ಕಾಯ್ದೆ ಬಂದ್ರೂ ಉಡುಪಿಯಲ್ಲಿ ನಿಲ್ಲದ ಗೋಹತ್ಯೆ, 1 ತಿಂಗ್ಳಲ್ಲೇ 4 ಪ್ರಕರಣಗಳು ಉದಾಹರಣೆ!
ಕರ್ನಾಟಕ ಸರ್ಕಾರ ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ತಂದರೂ ಸಹ ಉಡುಪಿಯಲ್ಲಿ ಗೋಹತ್ಯೆ ನಿಲ್ಲುತ್ತಿಲ್ಲ. ಬದಲಿಗೆ ಇನ್ನಷ್ಟು ಹೆಚ್ಚಾಗುತ್ತಿದೆ. 1 ತಿಂಗ್ಳಲ್ಲೇ 4 ಪ್ರಕರಣಗಳು ಇದಕ್ಕೆ ಉದಾಹರಣೆ.
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ
ಉಡುಪಿ, (ಜೂನ್.26): ಗೋ ಹತ್ಯಾ ನಿಷೇಧ ಕಾಯ್ದೆ ಜಾರಿಗೆ ಬಂದರೂ ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಗೋಕಳ್ಳತನ ಮತ್ತು ಅಕ್ರಮ ಗೋಸಾಗಾಟಕ್ಕೆ ಕಡಿವಾಣ ಬಿದ್ದಿಲ್ಲ. ಹೊಸ ಕಾಯ್ದೆ ಕಠಿಣವಾಗಿ ಜಾರಿಯಾಗಬಹುದು ಎನ್ನುವ ಊಹೆ ಸುಳ್ಳಾಗಿದೆ. ಪ್ರತಿದಿನ ಉಡುಪಿ ಜಿಲ್ಲೆಯಲ್ಲಿ ಅಕ್ರಮ ಗೋಮಾಂಸ ಸಾಗಾಟ, ಹಾಗೂ ಗೋಕಳ್ಳತನ ಎಗ್ಗಿಲ್ಲದೆ ನಡೆಯುತ್ತಿದೆ. ಪೊಲೀಸರ ನಿಷ್ಕ್ರಿಯತೆ ಹಿಂದೂ ಸಂಘಟನೆಗಳನ್ನು ಕೆರಳಿಸಿದೆ.
ಉಡುಪಿ ಜಿಲ್ಲೆಯಲ್ಲಿ ಮತ್ತೆ ಗೋಕಳ್ಳರ ಅಟ್ಟಹಾಸ ಮಿತಿಮೀರಿದೆ. ಪೊಲೀಸರ ಕಣ್ಣು ತಪ್ಪಿಸಲು ಗೋಕಳ್ಳರು ನಾನು ತಂತ್ರ ಹೆಣೆಯುತ್ತಿದ್ದಾರೆ. ಇತ್ತೀಚಿನ ಕೆಲವೊಂದು ಪ್ರಕರಣಗಳನ್ನು ನೋಡೋಣ..
ಉಡುಪಿ: ಖಾಸಗಿ ಕಂಪನಿಗೆ ಕೊಟ್ಟ ಭೂಮಿ ಮರಳಿ ಕೊಡಿ: ಮಲ್ಪೆ ಮೀನುಗಾರರ ಆಗ್ರಹ
ಪ್ರಕರಣ-1
ಜೂ.9 ರಂದು ಟೂರಿಸ್ಟ್ ವಾಹನದಲ್ಲಿ ಪ್ರವಾಸ ಹೋಗುವ ನೆಪದಲ್ಲಿ ಮಹಿಳೆಯರನ್ನು ಕುಳ್ಳಿರಿಸಿಕೊಂಡು 400 ಕೆಜಿ ಮಾಂಸವನ್ನು ಭಟ್ಕಳಕ್ಕೆ ಕೊಂಡೊಯ್ಯುತ್ತಿದ್ದ ಗೋಕಳ್ಳರು ಇತ್ತೀಚೆಗೆ ಬೈಂದೂರು ಪೊಲೀಸರ ಬಲೆಗೆ ಬಿದ್ದಿದ್ದರು
ಪ್ರಕರಣ 2
ಜೂನ್ 11 ರಂದು ಕಾಪು ತಾಲೂಕಿನ ಶಿರ್ವದಲ್ಲಿ ಬರೋಬ್ಬರಿ 400 ಕೆಜಿ ಗೋಮಾಂಸ ಪತ್ತೆಯಾಗಿತ್ತು. ಕದ್ದು ತಂದ ಧನವನ್ನು ಮಾಂಸ ಮಾಡಿ ಮಾರಾಟ ಮಾಡಲಾಗುತ್ತಿತ್ತು, ಖಚಿತ ಮಾಹಿತಿಯ ಮೇರೆಗೆ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದರು.
ಪ್ರಕರಣ -3
ಜೂನ್3ರಂದು ಪಡುಬಿದ್ರಿ ಠಾಣಾ ವ್ಯಾಪ್ತಿಯ ಉಚ್ಚಿಲ ಭಾಸ್ಕರ ನಗರದಲ್ಲಿ ಪೊಲೀಸರು ದಾಳಿ ನಡೆಸಿದಾಗ 425 ಕೆಜಿ ಮಾಂಸ ಪತ್ತೆಯಾಗಿತ್ತು. ಪ್ರಕರಣದಲ್ಲಿ ಪಂಚಾಯತ್ ಸದಸ್ಯ ಸಹಿತ ನಾಲ್ವರು ಭಾಗಿಯಾಗಿದ್ರು.
ಪ್ರಕರಣ 4
ಜೂನ್ 23 ಹೆಬ್ರಿ ಠಾಣಾ ವ್ಯಾಪ್ತಿಯ ಕಬ್ಬಿನಾಲೆಯಲ್ಲಿ ತಲವಾರು ತೋರಿಸಿ ಹಟ್ಟಿಯಿಂದ ಗೋಕಳ್ಳತನ ಮಾಡಲಾಗಿದೆ.
ಕೇವಲ ಜೂನ್ ತಿಂಗಳಲ್ಲಿ ನಡೆದ ಈ ನಾಲ್ಕು ಪ್ರಕರಣಗಳು ಉದಾಹರಣೆ ಸಾಕು, ಗೋಹತ್ಯಾ ನಿಷೇಧ ಕಾಯ್ದೆ ಉಡುಪಿ ಜಿಲ್ಲೆಯಲ್ಲಿ ಎಷ್ಟು ಪರಿಣಾಮಕಾರಿಯಾಗಿ ಜಾರಿಯಾಗಿದೆ ಅನ್ನೋದಕ್ಕೆ ಇದುವೇ ಸಾಕ್ಷಿ ಹೇಳುತ್ತಿದೆ. ಗೋ ಕಳ್ಳರಿಗೆ ಭಯಹುಟ್ಟಿಸುವ ಯಾವುದೇ ಅಂಶಗಳು ಈ ಕಾಯ್ದೆಯಲ್ಲಿ ಇಲ್ಲ ಅನ್ನೋದು ಈ ಮೂಲಕ ಸಾಬೀತಾಗಿದೆ. ಕಾರ್ಕಳ ತಾಲೂಕಿನ ಕರಿಯಕಲ್ಲು ಎಂಬಲ್ಲಿ ಇತ್ತೀಚಿನ ಒಂದೆರಡು ವಾರಗಳಲ್ಲಿ ಸತತ ಐದು ಗೋಕಳ್ಳತನ ಪ್ರಕರಣಗಳು ನಡೆದಿರುವುದನ್ನು ಹಿಂದೂ ಸಂಘಟನೆಗಳು ಬೆಳಕಿಗೆ ತಂದಿದೆ. ಕೆಲ ಪ್ರಕರಣಗಳಲ್ಲಿ ಬಂಧಿತ ಆರೋಪಿಗಳಿಗೆ ಕೇವಲ ಅರ್ಧಗಂಟೆಯಲ್ಲಿ ಜಾಮೀನು ಸಿಗುವ ಮೂಲಕ, ಕಾಯ್ದೆಯ ಅಪಹಾಸ್ಯ ಮಾಡಿದಂತಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ಆರೋಪಿಸಿದೆ.
ದಿನ ಬೆಳಗಾದರೆ ಗೋಕಳ್ಳತನ ದ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಆದರೆ ಪೊಲೀಸ್ ಇಲಾಖೆಯ ದಾಖಲೆಗಳನ್ನು ಪರಿಶೀಲಿಸಿದರೆ, ಅಂತಹ ಗಂಭೀರತೆ ಕಂಡು ಬರುವುದಿಲ್ಲ. ಇಲಾಖೆಯ ಮಾಹಿತಿ ಪ್ರಕಾರ, 2021ರಲ್ಲಿ ಕೇವಲ 10 ಮತ್ತು 2022 ರಲ್ಲಿ ಕೇವಲ ಎಂಟು ಗೋಕಳ್ಳತನ ಪ್ರಕರಣ ದಾಖಲಾಗಿದೆ. ಇನ್ನು ಅಕ್ರಮ ಗೋ ಸಾಗಾಟ ಪ್ರಕರಣಗಳ ಸಂಖ್ಯೆಯು ಆಶ್ಚರ್ಯ ಹುಟ್ಟಿಸುತ್ತೆ. 2021ರಲ್ಲಿ 20 ಪ್ರಕರಣವಷ್ಟೇ ದಾಖಲಾಗಿದ್ದರೆ, 2022 ರಲ್ಲಿ ಕೇವಲ ಏಳು ಪ್ರಕರಣ ದಾಖಲಾಗಿದೆಯಂತೆ. ಕಾಯ್ದೆಯನ್ನು ಪರಿಣಾಮಕಾರಿಯಾಗಿ ಪೊಲೀಸರು ಅನುಷ್ಠಾನ ಮಾಡದೆ ಇರುವ ಬಗ್ಗೆ ಹಿಂದೂ ಸಂಘಟನೆಗಳು ಆಕ್ಷೇಪಿಸುವೆ. ಗೋಕಳ್ಳತನ ಪ್ರಕರಣ ಗಳನ್ನು ಗೋ ಕಳ್ಳತನ ಎಂದು ದಾಖಲಿಸಿಕೊಳ್ಳದೆ ನಾಪತ್ತೆ ಪ್ರಕರಣ ದಾಖಲಿಸಿಕೊಳ್ಳುತ್ತಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ.
ಕರಾವಳಿ ಭಾಗದಲ್ಲಿ ನಡೆದ ಯಾವುದೇ ಕೋಮುಗಲಭೆಗಳ ಮೂಲ ಹುಡುಕಿದರೆ ಅಲ್ಲಿ ಗೋಸಾಗಾಟ , ಗೋಮಾಂಸ ಮಾರಾಟವೇ ಮೂಲಕಾರಣವಾಗಿರುತ್ತೆ. ಗೋಕಳ್ಳರ ಸ್ಪಷ್ಟ ಮಾಹಿತಿ ಇರುವ ಪೊಲೀಸ್ ಇಲಾಖೆ ಕಾಯ್ದೆಯನ್ನು ಕಠಿಣವಾಗಿ ಜಾರಿಮಾಡದೆ ಹೋದರೆ, ಕರಾವಳಿಯಲ್ಲಿ ಮತ್ತೆ ಸಂಘರ್ಷ ಉಂಟಾಗಬಹುದು ಎಂದು ಹಿಂದೂ ಸಂಘಟನೆಗಳು ಎಚ್ಚರಿಸಿವೆ.