ಸಿದ್ದರಾಮೋತ್ಸವಕ್ಕೆ ತೆರಳುತ್ತಿದ್ದ ವಾಹನ ಅಪಘಾತ, ಓರ್ವ ಸಾವು, ಸಿದ್ದರಾಮಯ್ಯ ಸಂತಾಪ

ದಾವಣಗೆರೆ ಸಿದ್ದರಾಮೋತ್ಸವಕ್ಕೆ ತೆರಳುತ್ತಿದ್ದ ಕ್ರೂಸರ್ ಅಪಘಾತಕ್ಕೀಡಾಗಿದ್ದು ಓರ್ವ ಸಾವನ್ನಪ್ಪಿದ್ದಾನೆ. ಇದು ಸಿದ್ದರಾಮಯ್ಯನವರ ಗಮನಕ್ಕೆ ಬಂದಿದ್ದು. ಮೃತರಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿದ್ದಾರೆ.

Driver Dies In Road Accident Who Going Davanagere at Bagalkot

ಬಾಗಲಕೋಟೆ, (ಆಗಸ್ಟ್, 02):  ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ  ತೆರಳುತ್ತಿದ್ದ ಕ್ರೂಸರ್ ಅಪಘಾತಕ್ಕೀಡಾಗಿದ್ದು, ಓರ್ವ ಸಾವನ್ನಪ್ಪಿದ್ದಾನೆ. ಇನ್ನು ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಈ ಘಟನೆ ಬಾಗಲಕೋಟೆ ಜಿಲ್ಲೆಯ ಹೂಲಗೇರಿ ಗ್ರಾಮದ ಬಳಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಹಿರೇಆಲಗುಂಡಿ ಬಿ.ಕೆ. ಗ್ರಾಮದಿಂದ ದಾವಣಗೆರೆಗೆ ತೆರಳುತ್ತಿದ್ದ ಕ್ರೂಸರ್ ಹೂಲಗೇರಿ ಗ್ರಾಮದ ಬಳಿ ಎದುರಿಗೆ ಬಂದ ಹಾಲಿನ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಚಿಕ್ಕಾಲಗುಂಡಿ ಗ್ರಾಮದ ಕ್ರೂಸರ್ ಚಾಲಕ ಪ್ರಕಾಶ್ ಸಾವನ್ನಪ್ಪಿದ್ದು, ಗಾಯಗೊಂಡಿರುವ ಹಲವರನ್ನು ಆಸ್ಪತ್ರಗೆ ದಾಖಲಿಸಲಾಗಿದೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಕೆರೂರ ಪೋಲಿಸರು ಭೇಟಿ  ನೀಡಿ ಪರಿಶೀಲನೆ ಮಾಡಿದರು.

ಸಿದ್ದರಾಮೋತ್ಸವಕ್ಕೆ ಬಾದಾಮಿಯಿಂದ 25 ಸಾವಿರ ಜನ, 600 ವಾಹನಗಳು ಬುಕ್

ಇನ್ನು ಗಾಯಗೊಂಡ 12 ಜನ ಬಾಗಲಕೋಟೆ ಜಿಲ್ಲೆಯ ಆಲಗುಂಡಿ ಬಿಕೆ ಗ್ರಾಮದರಾಗಿದ್ದು, ಗಾಯಗೊಂಡವರ ಪೈಕಿ 9 ಜನ ಖಾಸಗಿ ಆಸ್ಪತ್ರೆ & 3 ಜನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳು ದಾಖಲಾದ ಆಸ್ಪತ್ರೆಗೆ ಬಾಗಲಕೋಟೆ  ಎಸ್.ಪಿ. ಜಯಪ್ರಕಾಶ್ ಭೇಟಿ ಆರೋಗ್ಯ ವಿಚಾರಿಸಿದರು.

ಸಿದ್ದರಾಮಯ್ಯ ಸಂತಾಪ
ಅಪಘಾತದ ವಿಷಯ ತಿಳಿದ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಮೃತರಿಗೆ ಸಂತಾಪ ಸೂಚಿಸಿದ್ದಾರೆ.  ನನ್ನ ಹುಟ್ಟುಹಬ್ಬದ ಸಮಾರಂಭಕ್ಕಾಗಿ ದಾವಣಗೆರೆಗೆ ಆಗಮಿಸುತ್ತಿದ್ದ ಮುದೋಳ ತಾಲೂಕಿನ ಪ್ರಕಾಶ್ ಬಡಿಗೇರ್ ಎಂಬವರು ರಸ್ತೆ ಅಪಘಾತದಲ್ಲಿ‌ ಮೃತಪಟ್ಟ ಸುದ್ದಿ ತಿಳಿದು ಆಘಾತವಾಯಿತು. ಮೃತ ಪ್ರಕಾಶ್ ಅವರ ಕುಟುಂಬದ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ.  ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಅಭಿಮಾನಿಗಳಿಗೆ ಸಿದ್ದು ಮನವಿ
ನನ್ನ ಹುಟ್ಟುಹಬ್ಬದ ಸಮಾರಂಭಕ್ಕಾಗಿ ದಾವಣಗೆರೆಗೆ ವಾಹನಗಳಲ್ಲಿ ಆಗಮಿಸುವವರು  ಅನಗತ್ಯ ಧಾವಂತ ತೋರದೆ ಎಚ್ಚರಿಕೆಯಿಂದ ವಾಹನ ಚಲಾಯಿಸಿಕೊಂಡು ಬರಬೇಕೆಂದು ಕೈಮುಗಿದು ಮನವಿ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮ ಜೀವ ನಮಗೆ‌ ಮಾತ್ರವಲ್ಲ . ನಿಮ್ಮನ್ನು ನಂಬಿರುವ ಕುಟುಂಬಕ್ಕೂ ಅಷ್ಟೇ ಅಮೂಲ್ಯ ಎಂಬ ಅರಿವಿರಲಿ ಎಂದು ಮನವಿ ಮಾಡಿದ್ದಾರೆ.

ಗೋವಿಂದ್ ಕಾರಜೋಳ ಸಂತಾಪ
ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವಾಹನ ಅಪಘಾತದಲ್ಲಿ ಸಾವನ್ನಪ್ಪಿದ ಚಾಲಕನಿಗೆ ಜಲಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ ಸಂತಾಪ ಸೂಚಿಸಿದ್ದಾರೆ.

ಈ ಬಗ್ಗೆ ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾರಜೋಳ, ಆತ ಮೃತಪಟ್ಟ ಸುದ್ದಿ ಕೇಳಿ ತೀವ್ರ ದುಃಖ, ನೋವಾಯಿತು. ಮೃತ ಪ್ರಕಾಶ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಇನ್ನು ಅವರ ಜೊತೆಯಲ್ಲಿ ವಾಹನದಲ್ಲಿದ್ದ ಮೂವರಿಗೆ ಗಂಭೀರ ಗಾಯವಾಗಿವೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
 

Latest Videos
Follow Us:
Download App:
  • android
  • ios