ಫಾರ್ಮ್ ಹೌಸ್‌ನಲ್ಲಿ ರೇವ್ ಪಾರ್ಟಿ ಮಾಡಿ ಮಾದಕ ವಸ್ತು, ಮದ್ಯದ ನಶೆಯಲ್ಲಿ ತೇಲುತ್ತಿದ್ದ ಯುವಕ- ಯುವತಿಯರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಸಮೀಪ ನಡೆದಿದೆ.

ದೊಡ್ಡಬಳ್ಳಾಪುರ (ಮೇ.26): ರಾಜ್ಯದ ರಾಜಧಾನಿ ಮತ್ತೆ ಮಾದಕ ವಸ್ತು ನಶೆಯಿಂದ ಸುದ್ದಿ ಮಾಡಿದೆ. ಫಾರ್ಮ್ ಹೌಸ್‌ನಲ್ಲಿ ರೇವ್ ಪಾರ್ಟಿ ಮಾಡಿ ಮಾದಕ ವಸ್ತು, ಮದ್ಯದ ನಶೆಯಲ್ಲಿ ತೇಲುತ್ತಿದ್ದ ಯುವಕ- ಯುವತಿಯರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಸಮೀಪ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಒಟ್ಟು 31 ಜನರನ್ನು ವಶಕ್ಕೆ ಪಡೆದಿದ್ದಾರೆ.

ಎಸಿಪಿ ನವೀನ್ ನೇತೃತ್ವದಲ್ಲಿ ಶನಿವಾರ ತಡರಾತ್ರಿ ದಾಳಿ ಸಂಘಟಿಸಿದ ಪೊಲೀಸರು, ಮಾದಕ ವ್ಯಸನದ ನಶೆಯಲ್ಲಿ ತೂರಾಡುತ್ತಿದ್ದ ಯುವಕ-ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. ಫಾರ್ಮ್‌ಹೌಸ್ ಪರಿಶೀಲನೆ ವೇಳೆ ಗಾಂಜಾ, ಕೊಕೇನ್‌, ಚರಸ್ ಸೇರಿದಂತೆ ಹಲವು ಮಾದಕ ವಸ್ತುಗಳು ಪತ್ತೆಯಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಕರಣದಲ್ಲಿ 7 ಮಂದಿ ಯುವತಿಯರು ಹಾಗೂ 24 ಮಂದಿ ಯುವಕರು ಸೇರಿದಂತೆ ಒಟ್ಟು 31 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಎಲ್ಲರ ರಕ್ತಪರೀಕ್ಷೆ ಮಾಡಿಸಲಾಗುತ್ತಿದೆ.

ಈ ಪಾರ್ಟಿಯಲ್ಲಿ ಬಹುತೇಕ ಮಂದಿ ಹೊರ ರಾಜ್ಯಗಳ ಸಾಫ್ಟ್‌ವೇ‌ರ್ ಎಂಜಿನಿಯರ್‌ಗಳು ಇದ್ದಾರೆ ಎಂದು ತಿಳಿದುಬಂದಿದೆ. ಜಿಟಿ ಜಿಟಿ ಮಳೆಯ ನಡುವೆಯೂ ಜೋರಾಗಿ ಡಿಜೆ ಹಾಕಿಕೊಂಡು ಮಾದಕ ಹಾಗೂ ಮದ್ಯದ ನಶೆಯಲ್ಲಿ ಇವರೆಲ್ಲರೂ ತೇಲಾಡುತ್ತಿದ್ದರು ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಫಾರ್ಮ್‌ಹೌಸ್‌ನ ಮೇಲ್ವಿಚಾರಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಈ ರೇವ್ ಪಾರ್ಟಿಯನ್ನು ಆಯೋಜಿಸಿದವರು ಯಾರು? ಈ ಪಾರ್ಟಿಗೆ ಮಾದಕವಸ್ತುಗಳನ್ನು ಸರಬರಾಜು ಮಾಡಿದವರು ಯಾರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಫಾರ್ಮ್‌ ಹೌಸ್‌ನ ತುಂಬೆಲ್ಲ ಮದ್ಯದ ಬಾಟಲ್ ಸೇರಿದಂತೆ ಹಲವಾರು ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಪೊಲೀಸರನ್ನು ಕಂಡು ಪಾರ್ಟಿಯಲ್ಲಿ ಭಾಗಿಯಾಗಿದ್ದ ಕೆಲವರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಬರ್ತ್ ಡೇ ಪಾರ್ಟಿ ನೆಪದಲ್ಲಿ ಈ ರೇವ್ ಪಾರ್ಟಿಯನ್ನು ಆಯೋಜಿಸಲಾಗಿತ್ತು ಹಾಗೂ ಈ ಫಾರ್ಮ್‌ ಹೌಸ್ ಬೆಂಗಳೂರಿನ ಶಿವಾಜಿನಗರದ ಉದ್ಯಮಿಯೊಬ್ಬರಿಗೆ ಸೇರಿದೆ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಈ ಬಗ್ಗೆ ದೇವನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಹೀಗಿತ್ತು ನಶಾಲೋಕ..
-ಬೆಂಗಳೂರಿನ ಶಿವಾಜಿನಗರದ ಉದ್ಯಮಿಗೆ ಸೇರಿದ ಫಾರ್ಮ್‌ಹೌಸ್‌
-ಶನಿವಾರ ರಾತ್ರಿ ಜೋರಾಗಿ ಡಿಜೆ ಹಾಕಿಕೊಂಡು ನಶೆಯಲ್ಲಿದ್ದ ಜನ
-ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ, ದಾಳಿ ಮಾಡಿದ ಪೊಲೀಸ್‌
-ಗಾಂಜಾ, ಕೊಕೇನ್‌, ಚರಸ್ ಸೇರಿ ಹಲವು ಮಾದಕ ವಸ್ತು ಪತ್ತೆ
-ಪೊಲೀಸರು ಬಂದಿದ್ದನ್ನು ಕಂಡು ಸ್ಥಳದಿಂದ ಪೇರಿ ಕಿತ್ತ ಕೆಲವರು
-ಪಾರ್ಟಿಗೆ ಮಾದಕವಸ್ತು ಎಲ್ಲಿಂದ ಬಂತು ಎಂಬುದರ ತೀವ್ರ ತಲಾಶೆ