ಬಿಎಂಟಿಸಿ ಮುಖ್ಯ ಲೆಕ್ಕಾಧಿಕಾರಿ ಆರ್ಥಿಕ ಸಲಹೆಗಾರರ ಅಧಿಕೃತ ಇ-ಮೇಲ್‌ ವಿಳಾಸಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಹೆಸರಿನಲ್ಲಿ ಇ-ಮೇಲ್‌ ಬಂದಿದೆ. ಆ ಇ-ಮೇಲ್‌ ಸಂದೇಶದಲ್ಲಿ ಕೂಡಲೇ 9.70 ಲಕ್ಷ ರೂ. ಅನ್ನು ಆರ್‌ಟಿಜಿಎಸ್‌ ಮುಖಾಂತರ ವರ್ಗಾಯಿಸುವಂತೆ ತಿಳಿಸಲಾಗಿದೆ.

ಬೆಂಗಳೂರು (ಜನವರಿ 16, 2024): ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಹೆಸರಿನಲ್ಲಿ ದುಷ್ಕರ್ಮಿಗಳು ನಕಲಿ ಇ - ಮೇಲ್‌ ಐಡಿ ಸೃಷ್ಟಿಸಿ ಬಿಎಂಟಿಸಿಯ ಕೇಂದ್ರ ಕಚೇರಿಯ ಮುಖ್ಯ ಲೆಕ್ಕಾಧಿಕಾರಿ ಆರ್ಥಿಕ ಸಲಹೆಗಾರರ ಬಳಿ 9.70 ಲಕ್ಷ ರೂ. ಕೇಳಿದ ಆರೋಪದಡಿ ಕೇಂದ್ರ ವಿಭಾಗ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಿಎಂಟಿಸಿ ಕೇಂದ್ರ ಕಚೇರಿಯ ಮುಖ್ಯ ಲೆಕ್ಕಾಧಿಕಾರಿ ಆರ್ಥಿಕ ಸಲಹೆಗಾರ ಅಬ್ದುಲ್‌ ಖುದ್ದೂಸ್‌ ಅವರು ನೀಡಿದ ದೂರಿನ ಮೇರೆಗೆ ದುಷ್ಕರ್ಮಿಗಳ ವಿರುದ್ಧ ಐಟಿ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: ಸಣ್ಣ ಮಾತಿನಿಂದ ನೀವು ದೊಡ್ಡವರಾಗೊಲ್ಲ, ನೀಚ ಬುದ್ಧಿಯ ಬಿಡಿ; ಅನಂತ ಕುಮಾರ್ ಹೆಗಡೆಗೆ ಸಚಿವ ರಾಮಲಿಂಗಾರೆಡ್ಡಿ ನೀತಿಪಾಠ

ದೂರಿನಲ್ಲಿ ಏನಿದೆ?:
ಜನವರಿ 13ರಂದು ಬಿಎಂಟಿಸಿ ಮುಖ್ಯ ಲೆಕ್ಕಾಧಿಕಾರಿ ಆರ್ಥಿಕ ಸಲಹೆಗಾರರ ಅಧಿಕೃತ ಇ-ಮೇಲ್‌ ವಿಳಾಸಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಹೆಸರಿನಲ್ಲಿ ಇ-ಮೇಲ್‌ ಬಂದಿದೆ. ಆ ಇ-ಮೇಲ್‌ ಸಂದೇಶದಲ್ಲಿ ಕೂಡಲೇ 9.70 ಲಕ್ಷ ರೂ. ಅನ್ನು ಆರ್‌ಟಿಜಿಎಸ್‌ ಮುಖಾಂತರ ವರ್ಗಾಯಿಸುವಂತೆ ತಿಳಿಸಲಾಗಿದೆ.

ಈ ಬಗ್ಗೆ ಅನುಮಾನಗೊಂಡ ಅಬ್ದುಲ್ ಖುದ್ದೂಸ್‌ ಅವರು ನೇರವಾಗಿ ಸಚಿವರಿಗೆ ಕರೆ ಮಾಡಿ ವಿಚಾರಿಸಿದಾಗ, ಆ ರೀತಿಯ ಯಾವುದೇ ಇ-ಮೇಲ್‌ ಸಂದೇಶ ಕಳುಹಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಳಿಕ ಇದು ಸೈಬರ್‌ ವಂಚಕರ ಕೈಚಳಕ ಇರಬಹುದು ಎಂದು ಭಾವಿಸಿ, ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಜನತೆಗೆ ಆಸ್ತಿ ತೆರಿಗೆ ಬರೆ ಎಳೆದ ಬಿಬಿಎಂಪಿ; ನಗರಾಭಿವೃದ್ಧಿ ಮಂತ್ರಿಗೆ ಚಳಿ ಬಿಡಿಸಿದ ರಾಮಲಿಂಗಾರೆಡ್ಡಿ!