ಇಂದೋರ್(ನ.  22)  ಶ್ವಾನಗಳ ಮೇಲಿನ ಮಾನವನ ಪ್ರೀತಿ,  ಬಾಂಧವ್ಯದ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಇಲ್ಲೊಂದು ಶ್ವಾನದ ಪ್ರಕರಣ ಡಿಎನ್ ಎ ಪರೀಕ್ಷೆವರೆಗೆ ಹೋಗಿ ನಿಂತಿದೆ.

ಪತ್ರಕರ್ತ ಮತ್ತು ಅಖಿಲ್ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮುಖಂಡರ ನಡುವಿನ  ಶ್ವಾನ ಮಾಲೀಕತ್ವದ ವಿವಾದವನ್ನು ಬಗೆಹರಿಸಲು ಮಧ್ಯಪ್ರದೇಶದ ಹೋಶಂಗಾಬಾದ್ ಪೊಲೀಸರು  ಶ್ವಾನದ ಡಿಎನ್‌ಎ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ.

ಗೋಲ್ಡನ್ ಸಿಲಿಕಾನ್ ಕಾಲೊನಿಯ ಪತ್ರಕರ್ತ ಶಾದಾಬ್ ಖಾನ್  ಕಳೆದ ಆಗಸ್ಟ್ ನಲ್ಲಿ ಪೊಲೀಸ್ ದೂರು ದಾಖಲಿಸಿದ್ದರು, ಟೈಗರ್ ಎಂಬ ತನ್ನ ಮೂರು ವರ್ಷದ ಕಪ್ಪು ಲ್ಯಾಬ್ರಡಾರ್ ನಾಯಿ ನಾಪತ್ತೆಯಾಗಿದೆ. ನನ್ನ ಶ್ವಾನವನ್ನು ಮಲಖೇಡಿ ಪ್ರದೇಶದ ಎಬಿವಿಪಿ ಮುಖಂಡ ಕಾರ್ತಿಕ್ ಶಿವರೆ ಅವರ ಮನೆಗೆ  ನೋಡಿದ್ದೇನೆ.  ನನ್ನ ಮುದ್ದು ಶ್ವಾನವನ್ನು ವಾಪಸ್ ಪಡೆಯಲು ಹೋದರೆ ಸಾಧ್ಯವಾಗಲಿಲ್ಲ.

ನಾಲ್ವರ ಪ್ರಾಣ ಉಳಿಸಿದ ಗರ್ಭಿಣಿ ಶ್ವಾನ

ಇದು ನಿಮ್ಮ ನಾಯಿ ಅಲ್ಲ. ಇದರ ಹೆಸರು  ಹೆಸರು ಕಲ್ಲು ಎಂದು ಹೇಳಿ ನನ್ನನ್ನು ದಬಾಯಿಸಿ ಕಳುಹಿಸಲಾಯಿತು ಎಂದು ಪತ್ರಕರ್ತ ಆರೋಪಿಸಿದ್ದಾರೆ.

ನಾನು 2017 ರಲ್ಲಿ ನಾಯಿಯನ್ನು ಪಚ್‌ಮಾರ್ಹಿಯಿಂದ ಖರೀದಿಸಿ ತಂದಿದ್ದೆ  ಎಂದು ಖಾನ್ ಹೇಳಿಕೊಂಡರೆ, ಕೆಲವು ವಾರಗಳ ಹಿಂದೆ ಇಟಾರ್ಸಿ ಮೂಲದ ತಳಿಗಾರನಿಂದ ತಾನು ಅದನ್ನು ಪಡೆದುಕೊಂಡಿದ್ದೇನೆ ಎಂದು ಶಿವಹರೆ ಹೇಳಿದ್ದಾರೆ.  ಈ ಎಲ್ಲ ಪ್ರಕರಣ ನಡೆಯುತ್ತಿರುವಾಗ ಪೊಲೀಸರು ಶುಕ್ರವಾರ ನಾಯಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.  ನಾಯಿ ನಿಜವಾಗಿ ಯಾರಿಗೆ ಸೇರಿದ್ದು ಎಂಬುದನ್ನು ಪತ್ತೆಮಾಡಲು ಡಿಎನ್‌ಎ ಪರೀಕ್ಷೆ ಮೊರೆ ಹೋಗಿದ್ದಾರೆ.

ಮಧ್ಯಪ್ರವೇಶ ಮಾಡಿರುವ ಪೇಟಾ(ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್)  ಪೊಲೀಸರು ನಾಯಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಹೇಳಿದೆ. ಶ್ವಾನಕ್ಕೆ ಸರಿಯಾಗಿ ಆಹಾರ ನೀಡಲಾಗುತ್ತಿಲ್ಲ. ಈ ಕಾರಣದಿಂದ ತೀವ್ರ ಜ್ವರದಿಂದ ಬಳಲುವಂತಾಗಿದೆ. ನಾವು ಪೊಲೀಸರ ಮೇಲೆ ಎಫ್‌ಐಆರ್ ದಾಖಲಿಸುತ್ತೇವೆ ಎಂದಿದೆ.

ಡಿಎನ್‌ಎ ವರದಿಗಾಗಿ ಕಾಯುತ್ತಿದ್ದು ಅದು ಬಂದ ನಂತರ ನಿಜವಾದ ಮಾಲೀಕರಿಗೆ ಶ್ವಾನವನ್ನು ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 2014  ರಲ್ಲಿ ಹಸುವಿನ ಮಾಲೀಕತ್ವಕ್ಕೆ ಸಂಬಂಧಿಸಿ ಕೇರಳದಲ್ಲಿ ಡಿಎನ್‌ಎ ಪರೀಕ್ಷೆ ಮಾಡಲು ನ್ಯಾಯಾಲಯವೇ ಹೇಳಿತ್ತು.