ಬೆಂಗಳೂರು (ಸೆ.10):  ಮೂರು ತಿಂಗಳ ಹಿಂದೆಯೇ ತಮ್ಮ ಡ್ರಗ್ಸ್‌ ಜಾಲದ ಬಗ್ಗೆ ಪೊಲೀಸರಿಗೆ ಮಾಹಿತಿ ಇದೆ ಎಂಬ ಸುಳಿವು ಸಿಕ್ಕರೂ ನಟಿಯರಾದ ರಾಗಿಣಿ ಹಾಗೂ ಸಂಜನಾ ಗ್ಯಾಂಗ್‌ ಎಚ್ಚೆತ್ತುಕೊಂಡಿರಲಿಲ್ಲ ಎಂಬ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.

ಜೂನ್‌ 23ರಂದು ರವಿಶಂಕರ್‌ ಮತ್ತು ಪೇಜ್‌ ತ್ರೀ ಪಾರ್ಟಿಗಳ ಆಯೋಜಕ ಪ್ರಶಾಂತ್‌ ರಾಂಕಾ ನಡುವಿನ ವಾಟ್ಸ್‌ ಆಪ್‌ ಚಾಟಿಂಗ್‌ನಲ್ಲಿ ಸಿಸಿಬಿ ಮುಖ್ಯಸ್ಥ ಸಂದೀಪ್‌ ಪಾಟೀಲ್‌ ಹೆಸರು ಪ್ರಸ್ತಾಪವಾಗಿದೆ. ಹೀಗಾಗಿ ಮೊದಲೇ ಸುಳಿವು ಸಿಕ್ಕರೂ ಎಚ್ಚೆತ್ತುಕೊಳ್ಳದೆ ರಾಗಿಣಿ ಗ್ಯಾಂಗ್‌ ಸಿಸಿಬಿ ಖೆಡ್ಡಾಕ್ಕೆ ಬಿದ್ದಿರುವುದು ಗೊತ್ತಾಗಿದೆ.

ರವಿಶಂಕರ್‌ಗೆ ಪೆಡ್ಲರ್‌ಗಳಿಗೆ ಕರೆ ಮಾಡಬೇಡ ಎಂದು ಪ್ರಶಾಂತ್‌ ರಾಂಕಾ ಎಚ್ಚರಿಸಿದ್ದಾನೆ. ಆಗ ರವಿಶಂಕರ್‌, ತುಂಬ ಕಾಲ ಆಯಿತು ಕರೆ ಮಾಡಿ, ಏನಾಯಿತು ಎಂದು ಪ್ರಶ್ನಿಸಿದ್ದ. ಆಗ ಪ್ರಶಾಂತ್‌, ಸಂದೀಪ್‌ ಪಾಟೀಲ್‌ ಸರ್‌ ನಮ್ಮ ಬೆನ್ನುಹತ್ತಿರುವ ಮಾಹಿತಿ ಸಿಕ್ಕಿದೆ ಎಂದಿದ್ದಾನೆ.

ಕೆಲ ದಿನಗಳ ಹಿಂದೆ ಪಬ್‌, ಪಂಚಾತಾರಾ ಹೋಟೆಲ್‌, ಫಾಮ್‌ರ್‍ ಹೌಸ್‌ಗಳಲ್ಲಿ ರೇವ್‌ ಪಾರ್ಟಿಗಳನ್ನು ಆಯೋಜಿಸಿ ಮಾದಕ ವಸ್ತು ಮಾರಾಟದ ಜಾಲವು, ಪಂಜಾಬ್‌, ಆಂಧ್ರಪ್ರದೇಶ, ಕೇರಳ ಮತ್ತು ವಿದೇಶದಿಂದ ಡ್ರಗ್ಸ್‌ ಪೂರೈಸುತ್ತಿದೆ ಎಂಬ ಸುಳಿವು ಸಿಸಿಬಿಗೆ ಲಭ್ಯವಾಗಿತ್ತು. ಈ ಮಾಹಿತಿ ಬೆನ್ನುಹತ್ತಿದ್ದ ಸಿಸಿಬಿ, ಜಯನಗರ ಆರ್‌ಟಿಒ ಕಚೇರಿಯ ಎಸ್‌ಡಿಎ ಹಾಗೂ ನಟಿ ರಾಗಿಣಿ ಸ್ನೇಹಿತ ರವಿಶಂಕರ್‌ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಡ್ರಗ್ಸ್‌ ಜಾಲವು ಬಯಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರೋಪಿಗಳ ಮೊಬೈಲ್‌ ಹಾಗೂ ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆದು ಸೈಬರ್‌ ಲ್ಯಾಬ್‌ಗೆ ಸಿಸಿಬಿ ಅಧಿಕಾರಿಗಳು ಕಳುಹಿಸಿದ್ದಾರೆ. ಸಿಸಿಬಿ ಕಾರ್ಯಾಚರಣೆ ಶುರುವಾದ ಬಳಿಕ ಕೆಲ ಆರೋಪಿಗಳು ಮೊಬೈಲ್‌ನಲ್ಲಿ ವಾಟ್ಸ್‌ ಆಪ್‌ ಸಂದೇಶಗಳನ್ನು ಅಳಿಸಿಹಾಕಿದ್ದರು. ಅವುಗಳನ್ನು ರಿಟ್ರೀವ್‌ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ರಾಗಿಣಿ ಅಡ್ಡಹೆಸರು ರಾಗ್ಸ್‌!

ನಟಿ ರಾಗಿಣಿಯನ್ನು ರಾಗ್ಸ್‌ ಎಂಬ ಅಡ್ಡ ಹೆಸರಿನಿಂದ ಗ್ಯಾಂಗ್‌ ಸದಸ್ಯರು ಕರೆಯುತ್ತಿದ್ದರು. ಆಕೆಯ ಮನೆಯಲ್ಲಿ 3 ಮೊಬೈಲ್‌ಗಳು, ಎರಡು ಪೆನ್‌ಡ್ರೈವ್‌, ಆಗ್ರ್ಯಾನಿಕ್‌ ಸ್ಮೋಕ್‌ ಮೆಂಥಲ… ಹಾಗೂ 6 ಸಿಗರೆಟ್‌ಗಳು ಪತ್ತೆಯಾಗಿವೆ ಎಂದು ಸಿಸಿಬಿ ಹೇಳಿದೆ.