಳಲ್ಲಿ ಗ್ರಾಹಕರಿಗೆ ಮಾರುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಮಾದಕ ನಿಗ್ರಹ ದಳವು, ಚಿಕ್ಕಬಾಣಾವರದಲ್ಲಿರುವ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿ ಡ್ರಗ್ಸ್‌ ವಶಪಡಿಸಿಕೊಂಡಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದರು.

ತಿಂಗಳಲ್ಲಿ ಬಂತು ಕೋಟಿ ಮೌಲ್ಯದ ಡ್ರಗ್ಸ್‌ :

ನಗರದ ಪ್ರಮುಖ ಪಬ್‌ವೊಂದರ ಡಿಜೆ ಆಗಿರುವ ಕೇರಳ ಮೂಲದ ವ್ಯಕ್ತಿಗೆ ಅಂತಾರಾಷ್ಟ್ರೀಯ ಮಟ್ಟದ ಮಾದಕ ವಸ್ತು ಜಾಲದ ಸಂಪರ್ಕವಿದೆ. ಡಾರ್ಕ್ ವೆಬ್‌ಸೈಟ್‌ನಲ್ಲಿ ಬಿಟ್‌ ಕಾಯಿನ್‌ ಬಳಸಿ ಡ್ರಗ್ಸ್‌ ಖರೀದಿಸುತ್ತಿದ್ದ ಆತ, ಅದನ್ನು ಬೆಂಗಳೂರು ಮಾತ್ರವಲ್ಲದೆ ಗೋವಾ ಹಾಗೂ ಮುಂಬೈಗೆ ಸಹ ಪೂರೈಕೆ ಮಾಡುತ್ತಿದ್ದ. ವಿದೇಶದಿಂದ ಅಂಚೆ ಮುಖಾಂತರ ಡಿಜೆ ನೇತೃತ್ವದ ಕೇರಳದ ಗ್ಯಾಂಗ್‌ಗೆ ಡ್ರಗ್ಸ್‌ ಬರುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಲಾಕ್‌ಡೌನ್‌ ವೇಳೆ ಪ್ರಯಾಣಿಕರ ವಿಮಾನಗಳಿಗೆ ನಿರ್ಬಂಧವಿತ್ತೇ ವಿನಃ ಕಾರ್ಗೋ ಪೂರೈಕೆಗೆ ಅಡ್ಡಿಯಿರಲಿಲ್ಲ. ಈ ವೇಳೆ ಅವಧಿಯಲ್ಲೇ ನೆದರ್‌ಲ್ಯಾಂಡ್‌ನಿಂದ ಆರೋಪಿಗಳಿಗೆ 2 ಸಾವಿರ ಎಲ್‌ಎಸ್‌ಡಿ ಸೇರಿದಂತೆ .1.25 ಕೋಟಿ ಡ್ರಗ್ಸ್‌ ಖರೀದಿಸಿದ್ದರು. ಅದನ್ನು ಚಿಕ್ಕಬಾಣವಾರದ ಮನೆಯಲ್ಲಿ ದಾಸ್ತಾನು ಮಾಡಿದ್ದ ಅವರು, ನಗರದ ಗ್ರಾಹಕರಿಗೆ ಮಾರಾಟ ಮಾಡಲು ಸಜ್ಜಾಗಿದ್ದರು. ಆ ವೇಳೆಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಯಿತು. ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದ ಎಲ್‌ಎಸ್‌ಡಿ ಪತ್ತೆಯಾಗಿದೆ.

ಸೈಟ್‌ ಕೊಡಿಸುತ್ತೇನೆ ಎಂದು 50 ಕೋಟಿ ಪೀಕಿದ್ದ ಮಹಿಳೆ: ಟ್ಯಾಂಕ್‌ಗೆ ಹಾರಿ ಗೃಹಿಣಿ ಆತ್ಮಹತ್ಯೆ?

ವಿದೇಶದಿಂದ ಕಡಿಮೆ ಬೆಲೆಗೆ ಡ್ರಗ್ಸ್‌ ಖರೀದಿಸಿದ್ದ ಆರೋಪಿಗಳು, ನಂತರ ಗ್ರಾಹಕರಿಗೆ ಚಿಕ್ಕ ಚಿಕ್ಕ ಪೊಟ್ಟಣ ಮಾಡಿ ಮಾರುತ್ತಿದ್ದರು. ಅಲ್ಲದೆ ಎಲ್‌ಎಸ್‌ಡಿ ಮಾತ್ರೆಗಳಿಗೆ ತಲಾ .5ದಿಂದ 6 ಸಾವಿರ ವರೆಗೆ ಬೆಲೆ ನಿಗದಿ ಮಾಡಿದ್ದರು. ತಲೆಮರೆಸಿಕೊಂಡಿರುವ ಡಿಜೆ, ಪೋನ್‌ ಮುಖಾಂತರ ಗಿರಾಕಿಗಳನ್ನು ಸಂಪರ್ಕ ಮಾಡುತ್ತಿದ್ದ. ಪೋನ್‌ ಪೇ, ಗೂಗಲ್‌ ಪೇ ಹೀಗೆ ಡಿಜಿಟಲ್‌ ಮಾರ್ಗದಲ್ಲಿ ಮುಂಗಡ ಹಣ ಪಡೆದು ನಂತರ ತನ್ನ ಸಹಚರರ ಮೂಲಕ ಡ್ರಗ್‌ ಪೂರೈಸುತ್ತಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಸಿಸಿಬಿ ತಂಡಕ್ಕೆ ನಗದು ಬಹುಮಾನ:

ಈ ಮಾದಕ ವಸ್ತು ಜಾಲವನ್ನು ಭೇದಿಸಿದ ಎಸಿಪಿ ಗೌತಮ್‌, ಇನ್ಸ್‌ಪೆಕ್ಟರ್‌ ಮಲ್ಲೇಶ್‌ ಬೋಲೇತಿನ್‌ ತಂಡಕ್ಕೆ ನಗದು ಬಹುಮಾನ ನೀಡಿ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಅಭಿನಂದಿಸಿದರು.

ಬಣ್ಣ ಬಣ್ಣದ ಕಾಗದ!

ಬಣ್ಣ ಬಣ್ಣದ ಪೇಪರ್‌ಗಳನ್ನು ಅತಿ ಸಣ್ಣದಾಗಿ ಕತ್ತರಿಸಿ ಅದರೊಳಗೆ ಎಲ್‌ಎಸ್‌ಡಿ ತುಂಬಿ ಆರೋಪಿಗಳು ಮಾರುತ್ತಿದ್ದರು. ಮೇಲ್ನೋಟಕ್ಕೆ ಸಣ್ಣದೊಂದು ಪೇಪರ್‌ ತುಂಡಿನಂತೆ ಭಾಸವಾಗುತ್ತಿತ್ತು. ಹೀಗಾಗಿ ಎಲ್‌ಎಸ್‌ಡಿ ಹೊರನೋಟಕ್ಕೆ ಗೊತ್ತಾಗುತ್ತಿರಲಿಲ್ಲ. ಇದೇ ಮೊದಲ ಬಾರಿಗೆ ಅಧಿಕ ಮೊತ್ತದ ಎಲ್‌ಎಸ್‌ಡಿ ಡ್ರಗ್ಸ್‌ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಂದಿಬೆಟ್ಟರೇವ್‌ ಪಾರ್ಟಿಯಲ್ಲಿ ಸ್ನೇಹ

ಎಂಟು ತಿಂಗಳ ಹಿಂದೆ ಚಿಕ್ಕಬಳ್ಳಾಪುರದ ನಂದಿಬೆಟ್ಟದ ಸಮೀಪ ರೇವ್‌ ಪಾರ್ಟಿಯಲ್ಲಿ ಡಿಜೆ, ಬಂಧಿತ ಆರೋಪಿಗಳಿಗೆ ಪರಿಚಿತನಾಗಿದ್ದ. ಬಳಿಕ ಹಣದಾಸೆ ತೋರಿಸಿ ಅವರನ್ನು ಡ್ರಗ್ಸ್‌ ಜಾಲದಲ್ಲಿ ಬಳಸಿಕೊಂಡಿದ್ದ.

ಈ ಆರೋಪಿಗಳ ಪೈಕಿ ಮೊಮ್ಮಹದ್‌ ಹಾಗೂ ಅಜ್ಮಲ್‌, ನಗರದ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಎಂಬಿಎ ಓದುತ್ತಿದ್ದರು. ಇನ್ನುಳಿದ ಇಬ್ಬರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ನಾಲ್ವರು ಡಿಜೆ ಮೂಲಕವೇ ಪರಸ್ಪರ ಸ್ನೇಹಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.