Asianet Suvarna News Asianet Suvarna News

ರೇಪ್‌ ಸಂತ್ರಸ್ತೆಯ ತಾಯಿಗೆ ಧಮ್ಕಿ: ಬೇಲ್‌ ಸಿಕ್ಕರೂ ಖೈದಿಗಿಲ್ಲ ಬಿಡುಗಡೆ

*  ಜೈಲಲ್ಲಿ ಅಕ್ರಮ ಚಟುವಟಿಕೆ, ಜೀವ ಬೆದರಿಕೆ ಕೇಸ್‌ ದಾಖಲು
*  ಸಂತ್ರಸ್ತ ತಾಯಿಗೆ ಜೈಲಿನಿಂದ ಬೆದರಿಕೆ ಕರೆ ಮಾಡಿದ್ದ ವಿಚಾರಣಾಧೀನ ಕೈದಿ
*  ಲಗೇಜ್‌ ಬ್ಯಾಗ್‌ನಲ್ಲಿ ಡ್ರಗ್ಸ್‌ ಪತ್ತೆ
 

Despite Get Bail the Prisoner is Not Released From Jail in Bengaluru grg
Author
Bengaluru, First Published Jul 9, 2022, 11:30 PM IST

ಬೆಂಗಳೂರು(ಜು.09):  ತನ್ನ ವಿರುದ್ಧ ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ದೂರು ನೀಡಿದ್ದ ಸಂತ್ರಸ್ತ ತಾಯಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬೆದರಿಕೆ ಕರೆ ಮಾಡಿದ್ದ ತಪ್ಪಿಗೆ ವಿಚಾರಣಾಧೀನ ಕೈದಿಯೊಬ್ಬ ಈಗ ಜಾಮೀನು ಸಿಕ್ಕಿದರೂ ಜೈಲಿನಲ್ಲೇ ಕೊಳೆಯುವಂತಾಗಿದೆ.

ಹೊಸಕೋಟೆಯ ಎನ್‌.ಮಧು ವಿಚಾರಣಾಧೀನ ಕೈದಿಯಾಗಿದ್ದು, ಜೈಲಿನಲ್ಲಿ ಮತ್ತೊಬ್ಬ ವಿಚಾರಣಾಧೀನ ಕೈದಿಯಿಂದ ಮೊಬೈಲ್‌ ಪಡೆದು ಸಂತ್ರಸ್ತೆಗೆ ಆರೋಪಿ ಕರೆ ಮಾಡಿ ಧಮ್ಕಿ ಹಾಕಿದ್ದ. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನನ್ವಯ ಮಧುನನ್ನು ವಶಕ್ಕೆ ಪಡೆದು ಕಾರಾಗೃಹದ ಅಧಿಕಾರಿಗಳು ಪ್ರಶ್ನಿಸಿದಾಗ ಮೊಬೈಲ್‌ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಪೊಸ್ಕೊ ಕಾಯ್ದೆಯಡಿ ಜಾಮೀನು ಪಡೆದಿದ್ದ ಮಧು ಮೇಲೆ ಈಗ ಜೈಲಿನಲ್ಲಿ ಅಕ್ರಮ ಚಟುವಟಿಕೆ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದ ಮೇರೆಗೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು. ಈ ಪ್ರಕರಣದಲ್ಲಿ ಆತನನ್ನು ಬಂಧಿಸಿ ಮತ್ತೆ ಜೈಲಿಗೆ ಪೊಲೀಸರು ಕರೆ ತಂದು ಬಿಟ್ಟಿದ್ದಾರೆ ಎಂದು ಕಾರಾಗೃಹ ಅಧಿಕಾರಿಗಳು ತಿಳಿಸಿದ್ದಾರೆ.

ಹುಬ್ಬಳ್ಳಿ ಧಾರವಾಡದಲ್ಲಿ ಕ್ರೈಂಗಳಿಗಿಲ್ಲ ಕಡಿವಾಣ: ಜೈಲಿನಲ್ಲಿ 4 ಹೊಸ ಬ್ಯಾರಕ್ ನಿರ್ಮಾಣ!

ಇದೇ ವರ್ಷದ ಫೆಬ್ರವರಿಯಲ್ಲಿ ಅಪ್ರಾಪ್ತತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ಪೊಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಮಧುನನ್ನು ಹೊಸಕೋಟೆ ಠಾಣೆ ಪೊಲೀಸರು ಬಂಧಿಸಿದ್ದರು. ಆರು ತಿಂಗಳಿಂದ ಜೈಲಿನಲ್ಲಿದ್ದ ಮಧು, ಪೊಸ್ಕೋ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದ. ಬಿಡುಗಡೆ ಮುನ್ನ ಪೊಸ್ಕೋ ಪ್ರಕರಣದ ಸಂತ್ರಸ್ತೆಗೆ ಜೈಲಿನಿಂದ ಆತ ಬೆದರಿಕೆ ಕರೆ ಮಾಡಿ ಮತ್ತೆ ಸಂಕಷ್ಟಸಿಲುಕಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶೌಚಾಲಯದ ಪೈಪಲ್ಲಿ ಮೊಬೈಲ್‌

ಕಾರಾಗೃಹದ 1ನೇ ಬ್ಯಾರಕ್‌ನ ಮಧು ಇದ್ದ 2ನೇ ಸೆಲ್‌ ಅನ್ನು ತಪಾಸಣೆ ನಡೆಸಿದಾಗ ಯಾವುದೇ ಮೊಬೈಲ್‌ ಪತ್ತೆಯಾಗಲಿಲ್ಲ. ಆಗ ಮಧುನನ್ನು ‘ತೀವ್ರ’ ವಿಚಾರಣೆ ನಡೆಸಿದಾಗ ,ತಾನು 6ನೇ ಬ್ಯಾರಕ್‌ 5ನೇ ಕೊಠಡಿಯಲ್ಲಿದ್ದ ಪರಿಚಿತ ಸಹ ಕೈದಿಯ ಮೊಬೈಲ್‌ ಪಡೆದು ಕರೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡ. ಆದರೆ ಈಗಾಗಲೇ ಮಧುಗೆ ಮೊಬೈಲ್‌ ಕೊಟ್ಟಿದ್ದ ವಿಚಾರಣಾಧೀನ ಕೈದಿ ಜಾಮೀನು ಪಡೆದು ಬಿಡುಗಡೆಯಾಗಿದ್ದ. ಕೊನೆಗೆ ಆತನ ಬ್ಯಾರಕ್‌ನಲ್ಲಿ ತಪಾಸಣೆ ನಡೆಸಿದಾಗ ಶೌಚಾಲಯದ ಪೈಪ್‌ನಲ್ಲಿ ಜಿಯೋ ಮೊಬೈಲ್‌ ಪತ್ತೆಯಾಯಿತು ಎಂದು ಕಾರಾಗೃಹದ ಅಧಿಕಾರಿಗಳು ತಿಳಿಸಿದ್ದಾರೆ.

ಸನ್ನಡತೆಯ ವೃದ್ಧ, ಮಹಿಳಾ ಕೈದಿಗಳಿಗೆ ಬಿಡುಗಡೆ ಭಾಗ್ಯ: ಸುತ್ತೋಲೆ ಹೊರಡಿಸಿದ ಕೇಂದ್ರ!

ಲಗೇಜ್‌ ಬ್ಯಾಗ್‌ನಲ್ಲಿ ಡ್ರಗ್ಸ್‌ ಪತ್ತೆ

ಇನ್ನೊಂದೆಡೆ ಜೈಲಿನಲ್ಲಿ ಡ್ರಗ್ಸ್‌ ದಂಧೆ ನಡೆಸಲು ತನ್ನ ಸ್ನೇಹಿತರಿಂದ ಡ್ರಗ್ಸ್‌ ತರಿಸಿಕೊಂಡು ಕೈದಿ ಮೋಹನ್‌ ಅಲಿಯಾಸ್‌ ಕುಂಟ ಸಿಕ್ಕಿಬಿದ್ದಿದ್ದು, ಆತನ ಮೇಲೂ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಗುರಿಯಾಗಿ ಮೋಹನ್‌, ಆರು ವರ್ಷಗಳಿಂದ ಸೆರೆಮನೆಯಲ್ಲಿದ್ದಾನೆ.

ಹೊರಗಿನಿಂದ ಬರುವ ಪಾರ್ಸಲ್‌ಗಳನ್ನು ಕೈದಿಗಳಿಗೆ ತಲುಪಿಸುವ ಮುನ್ನ ಕಾರಾಗೃಹದ ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿ ಪರಿಶೀಲಿಸುತ್ತಾರೆ. ಅಂತೆಯೇ ಮೋಹನ್‌ನಿಗೆ ಸೇರಿದ ಪಾರ್ಸಲ್‌ ಅನ್ನು ಸಹ ತಪಾಸಣೆಗೊಳಪಡಿಸಿದಾಗ ಬ್ಯಾಗ್‌ನೊಳಗೆ ದ್ರವರೂಪದ ಹಾಶೀಶ್‌ ಆಯಿಲ್‌ನ್ನು ಬಚ್ಚಿಟ್ಟು ಹೊಲಿದಿರುವುದು ಗೊತ್ತಾಯಿತು. ಎರಡು ಪ್ಲಾಸ್ಟಿಕ್‌ ಕವರ್‌ನಲ್ಲಿ .2 ಲಕ್ಷ ಮೌಲ್ಯದ ಅಂದಾಜು 85 ಗ್ರಾಂ ಗಾಂಜಾ ಆಯಿಲ್‌ ಸಿಕ್ಕಿದೆ. ಜೈಲಿನಲ್ಲಿ ಕೈದಿಗಳಿಗೆ ಮಾರಾಟ ಮಾಡಲು ಮೋಹನ್‌ ಗಾಂಜಾ ತರಿಸಿದ್ದು ವಿಚಾರಣೆ ವೇಳೆ ಬಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
 

Follow Us:
Download App:
  • android
  • ios