ರಾಖಿ ಹಬ್ಬ ಬಂತು ನಾನು ರಾಖಿ ಕಟ್ಟೋಕೆ ಅಣ್ಣ-ತಮ್ಮ ಯಾರೂ ಇಲ್ವಲ್ಲ ಎಂದು ಮಗಳು ಹೇಳಿದ್ದು ಆ ದಂಪತಿಗಳಿಗೆ ನಾಟಿತ್ತು. ಅದಕ್ಕಾಗಿ ಅವರು ಮಾಡಿದ್ದು ಖತರ್ನಾಕ್‌ ಪ್ಲ್ಯಾನ್‌ ಕೇಳಿದ್ರೆ ನೀವು ಅಚ್ಚರಿ ಪಡೋದು ಖಂಡಿತ. 

ನವದೆಹಲಿ (ಆ.26):  ಇನ್ನೇನು ದೇಶಾದ್ಯಂತ ರಾಖಿ ಹಬ್ಬದ ಸಂಭ್ರಮ ಶುರುವಾಗಲಿದೆ. ಅಣ್ಣ-ತಮ್ಮಂದಿರರಿಗೆ ಸಹೋದರಿಯರು ರಾಖಿ ಕಟ್ಟಿ ರಕ್ಷೆಯನ್ನು ಕೇಳುವ ದಿನ. ಆದರೆ ದೆಹಲಿಯಲ್ಲಿ ರಾಖಿ ಹಬ್ಬದ ಸಂಭ್ರಮವೇ ದಂಪತಿಗಳನ್ನು ಜೈಲಿನ ಕಂಬಿ ಎಣಿಸುವಂತೆ ಮಾಡಿದೆ. ರಕ್ಷಾಬಂಧನ ಬಂತು ನನಗೆ ರಾಖಿ ಕಟ್ಟೋಕೆ ಅಣ್ಣನೂ ಇಲ್ಲ, ತಮ್ಮನೂ ಇಲ್ಲ ಎಂದು ಮಗಳು ಹೇಳಿದ್ದರಿಂದ ಬೇಸರಗೊಂಡಿದ್ದ ತಂದೆ ತಾಯಿ, 1 ತಿಂಗಳ ಗಂಡು ಮಗುವನ್ನು ಕಿಡ್ನಾಪ್‌ ಮಾಡಿದ ಘಟನೆ ಶುಕ್ರವಾರ ನಡೆದಿದೆ. ಈ ಘಟನೆ ಉತ್ತರ ದೆಹಲಿಯಲ್ಲಿ ನಡೆದಿದೆ. ಈ ಪ್ರಕರಣವನ್ನು ಬೇಧಿಸಲು ಯಶಸ್ವಿಯಾಗಿರುವ ಟ್ಯಾಗೋರ್‌ ಗಾರ್ಡನ್‌ನ ರಘುಬೀರ್‌ ನಗರದ ಪೊಲೀಸರು 41 ವರ್ಷದ ಸಂಜಯ್‌ ಗುಪ್ತಾ ಹಾಗೂ ಆತನ ಪತ್ನಿ ಅನಿತಾ ಗುಪ್ತಾರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ವರ್ಷದ ಹಿಂದೆ ಈ ದಂಪತಿಗಳ ಪುತ್ರ ಸಾವು ಕಂಡಿದ್ದ. ಈ ಬಾರಿ ರಕ್ಷಾಬಂಧನಕ್ಕೆ ರಾಖಿ ಕಟ್ಟಲು ತನಗೆ ಅಣ್ಣ-ತಮ್ಮ ಯಾರೂ ಇಲ್ಲ ಎಂದು ಮಗಳು ಹೇಳಿದ್ದಕ್ಕೆ, ಇವರಿಬ್ಬರೂ ಉತ್ತರ ದೆಹಲಿಯಲ್ಲಿ 30 ದಿನದ ಮಗುವನ್ನು ಕಿಡ್ನಾಪ್‌ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಬೆಳಗ್ಗೆ 4.34ರ ವೇಳೆಗೆ ಅಂಗವಿಕಲ ಮಹಿಳೆಯೊಬ್ಬರ ಒಂದು ತಿಂಗಳ ಮಗುವನ್ನು ಕಿಡ್ನಾಪ್‌ ಮಾಡಿರುವ ಬಗ್ಗೆ ನಮಗೆ ಮಾಹಿತಿ ಲಭಿಸಿತ್ತು. ದೂರು ನೀಡಿದ ದಂಪತಿಗಳು, ತಾವು ಚಟ್ಟಾ ರೇಲ್‌ ಚೌಕ್‌ನ ಫುಟ್‌ಪಾತ್‌ನಲ್ಲಿ ವಾಸವಿದ್ದುದ್ದಾಗಿ ತಿಳಿಸಿದ್ದು, ಮುಂಜಾನೆ ಮೂರು ಗಂಟೆಯ ವೇಳೆಗೆ ತಮಗೆ ಎಚ್ಚರವಾದಾಗ, ಅಪರಿಚಿತ ವ್ಯಕ್ತಿಗಳು ತಮ್ಮ ಮಗುವನ್ನು ಕಿಡ್ನಾಪ್‌ ಮಾಡಿದ್ದು ಕಾಣಿಸಿತ್ತು ಎಂದು ತಿಳಿಸಿದ್ದಾರೆ.

ತನಿಖೆಯ ವೇಳೆ ಪೊಲೀಸರು ಸಾಕಷ್ಟು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಫುಟ್‌ಪಾತ್‌ನ ಬಳಿ ಇಬ್ಬರು ವ್ಯಕ್ತಿಗಳು ಮೋಟಾರ್‌ಸೈಕಲ್‌ನಲ್ಲಿ ತಿರುಗಾಟ ನಡೆಸಿದ್ದು ಕಾಣಿಸಿದೆ. ಇವರೇ ಕಿಡ್ನಾಪರ್‌ಗಳು ಆಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಆ ಬಳಿಕ 400 ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದ ಪೊಲೀಸರು, ಎಲ್‌ಎನ್‌ಜೆಪಿ ಆಸ್ಪತ್ರೆಯವರೆಗೆ ಅವರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಆ ಬಳಿಕ ಎಲ್ಲಾ ವಿವರಗಳನ್ನು ವಿಶ್ಲೇಷಣೆ ಮಾಡಿದ್ದಾರೆ ಮತ್ತು ಆರೋಪಿಯ ಬೈಕ್ ಸಂಜಯ್ ಗುಪ್ತಾ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ ಎಂದು ಕಂಡುಬಂದಿದೆ ಎಂದು ಅಧಿಕಾರಿ ಹೇಳಿದರು. ಸುಮಾರು 15 ಪೊಲೀಸ್ ಸಿಬ್ಬಂದಿ, ಮಹಿಳಾ ಸಿಬ್ಬಂದಿ, ಶಸ್ತ್ರಾಸ್ತ್ರಗಳನ್ನು ಹೊಂದಿದ ಅಪರಾಧ ಪೀಡಿತ ಪ್ರದೇಶವನ್ನು ಸುತ್ತುವರೆದಿದ್ದಾರೆ. ಅವರು ಸಂಜಯ್ ಅವರ ಪತ್ನಿಯೊಂದಿಗೆ ಟಾಗೋರ್ ಗಾರ್ಡನ್‌ನಲ್ಲಿರುವ ರಘುಬೀರ್ ನಗರದ ಸಿ-ಬ್ಲಾಕ್‌ಗೆ ತೆರಳಿದರು. ಅಪಹರಣಕ್ಕೊಳಗಾದ ಮಗು ಕೂಡ ಅಲ್ಲಿ ಪತ್ತೆಯಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ಸಾಗರ್ ಸಿಂಗ್ ಕಲ್ಸಿ ತಿಳಿಸಿದ್ದಾರೆ.

ಸಂಜಯ್‌ ಹಾಗೂ ಅನಿತಾ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ವೇಳೆ ಈ ದಂಪತಿಯ 17 ವರ್ಷದ ಪುತ್ರ ಒಂದು ವರ್ಷದ ಹಿಂದೆ ಸಾವು ಕಂಡಿದ್ದ. ಇದೇ ಆಗಸ್ಟ್‌ 30ಕ್ಕೆ ರಕ್ಷಾಬಂಧನವಿದೆ. ಈ ಬಾರಿ ರಾಖಿ ಕಟ್ಟೋಕೆ ನನಗೆ ಅಣ್ಣ-ತಮ್ಮ ಯಾರೂ ಇಲ್ಲ ಎಂದು ಅವರ 15 ವರ್ಷದ ಪುತ್ರಿ ಹೇಳಿದ್ದಕ್ಕೆ, ದಂಪತಿಗಳು ಗಂಡುಮಗುವನ್ನು ಕಿಡ್ನಾಪ್‌ ಮಾಡಲು ಪ್ಲ್ಯಾನ್‌ ರಪಿಸಿದ್ದರು. ಛಟ್ಟಾ ರೈಲ್ ಚೌಕ್ ಬಳಿ ತನ್ನ ತಾಯಿಯಿಂದ ಸ್ವಲ್ಪ ದೂರದಲ್ಲಿ ಈ ಶಿಶು ಮಲಗಿರುವುದನ್ನು ಅವರು ಕಂಡಿದ್ದರು. ಅವರನ್ನು ತಮ್ಮ ಮಗನಂತೆ ನೋಡಿಕೊಳ್ಳಲು ಅಪಹರಿಸಿದ್ದಾರೆ ಎಂದು ಕಲ್ಸಿ ಹೇಳಿದ್ದಾರೆ.

ಬಂಧನಕ್ಕೆ ಹೆದರಿ ಕ್ರಿಮಿನಾಶಕ ಸೇವಿಸಿದ ಆರೋಪಿ; ಮಂಗಳೂರು ಜಿಲ್ಲಾಸ್ಪತ್ರೆಗೆ ದಾಖಲು!

ಸಂಜಯ್ ಈ ಹಿಂದೆ ಮೂರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಪಹರಣಕ್ಕೊಳಗಾದ ಮಗುವಿನ ತಾಯಿ ಎರಡೂ ಕೈ ಮತ್ತು ಕಾಲುಗಳಿಗೆ ಅಂಗವೈಕಲ್ಯ ಹೊಂದಿದ್ದು, ತಂದೆ ಚಿಂದಿ ಆಯುವವರಾಗಿದ್ದಾರೆ. ದಂಪತಿಗಳು ನಿರಾಶ್ರಿತರಾಗಿದ್ದಾರೆ ಮತ್ತು ಛಟ್ಟಾ ರೈಲ್ ಚೌಕ್ ಬಳಿಯ ಫುಟ್‌ಪಾತ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಧುರೈ ರೈಲು ನಿಲ್ದಾಣದಲ್ಲಿ ಹೊತ್ತಿ ಉರಿದ ಭೋಗಿ, ಕನಿಷ್ಠ 10 ಮಂದಿ ಸಾವು