ಬೆಂಗಳೂರು(ಸೆ.07): ರಾತ್ರಿ ವೇಳೆ ಪಾರ್ಟಿ ಆಯೋಜಿಸಿದ್ದ ಆಫ್ರಿಕನ್‌ ಪ್ರಜೆಗಳ ಅಡ್ಡಾ ಮೇಲೆ ಹೆಣ್ಣೂರು ಠಾಣೆ ಪೊಲೀಸರು ದಾಳಿ ನಡೆಸಿದ್ದು, ಆಯೋಜಕನನ್ನು ಬಂಧಿಸಿದ್ದಾರೆ.

ಸ್ಥಳೀಯರು ಕೊಟ್ಟ ದೂರಿನ ಮೇರೆಗೆ ಪಾರ್ಟಿ ಆಯೋಜಿಸಿದ್ದ ನೈಜೀರಿಯಾ ಪ್ರಜೆ ಜಾನ್ಸನ್‌ ಕನೆಗೆ ಎಂಬಾತನನ್ನು ಬಂಧಿಸಿ, ವಿದೇಶಿಯರ ಕಾಯ್ದೆ ಹಾಗೂ ಅಬಕಾರಿ ಕಾಯ್ದೆಯಡಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ನೈಜೀರಿಯನ್‌ ಪ್ರಜೆಗಳು ಹೊರಮಾವು ಸಮೀಪದ ಗಣಪತಿ ಲೇಔಟ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಆಫ್ರಿಕನ್‌ ಪ್ರಜೆಗಳು ಹೊರಮಾವು ಸಮೀಪದ ರಾಜಣ್ಣ ಲೇಔಟ್‌ನಲ್ಲಿ ದೊಡ್ಡ ಖಾಲಿ ಶೆಡ್‌ವೊಂದನ್ನು ಬಾಡಿಗೆ ಪಡೆದು ಪಾರ್ಟಿ ಆಯೋಜಿಸಿದ್ದರು. ರಾತ್ರಿ 11 ಗಂಟೆಯಾದರೂ ಡಿ.ಜೆ. ನೃತ್ಯ ಮಾಡಲಾಗುತ್ತಿತ್ತು. ಇದರಿಂದ ಸ್ಥಳೀಯ ನಿವಾಸಿಗಳಿಗೆ ಸಾಕಷ್ಟುಕಿರಿ-ಕಿರಿಯಾಗಿತ್ತು. ಅಲ್ಲದೆ, ಕೆಲ ಆಫ್ರಿಕಾನ್‌ ಪ್ರಜೆಗಳು ಲೋಹದ ಆಯುಧಗಳನ್ನು ಕೈನಲ್ಲಿ ಹಿಡಿದಿದ್ದರು ಎನ್ನಲಾಗಿದೆ. ಇದರಿಂದ ಆತಂಕಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಬಂದು ದಾಳಿ ನಡೆಸಿದ್ದು, ಆಫ್ರಿಕನ್‌ ಪ್ರಜೆಗಳು ಸ್ಥಳದಿಂದ ಕಾಲ್ಕಿತ್ತಿದ್ದರು.

ಕಾರ್ಪೊರೇಟರ್‌ ಪುತ್ರಗೆ ಡ್ರಗ್ಸ್‌ ನಂಟು?

ಆಫ್ರಿಕನ್‌ ಪ್ರಜೆಗಳು ಫುಡ್‌ ಫೆಸ್ಟಿವಲ್‌ ಆಯೋಜನೆ ಮಾಡಿದ್ದು, ಇದಕ್ಕೆ ಯಾವುದೇ ಅನುಮತಿ ಪಡೆದಿರಲಿಲ್ಲ. ಅಲ್ಲದೆ, ಜೋರಾಗಿ ಶಬ್ಧ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಯೋಜಕ ನೈಜೀರಿಯಾನ್‌ ಪ್ರಜೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಪ್ರತಿವಾರ ಆಫ್ರಿಕನ್‌ ಪ್ರಜೆಗಳಿಂದ ನಮಗೆ ತೊಂದರೆಯಾಗುತ್ತಿದೆ. ಕತ್ತಲಾದರೆ ಮಕ್ಕಳು ಮತ್ತು ಮಹಿಳೆಯರು ಹೊರಗೆ ಬಾರದಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಪೊಲೀಸ್‌ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.