ಬೆಂಗಳೂರು(ಸೆ.07): ರಾಷ್ಟ್ರೀಯ ಮಟ್ಟದಲ್ಲಿ ಡ್ರಗ್ಸ್‌ ದಂಧೆಯ ತನಿಖೆ ಚುರುಕುಗೊಳಿಸಿರುವ ಕೇಂದ್ರ ಮಾದಕ ವಸ್ತು ನಿಯಂತ್ರಣ ದಳ (ಎನ್‌ಸಿಬಿ) ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಸದಸ್ಯರೊಬ್ಬರ ಪುತ್ರನಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಿದೆ.

ಬಿಬಿಎಂಪಿ ಮಹಾಲಕ್ಷ್ಮೇಪುರಂ ವಾರ್ಡ್‌ನ ಸದಸ್ಯ ಕೇಶವಮೂರ್ತಿ ಪುತ್ರ ಯಶಸ್‌ಗೆ ನೋಟಿಸ್‌ ನೀಡಲಾಗಿದೆ. ಅದರೊಂದಿಗೆ ಸಿನಿಮಾ ಸೆಲೆಬ್ರಿಟಿಗಳ ಜತೆಗೆ ಈಗ ರಾಜಕಾರಣಿಗಳ ಮಕ್ಕಳಿಗೂ ಕೇಂದ್ರ ತನಿಖಾ ತಂಡದಿಂದ ಆತಂಕ ಶುರುವಾಗಿದೆ.

ಇತ್ತೀಚೆಗೆ ಮುಂಬೈ ಎನ್‌ಸಿಬಿ ಮತ್ತು ಬೆಂಗಳೂರು ಎನ್‌ಸಿಬಿ ತಂಡ ಕೇಶವಮೂರ್ತಿ ಅವರ ನಿವಾಸದ ಮೇಲೆ ದಾಳಿ ನಡೆಸಿ ಶೋಧ ನಡೆಸಿತ್ತು. ದಾಳಿ ವೇಳೆ ಮನೆಯಲ್ಲಿ ಪಾಲಿಕೆ ಸದಸ್ಯನ ಪುತ್ರ ಯಶಸ್‌ ಇರಲಿಲ್ಲ. ಅಲ್ಲದೆ, ಆತನ ಮೊಬೈಲ್‌ ಸಂಖ್ಯೆ ಕೂಡ ಸ್ವಿಚ್‌ ಆಫ್‌ ಆಗಿತ್ತು. ಈ ಹಿನ್ನೆಲೆಯಲ್ಲಿ ತನಿಖಾ ತಂಡ ಸೆ.2ರಂದು ಯಶಸ್‌ ಮನೆಗೆ ನೋಟಿಸ್‌ ನೀಡಿದ್ದು, ಸೆ.7ರೊಳಗೆ ಮುಂಬೈ ಎನ್‌ಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆ.31ರಂದು ಅಂತಾರಾಷ್ಟ್ರೀಯ ಡ್ರಗ್‌ ಪೆಡ್ಲರ್‌ ರೆಹಮಾನ್‌ ಎಂಬಾತನನ್ನು ಎನ್‌ಸಿಬಿ ತಂಡ ಬಂಧಿಸಿತ್ತು. ಈ ವೇಳೆ ಆರೋಪಿ ಬೆಂಗಳೂರಿನ ಯಶಸ್‌ ಎಂಬಾತ ಡಾರ್ಕ್ನೆಟ್‌ ವೆಬ್‌ಸೈಟ್‌ ಮೂಲಕ ಮಾದಕ ದ್ರವ್ಯ ಖರೀದಿ ಮಾಡುತ್ತಿದ್ದ ಬಗ್ಗೆ ಬಾಯ್ಬಿಟ್ಟಿದ್ದ. ಅಲ್ಲದೆ, ಯಶಸ್‌ ಆನ್‌ಲೈನ್‌ನಲ್ಲಿ ವ್ಯವಹಾರ ನಡೆಸಿರುವ ದಾಖಲೆ ಕೂಡ ಎನ್‌ಸಿಬಿಗೆ ಲಭ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಕೇಶವಮೂರ್ತಿ ಪುತ್ರನಿಗೆ ನೋಟಿಸ್‌ ಜಾರಿ ಮಾಡಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಾಜಪೂತ್‌ ಸಾವಿನ ಪ್ರಕರಣದ ತನಿಖೆಯ ವೇಳೆ ಸಿಬಿಐನಿಂದ ನಟಿ ರಿಯಾ ಚಕ್ರವರ್ತಿಯ ಸೋದರನ ಬಂಧನವಾಗಿತ್ತು. ಈ ವೇಳೆ ಡ್ರಗ್ಸ್‌ ಜಾಲದ ಬಗ್ಗೆ ಸಿಕ್ಕ ಮಾಹಿತಿ ಹಿನ್ನೆಲೆಯಲ್ಲಿ ಪ್ರಕರಣವನ್ನು ಎನ್‌ಸಿಬಿಗೆ ವರ್ಗಾಯಿಸಲಾಗಿತ್ತು. ಬಳಿಕ ಬೆಂಗಳೂರು ಮೂಲದ ಅನಿಕಾ.ಡಿ ಸೇರಿದಂತೆ ಹಲವರನ್ನು ಎನ್‌ಸಿಬಿ ಬಂಧಿಸಿತ್ತು. ಇದೀಗ ಬೆಂಗಳೂರಿನ ಪಾಲಿಕೆ ಸದಸ್ಯನ ಪುತ್ರನಿಗೆ ನೋಟಿಸ್‌ ನೀಡಲಾಗಿದೆ.

ಇನ್ನು ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಪಾಲಿಕೆ ಸದಸ್ಯ ಕೇಶವಮೂರ್ತಿ, ನನ್ನ ಪುತ್ರನಿಗೆ ಸಿನಿಮಾದವರ ಸಂಪರ್ಕ ಇಲ್ಲ. ಪದವಿ ಅಪೂರ್ಣವಾಗಿರುವ ಪುತ್ರ ಜಿಮ್‌ ಮಾಡಿಕೊಂಡಿದ್ದಾನೆ. ಎನ್‌ಸಿಬಿ ಅವರು ನೋಟಿಸ್‌ ನೀಡಿದ್ದು, ವಿಚಾರಣೆ ಎದುರಿಸಲಿದ್ದಾನೆ ಎಂದು ಹೇಳಿದ್ದಾರೆ.

ನನ್ನ ಪುತ್ರನಿಗೆ ಸಿನಿಮಾದವರ ಸಂಪರ್ಕ ಇಲ್ಲ. ಪದವಿ ಅಪೂರ್ಣವಾಗಿರುವ ಪುತ್ರ ಜಿಮ್‌ ಮಾಡಿಕೊಂಡಿದ್ದಾನೆ. ಎನ್‌ಸಿಬಿ ಅವರು ನೋಟಿಸ್‌ ನೀಡಿದ್ದು, ವಿಚಾರಣೆ ಎದುರಿಸಲಿದ್ದಾನೆ.

-ಕೇಶವಮೂರ್ತಿ, ಬಿಬಿಎಂಪಿ ಸದಸ್ಯ

ಡ್ರಗ್ಸ್‌ ಕೇಸಲ್ಲಿ ಮತ್ತೆ ಸಿಕ್ಕಿಬಿದ್ರೆ ಗೂಂಡಾಕಾಯ್ದೆ: ಬೊಮ್ಮಾಯಿ

ಬೆಂಗಳೂರು: ಮಾದಕ ವಸ್ತುಗಳ ವಿಚಾರದಲ್ಲಿ ಅಪರಾಧ ಪುನರಾವರ್ತನೆ ಮಾಡಿದವರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಮಾದಕ ವಸ್ತುಗಳ ಬಗ್ಗೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆ. ಎಂತಹದ್ದೇ ಪ್ರಭಾವಿಗಳಿದ್ದರೂ ಕ್ರಮ ಕೈಗೊಳ್ಳುತ್ತೇವೆ. ಸಾಕ್ಷಿ ಸಮೇತ ಸಿಕ್ಕಿದರೆ ಸಿನಿಮಾ, ರಾಜಕೀಯ ಕ್ಷೇತ್ರದಲ್ಲಿರುವ ಪ್ರಭಾವಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.