ಕಡಿಮೆ ಬೆಲೆಗೆ ಸೈಟ್ ಕೊಡಿಸುತ್ತೇನೆ ಎಂದು ಲಕ್ಷಾಂತರ ರು. ವಂಚನೆ| ವಿಧಾನಸೌಧದಲ್ಲಿ ಕೆಲಸ ಮಾಡುವೆ ಸಚಿವರ ಸ್ನೇಹವಿದೆ|ವಾಟರ್ ಟ್ಯಾಂಕ್‌ಗೆ ಬಿದ್ದ ಆತ್ಮಹತ್ಯೆ ಮಾಡಿಕೊಂಡಿದ್ದ ಗೌರಿಯಿಂದ ಹಲವರಿಗೆ ವಂಚನೆ| ಕುಟುಂಬದ ಸದಸ್ಯರಿಂದ ಸತ್ಯ ಮುಚ್ಚಿಟ್ಟು ವ್ಯವಹಾರ|ಪೊಲೀಸ್ ತನಿಖೆ ವೇಳೆ ಬೆಳಕಿಗೆ|
ಬೆಂಗಳೂರು(ಜು.30): ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಗೃಹಿಣಿ ಗೌರಿ, ತಾನು ವಿಧಾನಸೌಧದಲ್ಲಿ ಅಧಿಕಾರಿ ಎಂದು ಹೇಳಿಕೊಂಡು ಜನರಿಗೆ ಕಡಿಮೆ ಬೆಲೆಗೆ ನಿವೇಶನ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ಹಣ ಪಡೆದಿದ್ದರು ಎಂಬ ಸಂಗತಿ ಯಲಹಂಕ ಉಪನಗರ ಠಾಣೆ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ವಿಧಾನಸೌಧದಲ್ಲಿ ಗೌರಿ ಕೆಲಸ ಮಾಡುತ್ತಿದ್ದ ಬಗ್ಗೆ ಸ್ವತಃ ಆಕೆಯ ಕುಟುಂಬ ಸದಸ್ಯರಿಗೆ ಗೊತ್ತಿರಲಿಲ್ಲ. ಮೃತಳ ಪತಿ ಸಹಕಾರಿ ಬ್ಯಾಂಕ್‌ವೊಂದರಲ್ಲಿ ಕ್ಲರ್ಕ್ ಆಗಿದ್ದಾರೆ. ತನ್ನ ಹಣಕಾಸಿನ ವ್ಯವಹಾರದ ಬಗ್ಗೆ ಕುಟುಂಬ ಸದಸ್ಯರಿಂದಲೂ ಆಕೆ ಗೌಪ್ಯವಾಗಿಟ್ಟಿದ್ದಳು ಎಂದು ಪೊಲೀಸ್ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಬೆಂಗಳೂರು; ಅಪಾರ್ಟ್‌ಮೆಂಟ್ ಟ್ಯಾಂಕ್‌ಗೆ ಬಿದ್ದು ಸುಸೈಡ್, 3 ದಿನದಿಂದ ಇದೇ ನೀರು ಸೇವಿಸಿದ್ದ ನಿವಾಸಿಗಳು!
ಆತ್ಮಹತ್ಯೆಗೂ ಮುನ್ನ ಗೌರಿ ಬರೆದಿಟ್ಟಿರುವ ಡೆತ್‌ನೋಟ್‌ನಲ್ಲಿ ಹಣಕಾಸು ವ್ಯವಹಾರ ಪ್ರಸ್ತಾಪಿಸಿದ್ದರು. ಭೂ ವ್ಯವಹಾರ ಸಂಬಂಧ ರಿಯಲ್ ಎಸ್ಟೇಟ್ ಏಜೆಂಟ್‌ಗಳಾದ ಬೈರವ ಮತ್ತು ಗೋಪಿ ಅವರಿಗೆ ಹಣ ಕೊಟ್ಟಿದ್ದೇನೆಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಆ ಇಬ್ಬರು ವ್ಯಕ್ತಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾನು ವಿಧಾನಸೌಧದಲ್ಲಿ ಕೆಲಸ ಮಾಡುತ್ತೇನೆ. ನನಗೆ ಸರ್ಕಾರದ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜತೆ ಸ್ನೇಹವಿದೆ ಎಂದು ಪರಿಚಯಸ್ಥರಲ್ಲಿ ಗೌರಿ ಹೇಳಿಕೊಂಡಿದ್ದಳು. ಅಲ್ಲದೆ, ಸರ್ಕಾರದ ಮಟ್ಟದಲ್ಲಿನ ತನ್ನ ಸಂಪರ್ಕ ಬಳಸಿಕೊಂಡು ಕಡಿಮೆ ಬೆಲೆಗೆ ನಿವೇಶನ ಕೊಡಿಸುವುದಾಗಿ ಜನರಿಗೆ ಆಕೆ ನಂಬಿಸಿದ್ದಳು. ಈ ಮಾತಿನಿಂದ ವಿಶ್ವಾಸಗೊಂಡು ಹಲವು ಮಂದಿ ದುಡ್ಡು ಕೊಟ್ಟಿದ್ದಾರೆ. ಆದರೆ ತನ್ನ ಆರ್ಥಿಕ ಸ್ಥಿತಿಗತಿಗೂ ಮೀರಿ ಗೌರಿ ಹಣಕಾಸು ವ್ಯವಹಾರ ನಡೆಸಿದ್ದು ಸಂಕಷ್ಟಕ್ಕೆ ಕಾರಣವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಗೌರಿ ಆತ್ಮಹತ್ಯೆ ಹಿಂದಿನ ಕಾರಣ ಪತ್ತೆಗೆ ಎಲ್ಲ ಆಯಾಮದಿಂದಲೂ ತನಿಖೆ ನಡೆದಿದೆ. ತನಿಖೆಗೆ ಹೆದರಿ ರಿಯಲ್ ಎಸ್ಟೇಟ್ ಏಜೆಂಟ್‌ಗಳು ವಿಚಾರಣೆಗೆ ಹಿಂದೇಟು ಹಾಕಿದ್ದಾರೆ. ನೋಟಿಸ್‌ಗೆ ಪ್ರತಿಕ್ರಿಯಿಸದೆ ಹೋದರೆ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
