*  ಜಾಮೀನು ಷರತ್ತು ಪದೇ ಪದೇ ಉಲ್ಲಂಘಿಸಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಆರೋಪಿ*  ಆರೋಪಿಯನ್ನು ಪಿಐಟಿ-ಎನ್‌ಡಿಪಿಎಸ್‌ ಕಾಯ್ದೆಯಡಿ ಬಂಧಿಸಲು ಆದೇಶಿಸಿದ್ದ ಪೊಲೀಸ್‌ ಆಯುಕ್ತ*  ಆರೋಪಿಯನ್ನು ಒಂದು ವರ್ಷದ ಅವಧಿಗೆ ಬಂಧನದಲ್ಲಿರಿಸಲಾಗಿದೆ

ಬೆಂಗಳೂರು(ಜು.03): ಜಾಮೀನು ಪಡೆದು ಜೈಲಿನಿಂದ ಹೊರಬಂದು ಮತ್ತೆ ಮಾದಕ ವಸ್ತು ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ಕುಖ್ಯಾತ ಡ್ರಗ್ಸ್‌ ಪೆಡ್ಲರ್‌ನನ್ನು ಪಿಐಟಿ-ಎನ್‌ಡಿಪಿಎಸ್‌ ಕಾಯ್ದೆಯಡಿ ಬಂಧಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಾಗಡಿ ರಸ್ತೆ ನಿವಾಸಿ ನಾರಾಯಣ(42) ಬಂಧಿತ. ಆರೋಪಿಯು ನಂದಿನಿ ಲೇಔಟ್‌, ಶ್ರೀರಾಮಪುರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಅಕ್ರಮವಾಗಿ ಮಾದಕವಸ್ತು ಸಾಗಾಟ ಹಾಗೂ ಮಾರಾಟದಲ್ಲಿ ತೊಡಗಿಸಿಕೊಂಡಿದ್ದ. ಈತ 2017ರಿಂದಲೂ ಮಾದಕವಸ್ತು ಮಾರಾಟ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಈತನ ವಿರುದ್ಧ ಈ ಹಿಂದೆ ಶ್ರೀರಾಮಪುರ, ನಂದಿನಿ ಲೇಔಟ್‌ ಪೊಲೀಸ್‌ ಠಾಣೆಗಳಲ್ಲಿ ಆರು ಎನ್‌ಡಿಪಿಎಸ್‌ ಪ್ರಕರಣಗಳು ಹಾಗೂ ಒಂದು ಕೊಲೆ ಯತ್ನ ಪ್ರಕರಣ ದಾಖಲಾಗಿವೆ.

Bengaluru: 28 ಟನ್‌ ತೂಕದ 60 ಕೋಟಿ ಡ್ರಗ್ಸ್‌ ನಾಶ ಮಾಡಿದ ಪೊಲೀಸರು!

ಕಳೆದ ಜನವರಿಯಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿಯು ಬಳಿಕವೂ ಶ್ರೀರಾಮಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮಾದಕವಸ್ತು ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದ. ಈ ವೇಳೆ ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿದ್ದರು.

ಆರೋಪಿಯು ಜಾಮೀನಿನ ಮೇಲೆ ಹೊರಬಂದು ಜಾಮೀನು ಷರತ್ತುಗಳನ್ನು ಪದೇ ಪದೇ ಉಲ್ಲಂಘಿಸಿ ಮಾದಕವಸ್ತು ಮಾರಾಟ ದಂಧೆ ಮುಂದುವರಿಸಿದ್ದರಿಂದ ಶ್ರೀರಾಮಪುರ ಠಾಣೆ ಪೊಲೀಸರ ವರದಿ ಮೇರೆಗೆ ನಗರ ಪೊಲೀಸ್‌ ಆಯುಕ್ತರು ಆರೋಪಿಯನ್ನು ಪಿಐಟಿ-ಎನ್‌ಡಿಪಿಎಸ್‌ ಕಾಯ್ದೆಯಡಿ ಬಂಧಿಸಲು ಆದೇಶಿಸಿದ್ದರು. ಅದರಂತೆ ಆರೋಪಿಯನ್ನು ಒಂದು ವರ್ಷದ ಅವಧಿಗೆ ಬಂಧನದಲ್ಲಿರಿಸಲಾಗಿದೆ.