ನವದೆಹಲಿ(ಮೇ.03): ದೆಹಲಿ ಮೂಲದ 25 ವರ್ಷದ ವೈದ್ಯೆಯ ಕೊಲೆಯ ಮೂರು ದಿನಗಳ ಬಳಿಕ ಆರೋಪಿಯನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ಚಿಯಾಗಿದ್ದಾರೆ.

ಡಾ. ಗರೀಮಾ ಮಿಶ್ರಾ ಎಂಬ ವೈದ್ಯೆಯನ್ನು ನಗರದ ರಂಜಿತ್ ನಗರದಲ್ಲಿರುವ ಅವರ ಅಪಾರ್ಟ್ ಮೆಂಟ್‌ನಲ್ಲಿ ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಇದಾದ ಮೂರು ದಿನಗಳ ಬಳಿಕ ಅದೇ ಅಪಾರ್ಟ್ ಮೆಂಟ್‌ನಲ್ಲಿ ವಾಸವಿದ್ದ ವೈದ್ಯ ಡಾ. ಚಂದ್ರಪ್ರಕಾಶ್ ವರ್ಮಾ ಎಂಬಾತನನ್ನು ಉತ್ತರಾಖಂಡ್ ನ ರೂರ್ಕಿಯಲ್ಲಿ ಬಂಧಿಸಲಾಗಿದೆ.

ಡಾ. ಮಿಶ್ರಾ ಕೊಲೆಯಾದ ದಿನ ಡಾ. ವರ್ಮಾ ತಮ್ಮ ಲಗೇಜ್ ಸಮೇತ ಅಪಾರ್ಟ್ ಮೆಂಟ್ ತೊರೆದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅನುಮಾನಗೊಂಡ ಪೊಲೀಸರು ಡಾ. ವರ್ಮಾ ಪತ್ತೆಗಾಗಿ ತಂಡ ರಚಿಸಿದ್ದರು.

ಅದರಂತೆ ಉತ್ತರಾಖಂಡ್ ನ ರೂರ್ಕಿಯಲ್ಲಿ ಡಾ. ವರ್ಮಾನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರನ್ನು ಕಂಡಾಕ್ಷಣ ಬಂಧನದ ಭೀತಿಯಿಂದ ವರ್ಮಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ ಎನ್ನಲಾಗಿದೆ.

ತಕ್ಷಣ ವರ್ಮಾನನ್ನು ರಕ್ಷಿಸಿದ ಪೊಲೀಸರು, ಆತನನ್ನು ಬಂಧಿಸಿ ದೆಹಲಿಗೆ ಕರೆತಂದಿದ್ದಾರೆ. ಡಾ. ಗರೀಮಾ ಅವರನ್ನು ಪ್ರೀತಿಸುತ್ತಿದ್ದ ಚಂದ್ರಪ್ರಕಾಶ್, ಆಕೆ ತನ್ನ ಪ್ರೀತಿಯನ್ನು ನಿರಾಕರಿಸಿದ ಪರಿಣಾಮ ಕೊಲೆ ಮಾಡಿದ್ದಾಗಿ ಪ್ರಾಥಮಿಕ ತನಿಖೆಯಿಂದ ಬಹಿರಂಗಗೊಂಡಿದೆ.