ವಿಮೆ ಹಣಕ್ಕಾಗಿ ತನ್ನ ಹತ್ಯೆಗೆ ತಾನೇ ಸುಪಾರಿ ಕೊಟ್ಟಉದ್ಯಮಿ!|  ಕೈಗಳನ್ನು ಕಟ್ಟಿಹಾಕಿ ಮರಕ್ಕೆ ನೇಣುಹಾಕಿದ ರೀತಿಯಲ್ಲಿ ಮೃತದೇಹ

ನವದೆಹಲಿ(ಜೂ.16): ಬೇರೆಯವರ ಹತ್ಯೆಗೆ ಸುಪಾರಿಕೊಟ್ಟು ಕೊಲೆ ಮಾಡಿಸುವುದನ್ನು ನೋಡಿದ್ದೇವೆ. ಆದರೆ, ದೆಹಲಿಯ ಉದ್ಯಮಿಯೊಬ್ಬ ವಿಮೆ ಹಣಕ್ಕಾಗಿ ಬಾಡಿಗೆ ಹಂತಕರಿಂದ ತಾನೇ ಕೊಲೆಯಾದ ವಿಚಿತ್ರ ಘಟನೆ ದೆಹಲಿಯಲ್ಲಿ ನಡೆದಿದೆ. ದಿನಸಿ ವ್ಯಾಪಾರಿ ಗೌರವ್‌ ಎಂಬಾತ ಕೊಲೆಯಾದ ವ್ಯಕ್ತಿ ಆಗಿದ್ದು, ದೆಹಲಿಯ ಹೊರವಲಯದ ರನ್‌ಹೌಲಾ ಎಂಬಲ್ಲಿ ಕೈಗಳನ್ನು ಕಟ್ಟಿಹಾಕಿ ಮರಕ್ಕೆ ನೇಣುಹಾಕಿದ ರೀತಿಯಲ್ಲಿ ಮೃತದೇಹ ಜೂ.10ರಂದು ಪತ್ತೆಯಾಗಿದೆ.

ಅಂಗಡಿಯಿಂದ ಪತಿ ಮನೆಗೆ ಬಾರದೇ ಇದ್ದಾಗ ಪತ್ನಿ ಶಾನು ಬನ್ಸಲ್‌ ಜೂ.10ರಂದು ಪೊಲೀಸರಿಗೆ ದೂರು ನೀಡಿದ್ದಳು. ಪತಿಗೆ 6 ಲಕ್ಷ ರು. ಸಾಲ ಇದ್ದು, 3.5 ಲಕ್ಷ ರು. ಮೊತ್ತದ ಕ್ರೆಡಿಟ್‌ ಕಾರ್ಟ್‌ ವಂಚನೆಯ ಬಲಿಪಶು ಆಗಿದ್ದ ಸಂಗತಿಯನ್ನು ತಿಳಿಸಿದ್ದಳು.

ಈ ಕುರಿತು ತನಿಖೆ ನಡೆಸಿದ್ದ ಪೊಲೀಸರು, ಗೌರವ್‌ನ ಮೊಬೈಲ್‌ ಕರೆಗಳನ್ನು ಪರಿಶೀಲಿಸಿದಾಗ, ಆತ ಅಪ್ರಾಪ್ತ ಬಾಲಕನೊಬ್ಬನ ಜೊತೆ ಹಲವು ಬಾರಿ ಮಾತನಾಡಿದ್ದು ಬೆಳಕಿಗೆ ಬಂದಿತ್ತು. ಆತನ ಪತ್ತೆ ಮಾಡಿ ಪರಿಶೀಲಿಸದಾಗ ಸ್ವತಃ ಗೌರವ್‌ ತನ್ನ ಹತ್ಯೆಗೆ ತಾನೇ ಸುಪಾರಿ ಕೊಟ್ಟಿದ್ದ ವಿಷಯ ಬೆಳಕಿಗೆ ಬಂದಿದೆ. ಹಂತರಿಗೆ ತನ್ನ ಪರಿಚಯ ಸಿಗಲು, ತಾನೇ ಅವರಿಗೆ ಮೊಬೈಲ್‌ನಲ್ಲಿ ತನ್ನ ಫೋಟೋವನ್ನು ಗೌರವ್‌ ಕಳುಹಿಸಿದ್ದು ಕೂಡಾ ಕಂಡುಬಂದಿದೆ.