ಜೈಪುರ(ಮೇ.29): ರಾಜಸ್ಥಾನದ ಭರತ್‌ಪುರದಲ್ಲಿ ವೈದ್ಯ ದಂಪತಿಯನ್ನು ದುಷ್ಕರ್ಮಿಗಳ ತಂಡವೊಂದು ಹಾಡಹಗಲೇ ರಸ್ತೆಯಲ್ಲಿ ಭೀಕರವಾಗಿ ಹತ್ಯೆಗೈದಿದೆ. ನಗರದ ಹೀರಾದಾಸ್‌ ಬಸ್‌ ನಿಲ್ದಾಣದ ಸಮೀಪದ ಜನದಟ್ಟಣೆ ಇದ್ದ ರಸ್ತೆಯಲ್ಲಿ ಬೈಕ್‌ನಲ್ಲಿ ಬಂದಿದ್ದ, ಶಸ್ತ್ರಾಸ್ತ್ರ ಹೊಂದಿದ್ದ ಇಬ್ಬರು ದುಷ್ಕರ್ಮಿಗಳು ವೈದ್ಯ ದಂಪತಿಗೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಶುಕ್ರವಾರ ಸಂಜೆ 4.45ಕ್ಕೆ ಈ ಘಟನೆ ನಡೆದಿದೆ. ತಿರುವೊಂದರಲ್ಲಿ ವೈದ್ಯ ದಂಪತಿ ಇದ್ದ ಕಾರನ್ನು ಓವರ್‌ ಟೇಕ್ ಮಾಡಿದ ಬೈಕ್ ಮುಂದೆ ಸರಿದು ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿದೆ. ಘಟನೆಯ ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕುಸ್ತಿಪಟು ಸುಶೀಲ್‌ ಕುಮಾರ್ ನಡೆಸಿದ್ದ ಹಲ್ಲೆಯ ಫೋಟೋಗಳು ವೈರಲ್..!

ಕಾರನ್ನು ಓವರ್‌ ಟೇಕ್ ಮಾಡಿದ ಬೈಕ್‌ ಸವಾರರು ಬಳಿಕ ಕಾಲ್ನಡಿಗೆಯಲ್ಲಿ ವೈದ್ಯ ದಂಪತಿಯ ಬಳಿ ತೆರಳಿದ್ದಾರೆ. ಇನ್ನು ಡಾಕ್ಟರ್ ಕಾರಿನ ಕಿಟಕಿ ಮುಚ್ಚಲು ಯತ್ನಿಸುತ್ತಿದ್ದಂತೆಯೇ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ, ಕೂಡಲೇ ಬೈಕನ್ನೇರಿ ಪರಾರಿಯಾಗಿದ್ದಾರೆ.

ಸೇಡಿನಿಂದಾಗಿ ಈ ದಾಳಿ ನಡೆದಿರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ. ಇನ್ನು ದಾಳಿಗೊಳಗಾದ ವೈದ್ಯ ದಂಪತಿ ಯುವತಿಯೊಬ್ಬಳ ಸಾವಿನ ಪ್ರಕರಣದಲ್ಲಿ ಸಿಕ್ಕಾಕೊಂಡಿದ್ದರು. ಈ ದಂಪತಿಗೆ ಮೃತ ಯುವತಿಯೊಂದಿಗೆ ಸಂಪರ್ಕವಿತ್ತೆನ್ನಲಾಗಿದೆ. ಇನ್ನು ಗುಂಡಿನ ದಾಳಿ ನಡೆಸಿದ ವ್ಯಕ್ತಿ, ಅದೇ ಯುವತಿಯ ಸಹೋದರ ಎಂದು ಗುರುತಿಸಲಾಗಿದೆ, ಎರಡು ವಚರ್ಷದ ಹಿಂದೆ ನಡೆದ ಯುವತಿಯ ಹತ್ಯೆ ಪ್ರಕರಣದಲ್ಲಿ ವೈದ್ಯರ ತಾಯಿ ಹಾಗೂ ಹೆಂಡತಿ ಶಾಮೀಲಾಗಿದ್ದರೆಂಬ ಆರೋಪ ಕೇಳಿ ಬಂದಿತ್ತು.