ಮಾಸ್ಕೋ(ನ. 21): ಶ್ವಾನಗಳ ನಿಯತ್ತು, ಧೈರ್ಯ, ತ್ಯಾಗ ಮತ್ತು ಸಮಯಪ್ರಜ್ಞೆಗೆ ಸರಿಸಾಟಿ ಯಾವುದಿಲ್ಲ. ಈಗ ಅದಕ್ಕೆ ತಾಜಾ ನಿದರ್ಶನ ಎಂಬಂತೆ ರಷ್ಯಾದಲ್ಲಿ ಘಟನೆ  ನಡೆದಿದೆ. 

ಶ್ವಾನವೊಂದು ತನ್ನ ಜೀವವನ್ನು ಪಣಕ್ಕಿಟ್ಟು, ರಷ್ಯಾದ ಹಾಸ್ಪೈಸ್ ಆಸ್ಪತ್ರೆಯ ನಾಲ್ಕು ರೋಗಿಗಳನ್ನು ಬೆಂಕಿ ಅವಘಡದಿಂದ ರಕ್ಷಿಸಿದೆ.

ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಕೊಂಡಾಗ ಮಾಟಿಲ್ಡಾ ಎಂಬ ತುಂಬು ಗರ್ಭಿಣಿ ನಾಯಿ ತನ್ನ ಪ್ರಾಣವನ್ನೂ ಲೆಕ್ಕಿಸದೇ ಆಸ್ಪತ್ರೆಯೊಳಗೆ ನುಗ್ಗಿ ಅಲ್ಲಿದ್ದವರನ್ನು ಎಚ್ಚರಿಸಿದೆ.

ತಕ್ಷಣ ಕಾರ್ಯಪ್ರವೃತ್ತರಾದ ಅಲ್ಲಿನ ಸಿಬ್ಬಂದಿ ರೋಗಿಗಳನ್ನು ಸ್ಥಳಾಂತರಿಸಿದ್ದಾರೆ, ಫೈರ್‌ ಬ್ರಿಗೇಡ್‌ಗೂ ಕಾಲ್ ಮಾಡಿದ್ದಾರೆ. ಆದರೆ  ಈ ಘಟನೆಯಲ್ಲಿ ನಾಯಿಗೂ ಸುಟ್ಟ ಗಾಯಗಳಾಗಿದ್ದು, ಗಂಭೀರ ಸ್ಥಿತಿಯಲ್ಲಿದೆ.

ನಾಯಿಯ ಹೊಟ್ಟೆಯಲ್ಲಿ ಎಷ್ಟು ಮರಿಗಳಿವೆ ಎಂದು ತಿಳಿದುಬಂದಿಲ್ಲ, ಆದರೆ ಮರಿಗಳಿಗೆ ಜನ್ಮ ಕೊಟ್ಟ ಬಳಿಕ ಅವುಗಳಿಗೆ ಹಾಲುಣಿಸಿಸುವುದು ಕಷ್ಟಸಾಧ್ಯ.  ಏಕೆಂದರೆ ಅದರ ಮೊಲೆಗಳು ಕೂಡಾ ಘಟನೆಯಲ್ಲಿ ಸಂಪೂರ್ಣವಾಗಿ ಸುಟ್ಟುಹೋಗಿವೆ  ಎಂದು ಹೇಳಲಾಗಿದೆ.